ಬಂಡೇ ಮಠದ ಶ್ರೀಗಳ ಆತ್ಮಹತ್ಯೆ ಪ್ರಕರಣ: 3 ಡೆತ್‌ನೋಟ್ ಪತ್ತೆ, 20ಕ್ಕೂ ಹೆಚ್ಚು ಜನರ ವಿಚಾರಣೆ
ರಾಮನಗರ, ಅಕ್ಟೋಬರ್ 27: ದಿನೇ ದಿನೇ ರಾಜ್ಯದ ಗಮನ ಸೆಳೆಯುತ್ತಿರುವ ಮಾಗಡಿ ತಾಲ್ಲೂಕಿನ ಕದೂರು ಹೋಬಳಿಯ ಕಂಚುಗಲ್ ಬಂಡೇ ಮಠದ ಶ್ರೀ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ದಿನಕ್ಕೂಂದು ತಿರುವು ಪಡೆಯುತ್ತಿದ್ದು, ಅಂತೆ ಕಂತೆಗಳ ಸಾಲು ಬೆಳೆಯುತ್ತಿರುವ ಬೆನ್ನಲ್ಲೇ ಪೋಲಿಸರು 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.
ಬಂಡೆ ಮಠದ ಶ್ರೀಗಳ ಆತ್ಮಹತ್ಯೆ ಪ್ರಕರಣ ಸಂಬಂದ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು, ಪ್ರಕರಣ ಸಂಬಂಧ ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಕರೆದು ವಿಚಾರಣೆ ನಡೆಸಿದ್ದೇವೆ. ಪ್ರಾಥಮಿಕ ಹಂತದಲ್ಲಿ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಗಳ ಸಾವಿನಲ್ಲಿ ಯಾರದೇ ಕೈವಾಡ ಇದ್ದರು ಕೂಡ ತನಿಖೆ ನಡೆಸಿ ತಪ್ಪಿತ್ತಸ್ಥರನ್ನು ಪತ್ತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಂಚುಗಲ್ ಬಂಡೇ ಮಠದ ಶ್ರೀಗಳ ಆತ್ಮಹತ್ಯೆ: ಹನಿ ಟ್ರ್ಯಾಪ್ಗೆ ಪುಷ್ಟಿ ನೀಡಿದ ವಿಡಿಯೊ ಕಾಲ್
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಶ್ರೀಗಳ ವಿಡಿಯೋ ಬಗ್ಗೆ ಕೂಡ ತನಿಖೆ ಮಾಡಲಾಗುವುದು. ವಿಡಿಯೋ ಮಾಡಿಕೊಂಡಿರುವವರು ಮುಂದೊಂದು ದಿನ ಆ ವಿಡಿಯೋವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಯೇ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಸಂಭಾಷಣೆಯಲ್ಲಿರುವ ಯುವತಿಯ ಸೇರಿದ ಕೆಲವೊಂದು ಸಾಕ್ಷಾಧಾರಗಳನ್ನು ಹುಡುಕುತ್ತಿದ್ದೇವೆ. ಅಲ್ಲದೇ ಶ್ರೀಗಳ ಮೊಬೈಲ್‌ನಲ್ಲಿದ್ದ ಕಾಲ್ ಡಿಟೇಲ್ ಮೂಲಕ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಸಂತೋಷ ಬಾಬು ತಿಳಿಸಿದರು.

ಆತ್ಮಹತ್ಯೆಗೆ ಮುನ್ನ ಮೂರು ಡೆತ್ ನೋಟ್
ಕಂಚುಗಲ್ ಬಂಡೇ ಮಠದ ಶ್ರೀಗಳು ಆತ್ಮಹತ್ಯೆ ಮೂದಲು ಮೂರು ಡೆತ್ ನೋಟ್ ಬರೆದಿದ್ದರು ಎಂಬ ಅಂಶ ಬಹಿರಂಗೊಂಡಿದೆ. ಶ್ರೀಗಳ ಅತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪೊಲೀಸರಿಗೆ ಅಡ್ರೆಸ್ ಮಾಡಿ ಶ್ರೀಗಳು ಬರೆದಿದ್ದ ಮೂರು ಪುಟಗಳ ಒಂದು ಡೆತ್ ನೋಟ್ ಸಿಕ್ಕಿತ್ತು. ನಂತರದಲ್ಲಿ ಇನ್ನೂಂದು ಮೂರು ಪುಟಗಳ ಡೆತ್ ನೋಟ್ ಶ್ರೀಗಳ ಕೂಠಡಿಯ ಕಿಟಕಿ ಪಕ್ಕದ ಬಂಡೆ ಬಳಿ ಸಿಕ್ಕಿದ್ದೆ. ಎರಡು ಡೆತ್ ನೋಟ್‌ಗಳ ವಿಷಯದಲ್ಲಿ ಸಾಮ್ಯತೆ ಇದೆ. ಕೊಠಡಿಯ ಹೊರಗೆ ಸಿಕ್ಕ ಡೆತ್ ನೋಟ್ ಶ್ರೀಗಳು ಮೊದಲು ಬರೆದು ಅದನ್ನ ಹರಿದು ಕಿಟಕಿಯಲ್ಲಿ ಬಿಸಾಡಿದ್ದಾರೆ ಹಾಗಾಗಿ ತಪಾಸಣೆ ವೇಳೆ ಡೆತ್ ನೋಟ್ ಪೋಲಿಸರಿಗೆ ಸಿಕ್ಕಿದೆ.
ನಂತರ ಮಾಧ್ಯಮಗಳಲ್ಲಿ ಡೆತ್ ನೋಟ್ ವೈರಲ್ ಆದನಂತರ ತನಿಖೆ ಕೈಗೊಂಡ ಪೋಲಿಸರಿಗೆ ಮತ್ತೊಂದು ಡೆತ್ ನೋಟ್ ಸಿಕ್ಕಿದೆ. ವೈರಲ್ ಆದ ಡೆತ್‌ನೋಟ್ ಮೊದಲು ಮಠದ ಸಿಬ್ಬಂದಿಗೆ ಸಿಕ್ಕಿದೆ, ಅದನ್ನು ಶ್ರೀಗಳು ಭಕ್ತರು ಮತ್ತು ಇತರೆ ಶ್ರೀಗಳ ಕುರಿತು ಬರೆದಿದ್ದರು ಎನ್ನಲಾಗಿದೆ. ಸದ್ಯಕ್ಕೆ ಮೂರು ಡೆತ್ ನೋಟ್‌ಗಳನ್ನೂ ವಶಕ್ಕೆ ಪಡೆದಿದ್ದೇವೆ ಎಂದು ಎಸ್ಪಿ ಸಂತೋಷ ಬಾಬು ತಿಳಿಸಿದರು.

ಡೆತ್ ನೋಟ್ ವೈರಲ್ ವಿಚಾರದಲ್ಲಿ ಪತ್ರಕರ್ತರ ವಿಚಾರಣೆ
ಸಾಮಾಜಿಕ ಜಾಲ ತಾಣ ಸೇರಿದಂತೆ ಹಲವೆಡೆ ವೈರಲ್ ಆದ ಶ್ರೀಗಳ ಡೆತ್ ನೋಟ್ ಹಾಗೂ ಪೋಲಿಸರಿಗೆ ಸಿಕ್ಕ ಡೆತ್ ನೋಟ್‌ಗಳ ಹಸ್ತಾಕ್ಷರದಲ್ಲಿ ಸಾಮ್ಯತೆ ಕಂಡುಬಂದಿದೆ. ಹಾಗಾಗಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಲಾಗಿದ್ದರಿಂದ ನೆಲಮಂಗಲ ಮೂಲದ ಇಬ್ಬರು ಪತ್ರಕರ್ತರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಇಬ್ಬರು ಪತ್ರಕರ್ತರು ವಿಚಾರಣೆ ನಂತರ ಶ್ರೀಗಳು ಭಕ್ತರು ಮತ್ತು ಇತರೆ ಮಠದ ಶ್ರೀಗಳಿಗೆ ಕುರಿತು ಬರೆದಿದ್ದ ಮೂರನೇ ಡೆತ್ ನೋಟ್ ಇರುವ ಮಾಹಿತಿ ಬಹಿರಂಗಗೊಂಡಿದೆ.

ಮಾಗದಿ ಸಿಪಿಐರಿಂದ ತನಿಖೆ
ಕಂಚುಗಲ್ ಬಂಡೇ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ಅಸಹಜ ಸಾವು ಎಂದು ಕುದೂರು ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಈ ಪ್ರಕರಣವನ್ನು. ಮಾಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಾಗಡಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಶ್ರೀಗಳ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡ ಇರುವ ಹಿನ್ನಲೆಯಲ್ಲಿ ಕುದೂರು ಪೋಲಿಸರು ಸ್ವಯಂ ಪ್ರೇರಿದ ದೂರು ದಾಖಲಿಸಿಕೊಂಡಿದ್ದರು. ಮುಂದಿನ ತನಿಖೆಯನ್ನು ಮಾಗಡಿ ಸಿಪಿಐ ನಡೆಸಲಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ..

ಮಠದ ಆವರಣದಲ್ಲಿ ಕೆಲವರನ್ನು ವಿಚಾರಣೆ
ಶ್ರೀಗಳು ಆತ್ಮಹತ್ಯೆಗೆ ಶರಣಾಗಿ ನಾಲ್ಕು ದಿನಗಳು ಕಳೆದಿದ್ದು ನಮ್ಮ ಪೋಲಿಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಶ್ರೀಗಳೊಂದಿಗೆ ಒಡನಾಟ ಹೊಂದಿದ್ದ ವ್ಯಕ್ತಿಗಳ ವಿಚಾರಣೆ ನಡೆಸಿದ್ದೇವೆ. ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಕೂಡಾ ಕಲೆ ಹಾಕಲಾಗುತ್ತಿದೆ. ಪ್ರಕರಣ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಮಠದ ಆವರಣದಲ್ಲಿ ಕೆಲವರನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದೇವೆ ಹಾಗೂ ಇನ್ನೂ ಕೆಲವರನ್ನು ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಅವರಿಂದಲ್ಲೂ ಮಾಹಿತಿ ಪಡೆಯುತಿದ್ದೇವೆ ಎಂದು ಸಂತೋಷ್ ಬಾಬು ಸ್ಪಷ್ಟಪಡಿಸಿದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777