ಸೊಪ್ಪು ಇನ್ನಷ್ಟು ಅಗ್ಗ: ಹೇಗಿದೆ ರಾಯಚೂರು ಮಾರುಕಟ್ಟೆಯಲ್ಲಿ ತರಕಾರಿ ದರ..?
ರಾಯಚೂರು, ಆಗಸ್ಟ್ 28: ಒಂದೆಡೆ ಹಬ್ಬ ಸೀಜನ್, ಮತ್ತೊಂದೆಡೆ ಮಳೆ ಇಲ್ಲದೇ ಸದ್ಯ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ ಎನ್ನುವಂತಾಗಿದೆ. ಆದರೆ ರಾಯಚೂರು ತರಕಾರಿ ಸಗಟು ಮಾರುಕಟ್ಟೆಯಲ್ಲಿ ಒಂದೆರಡು ತರಕಾರಿ ಬಿಟ್ಟರೆ ಬಹುತೇಕ ಕಾಯಿಪಲ್ಲೆ ದರ ಸ್ಥಿರವಾಗಿದೆ. ಜೊತೆಗೆ ಜನರ ಅಚ್ಚುಮೆಚ್ಚಿನ ಸೊಪ್ಪು ಈ ವಾರ ಇನ್ನಷ್ಟು ಅಗ್ಗವಾಗಿದೆ.
ಕಳೆದ ವಾರ ಪ್ರತಿ ಕೆ.ಜಿಗೆ ₹160ಕ್ಕೆ ಮಾರಾಟವಾಗಿದ್ದ ಬೆಳ್ಳುಳ್ಳಿ ವರಮಹಾಲಕ್ಷ್ಮಿ ಪೂಜೆಯ ವೇಳೆಗೆ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಖಾರ ಎನಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿ ದ್ವಿಶತಕ ಬಾರಿಸಿ ಬೀಗುತ್ತಿದೆ. ಆಲೂಗಡ್ಡೆ, ಮೆಣಸಿನಕಾಯಿ ಗ್ರಾಹಕರ ಹಿತ ಕಾಯ್ದಿವೆ. ಸಗಟು ಮರುಕಟ್ಟೆಯಲ್ಲಿ ಎಲೆಕೋಸು ಪ್ರತಿ ಕ್ವಿಂಟಲ್‌ಗೆ ₹2 ಸಾವಿರ ಹೆಚ್ಚಿಸಿಕೊಂಡು ಅರಳಿದರೆ, ಹಿರೇಕಾಯಿ ಹಿರಿಹಿರಿ ಹಿಗ್ಗಿ ನಿಂತಿದೆ.

ಮಾರುಕಟ್ಟೆಯಲ್ಲಿ ಒಂದು ತಿಂಗಳು ಅಬ್ಬರಿಸಿದ ಟೊಮೆಟೊ ಸ್ವಲ್ಪ ಮೆತ್ತಗಾಗಿದೆ. ಬೀಟ್‌ರೂಟ್, ಬೆಂಡೆಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ಚವಳೆಕಾಯಿ ಬೆಲೆ ಇಳಿಸಿಕೊಂಡಿವೆ. ತರಕಾರಿ ರಾಣಿ ಎಂದೇ ಗುರುತಿಸಿಕೊಂಡ ಸೌತೆಕಾಯಿ ಪ್ರತಿ ಕ್ವಿಂಟಲ್‌ಗೆ ₹2 ಸಾವಿರ ಬೆಲೆ ಹೆಚ್ಚಿಸಿಕೊಂಡಿದೆ.
ತರಕಾರಿ ರಾಜ ಬದನೆಕಾಯಿ, ಎಲೆಕೋಸು, ನುಗ್ಗೆಕಾಯಿ, ಗಜ್ಜರಿ, ಆಲೂಗಡ್ಡೆ, ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದ್ದು, ಗ್ರಾಹಕರ ಕೈಗೆಟುಕುವ ದರದಲ್ಲಿದೆ.
ತರಕಾರಿ ಮಾರುಕಟ್ಟೆಗೆ ಮಹಾರಾಷ್ಟ್ರದ ನಾಗಪುರ ಹಾಗೂ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಆವಕವಾಗಿದೆ. ಬೆಳಗಾವಿ, ಚಿಕ್ಕಬಳ್ಳಾಪುರದಿಂದ ಗಜ್ಜರಿ, ಬೀನ್ಸ್, ರಾಯಚೂರು ಜಿಲ್ಲೆಯ ವಿವಿಧೆಡೆಯಿಂದ ಹಸಿ ಮೆಣಸಿನಕಾಯಿ, ಟೊಮೆಟೊ, ಚವಳಿಕಾಯಿ, ಹೂಕೋಸು ಹಾಗೂ ಸೊಪ್ಪು ಮಾರುಕಟ್ಟೆಗೆ ಬಂದಿದೆ.

'ಜಿಲ್ಲೆಯ ಗ್ರಾಮೀಣ ಪ್ರದೇಶದಿಂದಲೇ ಬಹುತೇಕ ತರಕಾರಿ ರಾಯಚೂರು ಮಾರುಕಟ್ಟೆಗೆ ಬಂದಿದೆ. ನೀರಾವರಿ ಪ್ರದೇಶದಲ್ಲಿ ಬೆಳೆದ ಸೊಪ್ಪು ಅಪಾರ ಪ್ರಮಾಣದಲ್ಲಿ ಬಂದಿರುವ ಕಾರಣ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ' ಎಂದು ತರಕಾರಿ ವ್ಯಾಪಾರಿ ಮಹಾವೀರ ತಿಳಿಸಿದ್ದಾರೆ. ಶ್ರಾವಣದಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಬೆಲೆ ಕೂಡ ಹೆಚ್ಚುತ್ತಿದೆ.












Click it and Unblock the Notifications