ರಾಮನಗರದಲ್ಲಿ "ಗೋ ಬ್ಯಾಕ್ ಅಶ್ವತ್ಥ್ ನಾರಾಯಣ್ ಅಭಿಯಾನ", ಬೀದಿಗೆ ಬಂದ ಬಿಜೆಪಿಯ ಒಳ ಜಗಳ
ರಾಮನಗರ, ಫೆಬ್ರವರಿ, 19: ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ "ಗೋ ಬ್ಯಾಕ್ ಆಶೋಕ್" ಅಭಿಯಾನ ನಡೆದಿತ್ತು. ಇದರ ಪರಿಣಾಮ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಸಚಿವ ಆರ್. ಅಶೋಕ್ ಕೆಳಗಿಳಿದಿದ್ದರು. ಇದರ ಬೆನ್ನಲೇ ಇದೀಗ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, "ಅಶ್ವತ್ಥ್ ನಾರಾಯಣ್ ಗೋ ಬ್ಯಾಕ್" ಅಭಿಯಾನ ಪ್ರಾರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಗೋ ಬ್ಯಾಕ್ ಅಭಿಯಾನ ಪ್ರಾರಂಭದಿಂದಾಗಿ ಬಿಜೆಪಿ ಪಾಳಯದ ಒಳ ಜಗಳ ಬೀದಿಗೆ ಬಂದಿದೆ. ಒಂದು ಕಡೆ ಬಿಜೆಪಿ ವರಿಷ್ಠರು ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿದರೆ, ಜಿಲ್ಲೆಯ ಬಿಜೆಪಿ ಪಾಳಯದಲ್ಲಿ 23ರ ಸಾರ್ವತ್ರಿಕ ಚುನಾವಣೆಯ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಗುಂಪುಗಾರಿಕೆ ಪ್ರಾರಂಭವಾಗಿದೆ. ಇದರಿಂದ ಜಿಲ್ಲೆಯಲ್ಲಿ ಕಮಲ ಅರಳಿಸುವ ವರಿಷ್ಟರ ಆಸೆಗೆ ಭಂಗ ಬಂದಂತಾಗಿದೆ.
ರಾಜಕೀಯ ಕೇಂದ್ರ ಬಿಂದುವಾದ ರಾಮನಗರ ಕ್ಷೇತ್ರ: ಜೆಡಿಎಸ್, ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ತಂತ್ರ
ಗೋ ಬ್ಯಾಕ್ ಅಶ್ವತ್ಥ್ ನಾರಾಯಣ್ ಅಭಿಯಾನ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ವಿರುದ್ಧ ಬಿಜೆಪಿ ಮುಖಂಡರು "ಗೋ ಬ್ಯಾಕ್ ಅಶ್ವತ್ಥ್ ನಾರಾಯಣ್" ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಇಂದು ನಗರದ ಪಂಚಮುಖಿ ಆಂಜನೇಯ ದೇವಸ್ಥಾನ ಅವರಣದಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವ ಕೆಲಸ ಮಾಡದೇ ಕೇವಲ ಒಬ್ಬ ವ್ಯಕ್ತಿಗೆ ಮಣೆ ಹಾಕುವ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ಮೂಲಕ ಗುಂಪುಗಾರಿಕೆ ಹುಟ್ಟು ಹಾಕಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆರೋಪಿಸಿದರು.
ಅಶ್ವತ್ಥ್ ನಾರಾಯಣ್ ವಿರುದ್ಧ ಆಕ್ರೋಶ
ಪಕ್ಷದ ಸಂಘಟನೆಗೆ ಶ್ರಮಿಸಿದ ಹಲವಾರು ನಿಷ್ಠಾವಂತ ಮುಖಂಡರನ್ನು ಕಡೆಗಣಿಸಿ ಜೆಡಿಎಸ್ ಪಕ್ಷದಿಂದ ಪಕ್ಷಾಂತರ ಮಾಡಿದ ಗೌತಮ್ ಗೌಡ ಎಂಬುವರಿಗೆ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅಲ್ಲದೇ, ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರದ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅಪ್ತ, ಚಂದ್ರಮೌಳೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಗೋವಿಂದ ರಾಜು ಹಾಗೂ ಮತ್ತೊಬ್ಬ ಟಿಕೆಟ್ ಅಕಾಂಕ್ಚಿ ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನರೇಂದ್ರ ಭಾಗಿಯಾಗಿದ್ದರು.












Click it and Unblock the Notifications