Garlic Fraud: ಬೆಳ್ಳುಳ್ಳಿ ಖರೀದಿ ವ್ಯಾಪಾರಿಗೆ 2.25 ಲಕ್ಷ ಪಂಗನಾಮ- ಆನ್‌ಲೈನ್ ವ್ಯವಹಾರ, ಯಾವಾರಿದರೆ ಸಂಹಾರ
ರಾಮನಗರ ಜೂನ್ 9: ಬೆಳ್ಳುಳ್ಳಿ ವ್ಯಾಪಾರಿಗೆ 2.25 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ರಾಮನಗರದಲ್ಲಿ ನಡೆದಿದೆ. ಬೆಳ್ಳುಳ್ಳಿ ವ್ಯಾಪಾರ ಮಾಡಲು ಹೋಗಿ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾನೆ.
ಕನಕಪುರ ನಗರದ ಪೈಪ್ ಲೈನ್ ರಸ್ತೆಯಲ್ಲಿನ ಅಜೀಜ್ ನಗರ ಬಡಾವಣೆಯ ವಾಸಿಯಾಗಿರುವ ಖಾಲಿದ್ ಖಾನ್ ವಂಚನೆಗೊಳಗಾದ ವ್ಯಕ್ತಿ. ಕಬ್ಬಿಣದ ವ್ಯಾಪಾರಿಯಾದ ಖಾಲಿದ್ ಖಾನ್ ಬೆಳ್ಳುಳ್ಳಿ ವ್ಯಾಪಾರ ಮಾಡಲು ಕಿಸಾನ್ ಡೀಲ್ಸ್ ಆಪ್‌ನಲ್ಲಿ ತಮ್ಮ ಫೋನ್ ನಂಬರ್ ಹಾಗೂ ಐದು ಟನ್ ಬೆಳ್ಳುಳ್ಳಿ ವ್ಯಾಪಾರಕ್ಕಾಗಿ ಬೇಕೆಂದು ಆಪ್ ಲೋಡ್ ಮಾಡಿದ್ದರು.

ವಂಚಕನೊಬ್ಬ ಖಾಲಿದ್ ಖಾನ್ ಮೊಬೈಲ್‌ಗೆ ಪೋನ್ ಮಾಡಿ ತನ್ನ ಹೆಸರು ಲೋಕೇಶ್, ಸತ್ಯಸಾಯಿ ಎಂಟರ್‌ಪ್ರೈಸಸ್‌ನ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ, ಆಂಧ್ರದ ಗಂಟೂರಿನಲ್ಲಿ ತಮ್ಮ ಕಂಪನಿಯಿದ್ದು, ನಿಮಗೆ 2.5 ಟನ್ ಬೆಳ್ಳುಳ್ಳಿಯನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಆಗ ಖಾಲಿದ್ ಸ್ಯಾಂಪಲ್‌ಗಾಗಿ ಬೆಳ್ಳುಳ್ಳಿಯ ಫೋಟೋ ವಾಟ್ಸಾ ಆಪ್‌ಗೆ ತರಿಸಿಕೊಂಡು ನೋಡಿದ್ದಾರೆ. ಬೆಳ್ಳುಳ್ಳಿ ಕೊಳ್ಳಲು ಒಪ್ಪಿ 50 ಸಾವಿರ ರೂಪಾಯಿ ವಂಚಕ ಹೇಳಿದಂತೆ ಗೂಗಲ್ ಪೇ ಮಾಡಿದ್ದಾರೆ. ನಂತರ ಇನ್ ವಾಯ್ಸ್ ಕಳುಹಿಸಿ ಮತ್ತೆ ಹಣ ಕೇಳಿದಾಗ 50 ಸಾವಿರ ವರ್ಗಾವಣೆ ಮಾಡಿದ್ದಾರೆ.

2.25 ಟನ್ ಬೆಳ್ಳುಳ್ಳಿ ಸೌತ್ ಎಂಡಿಯಮ್ ಟ್ರಾನ್ಸ್ ಪೋರ್ಟ್‌ಗೆ ಲೋಡ್ ಮಾಡಿರುವುದಾಗಿ ಹೇಳಿ ಟ್ರಾನ್ಸ್ ಪೋರ್ಟ್ ಬಿಲ್ ಕಳುಹಿಸಿ ಮತ್ತೆ ಹಣ ಕೇಳಿದಾಗ ಖಾಲಿದ್ ಅವರು 15 ಸಾವಿರ ರೂಪಾಯಿ ಕಳುಹಿಸಿದ್ದಾರೆ. ಆನಂತರ ಮತ್ತೊಬ್ಬ ವ್ಯಕ್ತಿ ತಾನು ಸೌತ್ ಇಂಡಿಯನ್ ಟ್ರಾನ್ಸ್ ಪೋರ್ಟ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಪೂರ್ಣ ಹಣ ಕಳುಹಿಸಿದರೇ ಮಾತ್ರ ಬೆಳ್ಳುಳ್ಳಿ ಲೋಡ್ ಅನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಆಗಲೂ ಖಾಲಿದ್ 1.10 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಒಂದು ವಾರ ಕಳೆದರೂ ಬೆಳ್ಳುಳ್ಳಿ ಲೋಡ್ ಬರಲಿಲ್ಲ. ಆ ವ್ಯಕ್ತಿಗಳು ಫೋನ್ ಕರೆಯನ್ನು ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಮೋಸ ಹೋದ ಮೇಲೆ ಖಾಲಿದ್ ಖಾನ್ ರಾಮನಗರ ಸಿಐಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿರುವುದರಿಂದ ವ್ಯಾಪಾರಿಗಳು ದಿಲ್ ಖುಷ್ ಆಗಿದ್ದಾರೆ. ಹೀಗಾಗಿ ಬೆಳ್ಳುಳ್ಳಿ ವ್ಯಾಪಾರ ಮಾಡದೇ ಇರುವವರೆಲ್ಲಾ ಬೆಳ್ಳುಳ್ಳಿ ಕೊಂಡು ವ್ಯಾಪಾರ ಶುರು ಮಾಡುತ್ತಿದ್ದಾರೆ. ಆದರೆ ಲಾಭದ ಆಸೆಗೆ ಬಿದ್ದು ಬೆಳ್ಳುಳ್ಳಿ ತರಿಸಿಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ. ವಿಶೇಷವಾಗಿ ಆಪ್ ಮೂಲಕ ಏನಾದರು ಖರೀದಿ ಮಾಡುವ ಮುನ್ನ ಜಾಗೃತರಾಗಿರಿ.












Click it and Unblock the Notifications