ರಾಯಚೂರು: ಸಿಂಗನೋಡಿ ಗ್ರಾಮದಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಆರೋಪ
ರಾಯಚೂರು, ಜುಲೈ, 19: ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಿಕೆ ಮಾಡುತ್ತಿರುವುದು ತೆಲಂಗಾಣ ಗಡಿ ಭಾಗದಲ್ಲಿರುವ ಸಿಂಗನೋಡಿ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಆರೋಪ ಕೇಳಿಬಂದಿದೆ.
ಒಂದೆಡೆ ತಿನ್ನುವ ಆಹಾರಕ್ಕೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿ ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಮತ್ತೊಂದೆಡೆ ಅಕ್ಕಿಯಲ್ಲಿ ಕಲಬೆರಕೆ ಆಗಿರುವುದನ್ನು ಕಂಡ ಜನರು ಭಯಭೀತರಾಗಿದ್ದಾರೆ. ನ್ಯಾಯಬೆಲೆ ಅಂಗಡಿಯಿಂದ ಪಡೆದ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಪತ್ತೆ ಹಚ್ಚಿದ ಜನ ಕಳೆದ ಮೂರು ದಿನಗಳಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾನ್ಯ ಅಕ್ಕಿಗಿಂತ ಇದು ಭಿನ್ನವಾಗಿದ್ದು, ಬೆಂಕಿಗೆ ಪ್ಲಾಸ್ಟಿಕ್‌ನಂತೆ ಕರಗುತ್ತದೆ ಎಂದು ಜನರು ಆರೋಪಿಸುತ್ತಿದರು.
ಈ ಪ್ಲಾಸ್ಟಿಕ್ ಅಕ್ಕಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ತಕ್ಷಣ ಮಾಧ್ಯಮದವರು ಸಿಂಗನೋಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಿಯನ್ನು ಪರೀಕ್ಷೆ ನಡೆಸಿದಾಗ ಅಲ್ಲಿದ್ದ ಪಡಿತರ ಬೆಂಕಿಗೆ ಕರಗಿದ್ದು, ಅಲ್ಲಿದ್ದ ಗ್ರಾಮಸ್ಥರೆಲ್ಲ ಆಶ್ಚರ್ಯಗೊಂಡಿದ್ದಾರೆ.

ಕೈಗಳಲ್ಲಿ ಬಲವಾಗಿ ಉಜ್ಜಿದರೂ ಅಕ್ಕಿ ಮುರಿದಿಲ್ಲ, ನೀರಿನಲ್ಲಿ ತೇಲಿದೆ, ಬೆಂಕಿಗೆ ಸಾಮಾನ್ಯ ಅಕ್ಕಿಗಿಂತ ಭಿನ್ನ ರೀತಿಯಲ್ಲಿ ಕರಗಿದೆ. ಇದನ್ನು ನೋಡಿದ ಜನರು ಸಾಮಾನ್ಯ ಅಕ್ಕಿಯ ಅನ್ನವನ್ನೂ ತಿನ್ನಲು ಹಿಂದುಮುಂದು ನೋಡುತ್ತಿದ್ದಾರೆ. ಲೆಕ್ಕ ಹಾಕಿ ಇದು ಬರೀ ಅಕ್ಕಿಯಲ್ಲ ಪ್ಲಾಸ್ಟಿಕ್ ಅಕ್ಕಿ. ನೋಡೋಕೆ ಮಾತ್ರ ಅಕ್ಕಿ ತರ ಬೆಳ್ಳಗೆ ಎಂದು ಗ್ರಾಮಸ್ಥರು ಕೆಂಡಕಾರಿದ್ದು, ನಕಲಿ ಅಕ್ಕಿಯ ಅಸಲಿ ಸತ್ಯವನ್ನ ಬಯಲಿಗೆಳೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಿದರು.
ಕಳೆದ 3 ದಿನಗಳಿಂದ ಇದೇ ನಕಲಿ ಅಕ್ಕಿಯನ್ನು ಬಳಸಿದವರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಸಿಂಗನೋಡಿಯಲ್ಲಿ ಸಿಕ್ಕಂತಹ ಭಿನ್ನವಾಗಿರುವ ಅಕ್ಕಿ ಕಾಳುಗಳು ಗ್ರಾಮೀಣ ಜನರನ್ನ ಮಾತ್ರವಲ್ಲ, ನಗರದ ಜನರನ್ನು ಆತಂಕಗೊಳ್ಳುವಂತೆ ಮಾಡಿದೆ.

ಗ್ರಾಹಕರೊಬ್ಬರು ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಿದ್ದು, ಇದು ನಕಲಿ ಅಕ್ಕಿಯಾಗಿದೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಇದು ಪ್ಲಾಸ್ಟಿಕ್ ಅಕ್ಕಿಲ್ಲ. ಜನರಲ್ಲಿ ಪೌಷ್ಠಿಕತೆ ಹೆಚ್ಚಿಸಲು ಈ ರೀತಿಯ ಅಕ್ಕಿಯನ್ನು ಬೆರಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಅಕ್ಕಿ ಎಲ್ಲಿಯೂ ವಿತರಿಸಿಲ್ಲ. ಜನರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. 14 ಜಿಲ್ಲೆಗಳಲ್ಲಿ ಈ ಅಕ್ಕಿಯನ್ನು ಸರಬರಾಜು ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಅನ್ನ ಅಳಸಿದೆಯೆ? ಕಳೆದ ಎರಡು ತಿಂಗಳಿನಿಂದ ಈ ಅಕ್ಕಿ ನೀಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ ಗೊಂದಲವನ್ನು ಯಾವ ರೀತಿಯಲ್ಲಿ ನಿವಾರಿಸಲಾಗುತ್ತದೆ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ.
ಸಿಂಗನೋಡಿ ಜನರು ಪ್ಲಾಸ್ಟಿಕ್ ಅಕ್ಕಿ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಲು ಇದರಲ್ಲಿ ಯಾವುದೇ ಕಲಬೆರಕೆ ಆಗಿಲ್ಲ ಎಂದು ವಾದಿಸುತ್ತಿದ್ದಾರೆ. ಇದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಗದಂತಾಗಿದೆ.












Click it and Unblock the Notifications