ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚಿದ ಅಪಘಾತ: ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿ ಪರಿಶೀಲನೆ
ರಾಮನಗರ ಜೂನ್ 27: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮರಣದ ಹೆದ್ದಾರಿ ಎಂಬ ಕುಖ್ಯಾತಿ ಪಡೆದ ಹಿನ್ನಲೆಯಲ್ಲಿ ಅಪಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಫೀಲ್ಡಿಗಿಳಿದಿದ್ದು, ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ಪ್ರೆಸ್ ಹೈವೇ ಪರಿಶೀಲನೆ ನಡೆಸಿದ್ದಾರೆ.
ಕುಂಬಳಗೂಡಿನ ಬಾಬುಸಾಬರಪಾಳ್ಯದಿಂದ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪರಿಶೀಲನೆ ಆರಂಭಿಸಿದ್ದು, ಅಪಘಾತ ಸಂಖ್ಯೆ ಹೆಚ್ಚಳದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೇಗೌಡ, ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತಿರುವ ಡಿಬಿಎಲ್ ಕಂಪನಿ ಅಧಿಕಾರಿಗಳು ಕೂಡ ಹೆದ್ದಾರಿ ಪರಿಶೀಲನೆಯಲ್ಲಿ ಭಾಗಿಯಾಗಿದ್ದಾರೆ.
ಅಪಘಾತ ವಲಯಗಳು ಎಂದು ಗುರುತಿಸಲಾಗಿರುವ ಈ ಕೆಳಕಂಡ ಸ್ಥಳಗಳಲ್ಲಿ ಪರಿಶೀಲನೆ
ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾಸಾಹೇಬರ ಪಾಳ್ಯ, ಐ.ಬಿ.ಎಸ್ ಕಾಲೇಜ್ ಮುಂಭಾಗ, ಅಂಚೆಪಾಳ್ಯ, ರಾಮೋಹಳ್ಳಿ ಕ್ರಾಸ್, ಹಾಗೂ ಕಣಿಮಿಣಿಕ, ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ, ಶೇಷಗಿರಿಹಳ್ಳಿ, ವಂಡರ್-ಲಾ ಗೇಟ್, ಹನುಮಂತನಗರ (ಕೋತಿ ಆಂಜನೇಯಸ್ವಾಮಿ ದೇವಸ್ಥಾನ) ರಾಮನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಗಾನಹಳ್ಳಿ, ಎಸ್.ಬಿ ದೊಡ್ಡಿ ಮಧುರ ಗಾರ್ಮೆಂಟ್ಸ್ ಮುಂಭಾಗ (ಬಸವನಪರ ಮೇಲ್ ಸೇತುವೆ), ದ್ಯಾವರಸೇಗೌಡನದೊಡ್ಡಿಯಿಂದ ಕೊಂಕಣಿದೊಡ್ಡಿವರೆಗೆ, ಜಯಪುರ ಸೇತುವೆ, ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಲಂಬಾಣಿ ತಾಂಡ್ಯ, ದೇವರಹೊಸಹಳ್ಳಿ ಗೇಟ್, ತಿಟ್ಟಮಾರನಹಳ್ಳಿ ಬೈ-ಪಾಸ್ ರಸ್ತೆ, ಸಂಕಲಗೆರೆ ಗೇಟ್, ಪುಟ್ಟಪ್ಪನದೊಡ್ಡಿ ಗೇಟ್‌ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ತಂಡ ಹೆದ್ದಾರಿ ಪರಿಶೀಲನೆ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿ ಪ್ರಾರಂಭವಾದ ದಿನದಿಂದ 568 ಅಪಘಾತಗಳು ಸಂಭವಿಸಿದ್ದು, 158ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇನ್ನು ನೂರಾರು ಮಂದಿ ಹೆದ್ದಾರಿ ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಅವೈಜ್ಞಾನಿಕ ರಸ್ತೆ ನಿರ್ಮಾಣದ ಬಗ್ಗೆ ಹೆದ್ದಾರಿ ಪ್ರಾಜೆಕ್ಟ್ ಡೈರೆಕ್ಟರ್ ರಾಹುಲ್ ಗುಪ್ತ ಹಾಗೂ ಇತರರಿಂದಸ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಹೆದ್ದಾರಿಯಲ್ಲಿ ಕೆಲವೆಡೆ ಇಂಜಿನಿಯರಿಂಗ್ ಲೋಪದೋಷಗಳ ಸರಿಪಡಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ.












Click it and Unblock the Notifications