ಗಡಿನಾಡಲ್ಲಿ ಕನ್ನಡ ಧ್ವಜ ಮೆರೆಸಿದ "ಅಭಿಮಾನದ ಗಣಪ"
ರಾಯಚೂರು, ಸೆಪ್ಟೆಂಬರ್ 6: ಗಣೇಶ ಹಬ್ಬ ಬರುತ್ತಿದ್ದಂತೆ ಬೀದಿ ಬೀದಿಗಳಲ್ಲೂ ಗಣೇಶ ರಾರಾಜಿಸುತ್ತಾನೆ. ಗಣಪನ ಥರಾವರಿ ಮೂರ್ತಿಗಳು ಕಾಣಿಸಿಕೊಳ್ಳುತ್ತವೆ. ಈ ಬಾರಿ ವಿಶೇಷವಾದ ಗಣಪನನ್ನು ಪ್ರತಿಷ್ಠಾಪಿಸಬೇಕು, ಹಾಗೆಯೇ ಅಲಂಕಾರವೂ ಜೋರಿರಬೇಕು ಎಂದು ಲೈಟಿಂಗ್, ವೇದಿಕೆ ಹೂವು ಹಣ್ಣು ಎಲ್ಲದರ ಕುರಿತು ತಿಂಗಳ ಮುನ್ನವೇ ಪ್ಲಾನ್ ಕೂಡ ಆಗಿರುತ್ತದೆ.
ಆದರೆ ರಾಯಚೂರಿನ ಎಕ್ಲಾಸ್ ಪುರ ಗ್ರಾಮದ ಗಣಪತಿ ಹಬ್ಬ ನಡೆದಿರುವ ರೀತಿಯೇ ಒಂದು ವಿಶೇಷ. ಒಂದು ಸುಂದರ ಪರಿಕಲ್ಪನೆಯಲ್ಲಿ ಇಲ್ಲಿ ಗಣಪ ಕಾಣಿಸಿಕೊಂಡಿದ್ದಾನೆ. ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಗಣಪನಿಗೆ ಕನ್ನಡ ಭಾಷೆಯ ಅಭಿಮಾನವನ್ನೇ ಭಕ್ತಿಯನ್ನಾಗಿ ಅರ್ಪಿಸಲಾಗಿದೆ.
ಪೆಂಡಾಲ್, ಲೈಟಿಂಗ್ ನೋಡಿ ಇಲ್ಲಿ ಗಣಪತಿ ಕೂರಿಸಿದ್ದಾರೆ ಎಂದು ಕಂಡುಕೊಳ್ಳುವುದು ಸಾಮಾನ್ಯ. ಆದರೆ ಈ ಊರು ಪ್ರವೇಶವಾಗುತ್ತಿದ್ದಂತೆ ದಾರಿಯ ಎರಡೂ ಬದಿಗಳಲ್ಲಿನ ಕನ್ನಡ ಬಾವುಟಗಲು ಗಣಪನ ಮಂಟಪದ ಅಡ್ರೆಸ್ ತೋರಿಸುತ್ತವೆ. ಕನ್ನಡ ಧ್ವಜಗಳನ್ನು ಸಾಲಾಗಿ ಮಂಟಪದವರೆಗೂ ಹಾಕಿದ್ದಾರೆ. ತೋರಿಕೆಗಷ್ಟೇ ಅಲ್ಲ, ಗಣೇಶನ ಮಂಟಪದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳೂ ಅಚ್ಚ ಕನ್ನಡದಲ್ಲೇ ಇವೆ. ಗಣಪನ ಕೈಗೂ ಕನ್ನಡ ಧ್ವಜ ಕೊಟ್ಟಿದ್ದಾರೆ.

ಒಂದೊಂದು ಜಾತಿಯವರು ಒಂದೊಂದು ಮಂಟಪ ಮಾಡಿ ಅದರಲ್ಲಿ ಗಣೇಶನನ್ನು ಕೂಡಿಸಿ ಯಾರು ಈ ಗಣೇಶೋತ್ಸವವನ್ನ ಅದ್ಧೂರಿಯಾಗಿ ಆಚರಿಸುತ್ತಾರೆ ನೋಡೋಣ ಎಂದು ಜಿದ್ದಿಗೆ ಬಿದ್ದಂತೆ ಹೊಡೆದಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎಕ್ಲಾಸ್ ಪುರದ ಗಣೇಶೋತ್ಸವ. ಜಾತಿ ಮತಗಳನ್ನು ಮರೆತು ಕನ್ನಡತನದಲ್ಲಿ ಒಂದಾಗಿ ಗಣಪನನ್ನು ಭಾವೈಕ್ಯದ ಸಂಕೇತ ಎಂಬಂತೆ ಇಲ್ಲಿ ಪೂಜಿಸುತ್ತಾರೆ.
ಗಣಪನ ಹಬ್ಬಕ್ಕೆ ಕನ್ನಡ ಧ್ವಜಗಳನ್ನೇಕೆ ಈ ಮಟ್ಟಿಗೆ ಉಪಯೋಗಿಸಿದ್ದೀರಿ ಎಂದು ಊರಿನವರನ್ನು ಕೇಳಿದರೆ, "ನಮ್ಮನ್ನೆಲ್ಲ ದೊಡ್ಡ ಮಂದಿ ಸಣ್ಣ ಮಂದಿ ಅಂತಾ ಬೇರ್ಪಡಿಸದೆ ಒಂದಾಗಿಟ್ಟಿದ್ದು ನಮ್ಮ ತಾಯಿ ಕನ್ನಡ. ಅದಕ್ಕಾಗಿ ಬಾವುಟಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದೇವೆ" ಎಂದು ಉತ್ತರಿಸುತ್ತಾರೆ.

ಭಾಷಾಭಿಮಾನದ ನೆಪದಲ್ಲಿ ಬರೀ ಆಡಂಬರಕ್ಕೆ ಹಬ್ಬ ಆಚರಿಸುವ ಮಂದಿಗೆ ಈ ಕನ್ನಡಮಯವಾದ ಊರು, ಜನ ಹಾಗೂ ಗಣೇಶೋತ್ಸವ ಮಾದರಿಯಾಗಬೇಕಿದೆ.












Click it and Unblock the Notifications