ರಾಮನಗರದಲ್ಲಿ ನೋಂದಣಿಗೆ ತಂದಿದ್ದ 15 ಲಕ್ಷ ರುಪಾಯಿ ಹಡಪ್

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್ 26 : ಜಮೀನು ಖರೀದಿಗೆ ಬಂದಿದ್ದವರ ಗಮನ ಬೇರೆಡೆ ಸೆಳೆದು, ಕಾರಿನಲ್ಲಿಟ್ಟಿದ್ದ 15 ಲಕ್ಷ ರುಪಾಯಿ ನಗದು ದೋಚಿ ಪರಾರಿಯಾದ ಘಟನೆ ನಗರದ ಉಪ ನೋಂದಣಾಧಿಕಾರಿ ಕಚೇರಿ ಬಳಿ ಶನಿವಾರ ನಡೆದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಘುನಾಥರೆಡ್ಡಿ ಹಣ ಕಳೆದುಕೊಂಡವರು. ಸಹೋದರಿ ಭಾಗ್ಯಮ್ಮ ಮತ್ತು ಕುಟುಂಬದವರ ಜತೆಗೆ ಜಮೀನಿನ ನೋಂದಣಿಗಾಗಿ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕೆಂಗೇರಿ: 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ ವಶ

ರಘುನಾಥ್ ರೆಡ್ಡಿಯವರು ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ಅದರ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಬಿಡದಿಯ ಇಂಡಿಯನ್ ಬ್ಯಾಂಕ್ ಶಾಖೆಯಿಂದ 15 ಲಕ್ಷ ಹಣವನ್ನು ಡ್ರಾ ಮಾಡಿ, ಬ್ಯಾಗ್‍ನಲ್ಲಿರಿಸಿಕೊಂಡು ಸಹೋದರಿ ಭಾಗ್ಯಮ್ಮ ಜತೆಗೆ ನಗರಕ್ಕೆ ಬಂದಿದ್ದರು.

Car

ಜಮೀನು ನೋಂದಣಿ ಮುಗಿಸಿ, ಉಪ ನೋಂದಣಾಧಿಕಾರಿ ಕಚೇರಿಯಿಂದ ಹಿಂತಿರುಗಿದ್ದರು. ಈ ವೇಳೆ ರಘುನಾಥರೆಡ್ಡಿ ಮತ್ತು ಜತೆಯಲ್ಲಿದ್ದವರು ಕಾರು ಏರುತ್ತಿದ್ದಂತೆ ಹಿಂದಿನಿಂದ ಬಂದ ವ್ಯಕ್ತಿ ಟೈರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾನೆ. ಅವನ ಮಾತು ಕೇಳಿ ಗಾಬರಿಯಿಂದ ಎಲ್ಲರೂ ಕಾರಿನಿಂದ ಇಳಿದು ಬಿಟ್ಟಿದ್ದಾರೆ.

ಇಳಿಯುವ ವೇಳೆ ಹಣವಿದ್ದ ಚೀಲವನ್ನು ಕಾರಿನೊಳಗೆ ಬಿಟ್ಟಿದ್ದಾರೆ. ರಘುನಾಥರೆಡ್ಡಿ ಕಾರಿನ ಟಯರ್ ಪರಿಶೀಲಿಸುತ್ತಿದ್ದರೆ, ಅತ್ತ ಸಹೋದರಿ ಭಾಗ್ಯಮ್ಮ ಸನಿಹದಲ್ಲಿದ್ದ ಪರಿಚಿತರೊಂದಿಗೆ ಮಾತಿಗಿಳಿದಿದ್ದಾರೆ. ರಘುನಾಥರೆಡ್ಡಿ ಅವರು ಪಂಕ್ಚರ್ ಆದ ಟಯರ್ ಬದಲಾಯಿಸುವ ಸಲುವಾಗಿ ಕಾರಿನ ಹಿಂಬದಿಯ ಡಿಕ್ಕಿಯ ಲಾಕ್ ತೆಗೆದಾಗ ಬಾಗಿಲುಗಳು ತೆರೆದುಕೊಂಡಿವೆ.

ಆದರೆ ಇದನ್ನು ರಘುನಾಥರೆಡ್ಡಿ ಗಮನಿಸಿಲ್ಲ. ಕಾರಿನ ಟೈರ್ ಬದಲಾಯಿಸಿ ಇನ್ನೇನು ಹೊರಡೋಣ ಎಂದು ಬಂದಾಗ ಹಣವಿಟ್ಟಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಅದರಲ್ಲಿ 15 ಲಕ್ಷ ಅಲ್ಲದೆ, ಆಧಾರ್, ಚೆಕ್ ಬುಕ್ ಸೇರಿದಂತೆ ಇನ್ನಿತರೆ ದಾಖಲೆ ಪತ್ರಗಳಿದ್ದವು ಎನ್ನಲಾಗಿದೆ.

ದೇಗುಲದ ಹುಂಡಿ ಜತೆಗೆ ಸಿಸಿಟಿವಿ ಕದ್ದೊಯ್ದ ಕಳ್ಳರು!

ಇಷ್ಟಕ್ಕೂ 15 ದಿನಗಳ ಹಿಂದೆಯಷ್ಟೇ ಹೊಸ ಕಾರನ್ನು ಖರೀದಿಸಲಾಗಿತ್ತು. ಇದರ ಟಯರ್ ಹೇಗೆ ಪಂಕ್ಚರ್ ಆಯಿತು ಎಂಬುದು ಸಂಶಯಕ್ಕೆ ಎಡೆ ಮಾಡಿದೆ. ಎಲ್ಲ ವಿಚಾರ ತಿಳಿದ ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿ ಟಯರ್ ಪಂಕ್ಚರ್ ಮಾಡಿ, ಕೈಚಳಕ ತೋರಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ರಘುನಾಥರೆಡ್ಡಿ ನೀಡಿದ ದೂರಿನ ಮೇರೆಗೆ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
15 lakhs rupees looted in Ramanagara from car. Raghunatha Reddy from Bengaluru Electronic city lost money, he came with money for land registration.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ