ಚನ್ನಪಟ್ಟಣ ನಗರಸಭೆ ಆಡಳಿತ ಯಾರಿಗೆ?, ಚುನಾವಣೆ ಲೆಕ್ಕಾಚಾರ
ರಾಮನಗರ, ನವೆಂಬರ್ 07; ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕಡೆಗೂ ಮುಹೂರ್ತ ಕೂಡಿ ಬಂದಿದೆ. ನವೆಂಬರ್ 8ರ ಸೋಮವಾರ ಚುನಾವಣೆ ನಿಗದಿಯಾಗಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಸಹ ಚುರುಕಾಗಿದ್ದು, ತೆರೆಮೆರೆಯಲ್ಲೇ ಕಸರತ್ತು ಆರಂಭಿಸಿದ್ದಾರೆ.
ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಏಪ್ರಿಲ್ 27ರಂದೇ ನಗರಸಭೆಗೆ ಚುನಾವಣೆ ನಡೆದಿತ್ತಾದರೂ ಕೋವಿಡ್ ಕಾರಣದಿಂದಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಿರಲಿಲ್ಲ.
ಈಗ ಚುನಾವಣೆ ನಡೆದ ಏಳು ತಿಂಗಳ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕಾಲ ಕೂಡಿ ಬಂದಿದೆ. ಎಲ್ಲರ ಚಿತ್ತ ನಗರಸಭೆಯತ್ತ ನೆಟ್ಟಿದೆ. ಏಪ್ರಿಲ್ ತಿಂಗಳಿನಲ್ಲಿ ನಗರಸಭೆಗೆ ಚುನಾವಣೆ ನಡೆದಿತ್ತು. ಬಹುತೇಕ ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಚುನಾವಣೆಯಲ್ಲಿ ಹೆಚ್ಚಿನ ವಾರ್ಡ್‌ಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು.

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ 16 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಒಬ್ಬ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ದಂಡು; ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅಧ್ಯಕ್ಷ ಗಾದಿಗಾಗಿ ಜೆಡಿಎಸ್‌ನಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ. 14ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿರುವ ಶ್ರೀನಿವಾಸ್‌ಮೂರ್ತಿ, 26ನೇ ವಾರ್ಡ್‌ನ ಪ್ರಶಾಂತ್, 12ನೇ ವಾರ್ಡ್‌ನ ಲೋಕೇಶ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ಅಧ್ಯಕ್ಷ ಗಾದಿಗೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್‌ನ ಸತೀಶ್ ಬಾಬು ಪ್ರಬಲ ಆಕಾಂಕ್ಷಿ. ಉಳಿದಂತೆ ಲಕ್ಷಮ್ಮ ಮತ್ತು ರಿಫೀಕ್ ಸಹ ರೇಸ್‌ನಲ್ಲಿದ್ದಾರೆ. ಎಲ್ಲಾ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರಗಳನ್ನು ನಡೆಸಿದ್ದು, ವರಿಷ್ಠರ ಮನಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮೈತ್ರಿ?; ಇನ್ನು ನಗರಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಚುಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್ ನಗರಸಭೆ ಸದಸ್ಯರ ತಂಡವೊಂದು ವಿಧಾನಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಭೇಟಿ ಮಾಡಿದೆ ಎಂಬ ಸುದ್ದಿ ಇದೆ. ಕಾಂಗ್ರೆಸ್ ಸದಸ್ಯರ ಭೇಟಿ ಹಿಂದೆ ಹೊಸ ರಾಜಕೀಯ ಲೆಕ್ಕಾಚಾರಗಳು ಹುಟ್ಟಿಕೊಂಡಿದೆ. ಈ ವದಂತಿಗೆ ಪೂರಕವಾಗಿ ಸಿ. ಪಿ. ಯೋಗೀಶ್ವರ್ ಖಾಸಗಿ ಕಾರ್ಯಕ್ರಮಗಳ ನೆಪದಲ್ಲಿ ಕ್ಷೇತ್ರದಲ್ಲೇ ಬಿಡುಬಿಟ್ಟಿದ್ದಾರೆ. ಈ ಪ್ರಯತ್ನವೇನಾದರೂ ಸಫಲವಾದರೆ ನಗರಸಭೆ ಅಖಾಡ ರಂಗೇರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ ಸ್ಪಷ್ಟ ಬಹುಮತ ಜೆಡಿಎಸ್‌ಗೆ ಇದೆಯಾದರೂ ರಾಜಕೀಯದಲ್ಲಿ ಕಡೇ ಕ್ಷಣದಲ್ಲಿ ಏನಾದರೂ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಜೆಡಿಎಸ್‌ಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರನ್ನು ಒಗ್ಗೂಡಿಸಿಕೊಂಡು ಅಧಿಕಾರ ಹಿಡಿಯುವ ಕುರಿತು ಪ್ರಯತ್ನಗಳು ಸದ್ದಿಲ್ಲದೇ ನಡೆಯುತ್ತಿವೆ ಎಂಬ ಸುದ್ದಿಯೂ ಇದೆ.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ತಲಾ 7 ಸ್ಥಾನಗಳಲ್ಲಿ ಜಯಗಳಿಸಿದ್ದು, ಇವರ ಜೊತೆ 30ನೇ ವಾರ್ಡ್ ಪಕ್ಷೇತರ ಸದಸ್ಯೆಯನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರಗಳು ನಡೆಯುತ್ತಿವೆ. ಚುನಾವಣೆಯಲ್ಲಿ ಸದಸ್ಯರ ಜತೆ ಕ್ಷೇತ್ರದ ಶಾಸಕರು, ಸಂಸದರು ಮತದಾನದ ಹಕ್ಕು ಹೊಂದಿದ್ದಾರೆ. ಇದರೊಂದಿಗೆ ವಿಧಾನಪರಿಷತ್ ಸದಸ್ಯರು ಸಹ ಯಾವುದಾರೂ ಒಂದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆಯಬಹುದಾಗಿರುತ್ತದೆ.
ಕಾಂಗ್ರೆಸ್-ಬಿಜೆಪಿ ಪಕ್ಷೇತರ ಅಭ್ಯರ್ಥಿ ಜತೆಗೆ ವಿಧಾನಪರಿಷತ್ ಸದಸ್ಯರಾದ ಯೋಗೀಶ್ವರ್ ಮತ್ತು ಸಂಸದ ಡಿ. ಕೆ. ಸುರೇಶ್ ಮತಗಳನ್ನು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.
ದಳಪತಿ ಅಂಗಳದಲ್ಲಿ ಚೆಂಡು: ನಗರಸಭೆಯಲ್ಲಿ ಜೆಡಿಎಸ್ 16 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, ಈ ಬಾರಿ ಜೆಡಿಎಸ್ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಾಗಿ ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.
ಯಾರೂ ಏನೇ ಹೇಳಿದರೂ ಮಾಜಿ ಮುಖ್ಯಮಂತ್ರಿಗಳು ಮತ್ತು ಕ್ಷೇತ್ರದ ಶಾಸಕರು ಆದ ಎಚ್. ಡಿ. ಕುಮಾರಸ್ವಾಮಿ ತೀರ್ಮಾನವೇ ಅಂತಿಮವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಸೋಮವಾರ ಅಂತಿಮವಾಗಲಿದೆ.
ಎಚ್. ಡಿ. ಕುಮಾರಸ್ವಾಮಿ ಕೃಪಾಕಟಾಕ್ಷ ಯಾರಿಗೆ ಒಲಿಯದೆ? ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಪ್ರವಾಸದಲ್ಲಿರುವ ಜೆಡಿಎಸ್ ಸದಸ್ಯರು ಸೋಮವಾರ ಮತದಾನದ ವೇಳೆಗೆ ಚನ್ನಪಟ್ಟಣಕ್ಕೆ ವಾಪಸ್ ಆಗಲಿದ್ದಾರೆ.












Click it and Unblock the Notifications