Mantralayam: ಮಂತ್ರಾಲಯ ರಾಯರ ಮಠದಲ್ಲಿ ಒಂದೇ ತಿಂಗಳಲ್ಲಿ 3 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ
ರಾಯಚೂರು, ನವೆಂಬರ್ 29: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಜ್ಯದ ಮೂಲೆ ಮೂಲೆಗಳ ಜಿಲ್ಲೆಯಿಂದ ಹಾಗೂ ಅಂತರ್ ರಾಜ್ಯಗಳಿಂದ ಬರುವ ಭಕ್ತರು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಇತ್ತೀಚಿಗೆ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಬಾರಿ ದಾಖಲೆ ಮಟ್ಟದಲ್ಲಿ ಕಾಣಿಕೆ ಸಂಗ್ರಹ ಕೂಡ ಆಗಿದೆ.
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನಿನ್ನೆ (ನವೆಂಬರ್ 28) ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಹಾಗೂ ಗುರುಪಾದ ಕರ ಸೇವಕರು ಸಂಪೂರ್ಣ ಒಂದು ದಿನದಲ್ಲಿ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಳಿಸಿದ್ದಾರೆ.

ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಕಳೆದ 31 ದಿನಗಳಲ್ಲಿ ಭಕ್ತರಿಂದ ದೊಡ್ಡ ಮಟ್ಟದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಕಳೆದ 31 ದಿನಗಳ ಅಂದರೆ ಅಕ್ಟೋಬರ್ ತಿಂಗಳ ಕೊನೆಯ ವಾರದಿಂದ ನವೆಂಬರ್ ತಿಂಗಳ ಕೊನೆಯ ವಾರದವರೆಗೆ 3,92,58,940 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂಪಾಯಿ ನೋಟುಗಳು ಹಾಗೂ 8,65,180 ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ. ಅಲ್ಲದೇ 174 ಗ್ರಾಂ ಚಿನ್ನದ ವಸ್ತುಗಳು ಹಾಗೂ 1270 ಗ್ರಾಂ ಬೆಳ್ಳಿ ರೂಪದ ಕಾಣಿಕೆಗಳು ಸಹ ಸಂಗ್ರಹವಾಗಿದೆ. ಇನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 2,86,43,454 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿತ್ತು ಎಂದು ಮಠದ ಆಡಳಿತ ಮಂಡಳಿ ತಿಳಿಸಿತ್ತು.
ತಿಂಗಳ ಆರಂಭ ದೀಪಾವಳಿಯ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿದ್ದ ಕಾರಣ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಇನ್ನು ಕನಕದಾಸ ಜಯಂತಿ ಸಮಯದಲ್ಲಿ ದೀರ್ಘ ವಾರಂತ್ಯ ರಜೆಗಳು ಇದ್ದ ಕಾರಣ ಸಹ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರ ಸ್ವಾಮಿಯ ದರ್ಶನ ಪಡೆದಿದ್ದರು. ಇದರಿಂದ ಕಾಣಿಕೆ ಸಂಗ್ರಹದಲ್ಲಿಯೂ ಏರಿಕೆ ಕಂಡಿದೆ ಎನ್ನಲಾಗಿದೆ. ವಾರಂತ್ಯ ದಿನಗಳಲ್ಲಿ ಮಾತ್ರವಲ್ಲದೇ ಗುರುವಾರ ಹಾಗೂ ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಮಠಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ರಾಯರ ಮಠವು ಪ್ರತಿದಿನ ಭಕ್ತರಿಂದ ತುಂಬಿರುತ್ತದೆ.












Click it and Unblock the Notifications