ಬದುಕು ಬದಲಿಸಿಕೊಳ್ಳುವ ರಿಸೆಟ್ ಬಟನ್ ನಮ್ಮ ಕೈಲಿದೆ: ಫಲಿತಾಂಶ ನೋಡಿದವರಿಗೆ ರಂಗಣ್ಣನ ಪತ್ರ

ಕರ್ನಾಟಕದ ಲಕ್ಷಾಂತರ ಮಕ್ಕಳು ಮತ್ತು ಪೋಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ನಿನ್ನೆಯಷ್ಟೇ (ಏಪ್ರಿಲ್ 23) ನೋಡಿದ್ದಾರೆ. ಫಸ್ಟ್‌ ಕ್ಲಾಸ್ ಬಂದವರ ಮನೆಯಲ್ಲಿ ಸಂಭ್ರಮ, ಜಸ್ಟ್‌ಪಾಸ್-ಫೇಲ್ ಆದ ಮಕ್ಕಳ ಮನೆಯಲ್ಲಿ ಚಿಂತನ-ಮಂಥನ. ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ ಎರಡೂ ವರ್ಗದ ಮನೆಗಳಲ್ಲಿ ಸಾಮಾನ್ಯ. ಅಸಲಿಗೆ ಪರೀಕ್ಷೆ ಎಂದರೇನು? ಫಲಿತಾಂಶವೆಂದರೇನು? ಇದನ್ನು ಹೇಗೆ ಗ್ರಹಿಸಬೇಕು? -ಎಷ್ಟೋ ಮನಸ್ಸುಗಳನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರೆ ಅರ್ಥಶಾಸ್ತ್ರಜ್ಞ ರಂಗಸ್ವಾಮಿ ಮೂಕನಹಳ್ಳಿ. ಮೈಸೂರು ನಿವಾಸಿ ರಂಗಸ್ವಾಮಿ ಅವರು ಹಣಕಾಸು ಸಾಕ್ಷರತೆಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ. ಹೊಸತನದಿಂದ ಕೂಡಿರುವ ಅವರ ವಿಚಾರಗಳು ಕನ್ನಡಿಗರಿಗೆ ಇಷ್ಟವಾಗಿದೆ. ಮಕ್ಕಳಿಗೆ ಮತ್ತು ಪೋಷಕರಿಗೆ 'ಅಣ್ಣ'ನಾಗಿ ಅವರೇನು ಹೇಳುತ್ತಾರೆ? -ಈ ಪತ್ರ ಓದಿ.

ಪ್ರಿಯ ವಿದ್ಯಾರ್ಥಿಗಳೇ ,

ಇನ್ನೊಂದು ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಮೊದಲಿಗೆ ಇದರಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ವಿಜಯ ಪತಾಕೆ ಹಾರಿಸಿದ ಎಲ್ಲರಿಗೂ ಅಭಿನಂದನೆಗಳು. ಮಕ್ಕಳೇ, ನೀವು ಈ ಪರೀಕ್ಷೆಯಲ್ಲಿ ಗೆದ್ದಿದ್ದೀರಿ. ನಿಮ್ಮ ಶ್ರಮ, ಮನಸಿಟ್ಟು ಓದಿದುದರ ಫಲಿತಾಂಶ ಸಿಕ್ಕಿದೆ. ನೀವು, ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಸಂಭ್ರಮವನ್ನು ಆಚರಿಸುತ್ತಿದ್ದೀರಿ. ಮತ್ತೊಮ್ಮೆ ಅಭಿನಂದನೆಗಳು. ಸಣ್ಣಪುಟ್ಟ ಜಯವನ್ನು ಕೂಡ ಸಂಭ್ರಮಿಸಬೇಕು. ಇಲ್ಲೊಂದು ಪುಟಾಣಿ ವಿಚಾರವನ್ನು ನಿಮಗೂ ನಿಮ್ಮ ಪೋಷಕರಿಗೂ ಹೇಳಬೇಕಿದೆ.

SSLC Results 2026

ಹತ್ತನೇ ತರಗತಿ ಪಾಸಾದರೆ ಅದು ಹನ್ನೊಂದನೇ ತರಗತಿಗೆ ಹೋಗಲು ಸಿಕ್ಕ ಪರವಾನಿಗೆ ! ಹನ್ನೊಂದು ಪಾಸಾದರೆ ಹನ್ನೆರೆಡಕ್ಕೆ ಹೋಗಲು ಸಿಗುವ ಪರವಾನಿಗೆ. ಬದುಕೆಂದರೆ ಹೀಗೆ ಒಂದು ಹಂತವನ್ನು ಮುಗಿಸಿದೆವು ಎಂದರೆ ಇನ್ನೊಂದು ಹಂತದ ಹೋರಾಟಕ್ಕೆ ಅಥವಾ ಬದುಕಿಗೆ ಸಿದ್ಧವಾಗಬೇಕು ಎಂದರ್ಥ. ಇನ್ನೊಂದು ದೊಡ್ಡ ಸಮಸ್ಯೆ ಅಥವಾ ಸವಾಲು ಸ್ವೀಕರಿಸಲು ನಮಗೆ ಸಿಗುವ ಪರವಾನಿಗೆ ಅಷ್ಟೇ ! ಹೀಗಾಗಿ ಈ ಜಯವನ್ನು ಸಂಭ್ರಮಿಸೋಣ ಆದರೆ ಸವೆಸಬೇಕಾದ ದಾರಿ ಬಹಳವಿದೆ ಎನ್ನುವುದನ್ನು ಮರೆಯದಿರೋಣ.

ಹತ್ತನೇ ತರಗತಿಯಲ್ಲಿ ಬಹಳಷ್ಟು ಚೆನ್ನಾಗಿ ಅಂಕಗಳನ್ನು ಗಳಿಸಿದ್ದ ಮಕ್ಕಳು ಕಾಲೇಜಿಗೆ ಬರುತ್ತಿದ್ದಂತೆ ಮೈ ಮರೆತು ಬಿಡುತ್ತಾರೆ. ಪೋಷಕರು ಕೂಡ ಹೈಸ್ಕೂಲಿನಲ್ಲಿ ಇದ್ದಷ್ಟು ಸ್ಟ್ರಿಕ್ಟ್ ಆಗಿರುವುದಿಲ್ಲ. ಮಗ ಅಥವಾ ಮಗಳು ಕಾಲೇಜಿಗೆ ಬಂದರು, ದೊಡ್ಡವರಾಗಿದ್ದಾರೆ ಎನ್ನುವ ಭಾವನೆಯಲ್ಲಿ ಚೂರು ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತಾರೆ. ಗಳಿಗೆ ಮೈ ಮರೆತರೂ ಸಾಕು ಅಪಾಯ ತಪ್ಪಿದ್ದಲ್ಲ.

ಇವತ್ತಿನ ದಿನದಲ್ಲಿ ಎಲ್ಲಾ ಮಕ್ಕಳೂ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೆಚ್ಚು ಅಂಕ ಪಡೆದ ಮಕ್ಕಳನ್ನು ಹೀಗೆಳೆಯುವ ಮಂದಿಗೆ, ಇವತ್ತಿನ ಎಲ್ಲಾ ಮಕ್ಕಳೂ ಅತ್ಯುತ್ತಮ ಅಂಕ ತೆಗೆದಿಲ್ಲ. ಸ್ಟೇಟ್ ಬೋರ್ಡ್ ಎಂದು ಹೀಗೆಳೆಯುವರಿಗೆ, ಯಾವುದೇ ಬೋರ್ಡ್ ಇರಲಿ 95 ಪ್ರತಿಶತಕ್ಕಿಂತ ಹೆಚ್ಚಿನ ಅಂಕ ತೆಗೆಯುವುದು ಸುಲಭದ ಮಾತಲ್ಲ. ಇವತ್ತಿನ ಮಕ್ಕಳು ನಿಜಕ್ಕೂ ಬುದ್ದಿವಂತರು.

ನಿನ್ನೆಯ ಫಲಿತಾಂಶದಲ್ಲಿ ನನ್ನಂತೆ ಎರಡನೇ ದರ್ಜೆಯಲ್ಲಿ ಪಾಸಾದವರು , ಜಸ್ಟ್ ಪಾಸದವರು , ಪಾಸಾಗದೆ ಅನೇಕ ಕಾರಣಗಳಿಂದ ಫೇಲ್ ಆದವರು ಗಮನಿಸಿ ಪ್ಲೀಸ್. ಅಂಕ ಗಳಿಕೆಯು ನಿಮ್ಮ ತಯಾರಿ ಹೇಗಿತ್ತು, ಪರೀಕ್ಷೆಗೆ ನೀವೆಷ್ಟು ಸಿದ್ಧರಿದ್ದೀರಿ ಎಂಬುದನ್ನು ಬಿಂಬಿಸಲು ಒಂದು ಮಾನದಂಡವಷ್ಟೇ. ನೀವು ಹುಡುಗಾಟದಿಂದಲೋ, ಉಡಾಫೆಯಿಂದಲೋ ಅಥವಾ ಕೆಲವೊಮ್ಮೆ ಅತಿ ವಿಶ್ವಾಸ, ಬುದ್ಧಿವಂತಿಕೆಯ ಕಾರಣದಿಂದಲೂ ಕಡಿಮೆ ಅಂಕ ತೆಗೆದಿದ್ದೀರಿ ಎಂದುಕೊಳ್ಳಿ ಅಥವಾ ಫೇಲ್ ಆಗಿದ್ದೀರಿ ಎಂದು ಕೊಳ್ಳಿ. ಈ ಫಲಿತಾಂಶ ನಿಮಗೆ ಬೇಜಾರು ಉಂಟು ಮಾಡಿದೆ, ನೋವು ಉಂಟು ಮಾಡಿದೆ ಎಂದರೆ ನಿಮ್ಮಲ್ಲಿರುವ ಸಾತ್ವಿಕ 'ನಾನು' ಎನ್ನುವ ಪರಿಕಲ್ಪನೆ ಸತ್ತಿಲ್ಲ ಎಂದಾಯ್ತು. ಬದುಕಿಗೆ ನಾನು ಎನ್ನುವ ಪ್ರಜ್ಞೆ ಬಹಳ ಮುಖ್ಯ. ಅದು ಎಂದಿಗೂ ಇತರರ ನಾನುವಿನ ಜೊತೆಗೆ ಸಂಘರ್ಷಕ್ಕೆ ಇಳಿಯಬಾರದು. ನಮ್ಮ ಮೇಲೆ ನಾವು ಯಾವಾಗ ಯುದ್ಧ ಸಾರಿಕೊಳ್ಳುತ್ತೇವೆ ಆಗ ಗೆಲುವು ಶುರುವಾಗುತ್ತದೆ.

ನನ್ನ ಸುತ್ತಮುತ್ತ ಅನೇಕ ಒಳ್ಳೆಯ ಜನರಿದ್ದಾರೆ. ಬದುಕಿನಲ್ಲಿ ಅತ್ಯುತ್ತಮ ಮಟ್ಟವನ್ನು ಕೂಡ ಮುಟ್ಟಿದ್ದಾರೆ. ಅವರಲ್ಲಿ ಕೆಲವರು ನನ್ನಂತೆ ಎರಡನೇ ದರ್ಜೆಯಲ್ಲಿ ಪಾಸಾದವರು ಇದ್ದಾರೆ. ಹತ್ತನೇ ತರಗತಿಯಲ್ಲಿ ಫೇಲ್ ಆದವರು ಇದ್ದಾರೆ, ಎರಡನೇ ಪಿಯುಸಿಯಲ್ಲಿ ಫೇಲ್ ಆದವರು ಇದ್ದಾರೆ. ಆದರೆ ಅವರೆಲ್ಲಾ ಇಂದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಹೇಗೆ ಸಾಧ್ಯವಾಯ್ತು? ಅವರ ಬದುಕನ್ನು ನೋಡಿದಾಗ ಸಿಗುವ ಒಂದು ಸರಳ ಉತ್ತರವನ್ನು ನಿಮಗೂ ಹೇಳುವೆ. ಇದೊಂದು ಬದುಕು ಬದಲಿಸಬಲ್ಲ ಮಂತ್ರ. ಜಗತ್ತಿನ ಡೆಫಿನಿಶನ್ ಅವರು ಒಪ್ಪಿಕೊಳ್ಳಲಿಲ್ಲ. ನಮ್ಮ ಡೆಫಿನಿಷನ್ ನಾವೇ ಬರೆದುಕೊಳ್ಳುತ್ತೇವೆ ಎಂದು ಅವರು ಮನಸ್ಸು ಮಾಡಿದ್ದರು ಎನ್ನುವುದೇ ಆ ಸರಳ ಮಂತ್ರ.

ಕಡಿಮೆ ಅಂಕ ತೆಗೆದವರು ಕಡಿಮೆ ಬುದ್ದಿವಂತರು ಎನ್ನುವುದು ಸಮಾಜದ ಡೆಫಿನಿಶನ್. ಹೌದಲ್ಲ, ಟೊಳ್ಳು ಮತ್ತು ಗಟ್ಟಿಯನ್ನು ಬೇರ್ಪಡಿಸಲು ಏನಾದರೂ ಮಾಪಕ ಬೇಕಲ್ಲ ! ಹೀಗಾಗಿ ಸಮಾಜದ ಡೆಫಿನಿಶನ್ ನಾವು ಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ. ಆದರೆ ನಾವು ಅದನ್ನು ಒಪ್ಪಬೇಕು ಎನ್ನುವ ಕಾನೂನು ಕೂಡ ಇಲ್ಲ. ಹೆಚ್ಚು ಮಾತಾಡದೆ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹಂತದ ಪರೀಕ್ಷೆಯಲ್ಲಿ ಸಮಾಜದ ಡೆಫಿನಿಶನ್ ತಿದ್ದಬಹುದು, ಅಂದರೆ ನಮ್ಮ ಡೆಫಿನಿಶನ್ ಆಫ್ ನಾವು, ನಾವೇ ಬರೆದುಕೊಳ್ಳಬಹುದು.

ಜಗತ್ತಿನ ಡೆಫಿನಿಶನ್ ಪ್ರಕಾರ ಗೆದ್ದವರು ಬದುಕಿನಲ್ಲಿ ಸೋತಿದ್ದು ಕಂಡಿದ್ದೇನೆ. ಸಮಾಜದ ಡೆಫಿನಿಶನ್ ಪ್ರಕಾರ ನಾಲಾಯಕ್ಕು ಎಂದುಕೊಂಡವರು ಬದುಕಿನಲ್ಲಿ ಗೆದ್ದದ್ದು ಕಂಡಿದ್ದೇನೆ. ಹೀಗೇಕಾಗುತ್ತದೆ ಎಂದರೆ ಬದುಕಿಗೆ ಸಿಲಬಸ್ ಇಲ್ಲ. ಒಂದು ಬೌಂಡರಿ ಸೃಷ್ಟಿ ಮಾಡಿದಾಗ ಅಲ್ಲಿ ಕೆಲವರು ಗೆಲ್ಲುತ್ತಾರೆ. ಕೆಲವರಿಗೆ ಈ ಬೌಂಡರಿಗಳು ಕೆಲಸ ಮಾಡುವುದಿಲ್ಲ. ಹೀಗಾಗಿ ಅಂಕ ಗಳಿಕೆ ಅಂತಿಮವಲ್ಲ. ಹಾಗೆಂದ ಮಾತ್ರಕ್ಕೆ ಅಂಕ ಗಳಿಕೆ ಬೇಡ ಎನ್ನುವುದು ಉದ್ದೇಶವೂ ಅಲ್ಲ.

ಇನ್ನೊಂದು ಮಾತನ್ನೂ ಸೇರಿಸಿಬಿಡುತ್ತೇನೆ. ಅತ್ಯುತ್ತಮ ಅಂಕಗಳಿಕೆ ಮಾಡಿದವರು ಬದುಕಿನಲ್ಲೂ ಅತ್ಯುತ್ತಮ ಹಂತವನ್ನು ತಲುಪಿದ್ದಾರೆ. ಸರಿಯಾಗಿ ಕಲಿಯದೇ ಫೇಲ್ ಆದವರು , ಬದುಕಿನಲ್ಲೂ ಫೇಲ್ ಆಗಿದ್ದಾರೆ . ಮತ್ತದೇ ಪ್ರಶ್ನೆ ಹೀಗೇಕಾಗುತ್ತದೆ? ಮತ್ತದೇ ಉತ್ತರ ಬದುಕಿಗೆ ಸಿಲಬಸ್ ಇಲ್ಲ.

ಇಷ್ಟೆಲ್ಲಾ ಹೇಳುವ , ಬರೆಯುವ ಉದ್ದೇಶ ಸರಳ. ಇವತ್ತಿನ ಫಲಿತಾಂಶ ಅಂತಿಮವಲ್ಲ. ಅಯ್ಯೋ ನನಗಾಗುವುದಿಲ್ಲ ಎಂದು ಕ್ವಿಟ್ ಮಾಡಿದರೆ , ಸಮಾಜದ ಡೆಫಿನಿಶನ್ ಒಪ್ಪಿಕೊಂಡರೆ ಅಲ್ಲಿಗೆ ಮುಕ್ತಾಯ. ಎಲ್ಲಿಯವರೆಗೆ 'ನಾನು ' ಎನ್ನುವ ಪ್ರಜ್ಞೆ ನಮ್ಮಲ್ಲಿ ಉಳಿದಿರುತ್ತದೆ , ಅಲ್ಲಿಯವರೆಗೆ ಹೋರಾಟ ಇರುತ್ತದೆ. ಹೋರಾಟ ಇರುವವರೆಗೂ ಸೋಲು ಹತ್ತಿರಕ್ಕೂ ಸುಳಿಯುವುದಿಲ್ಲ.

ನನ್ನಪ್ಪ ಒಂದು ಮಾತು ಹೇಳುತ್ತಿದ್ದರು ' ಸೋಲೆಲ್ಲಾ ಸೋಲಲ್ಲ , ಗೆಲುವೆಲ್ಲಾ ಗೆಲುವೂ ಅಲ್ಲ' ಎಲ್ಲವು ಆಯಾ ಕ್ಷಣದ ಫಲಿತಾಂಶ. ಬದುಕನ್ನು ಬದಲಿಸಿಕೊಳ್ಳುವ ರಿಸೆಟ್ ಬಟನ್ ಭಗವಂತ ನಮ್ಮ ಕೈಯಲ್ಲಿಟ್ಟಿದ್ದಾನೆ. ಅದನ್ನು ಒತ್ತುವ ಕೆಲಸ ಮಾತ್ರ ನಾವೇ ಮಾಡಬೇಕು . ಹೊರಗಿನ ಪ್ರೇರಣೆ ಬಹಳ ಕಾಲ ಉಳಿಯುವುದಿಲ್ಲ. ಅಂತಃಶಕ್ತಿ ಮಾತ್ರ ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಅಂತಹ ಶಕ್ತಿ ನಿಮ್ಮದಾಗಲಿ.

ಶುಭವಾಗಲಿ .

ಜಗತ್ತು ನನ್ನ ಬಗ್ಗೆ ನೀಡಿದ್ದ ಕರಿಯ, ದಡಿಯ, ಉಚ್ಚೆ ಪುರುಕ, ನಿರ್ಧಾರ ತೆಗೆದುಕೊಳ್ಳಲಾಗದವ, ನಿರ್ಧಾರಕ್ಕೆ ಬದ್ದನಾಗಿರಲು ಬಾರದವ... ಹೀಗೆ ಹಲವಾರು ಡೆಫಿನಿಶನ್‌ಗಳನ್ನು ಒಪ್ಪಿಕೊಳ್ಳದೆ, ಇಂದಿಗೂ ಹೊಸ ಡೆಫಿನಿಶನ್ ಗಳನ್ನು ಕೂಡ ಅಪ್ಪಿಕೊಳ್ಳದೆ, ನನ್ನದೇ ಡೆಫಿನಿಶನ್ ಬರೆದುಕೊಳ್ಳುವ ಹೋರಾಟ ಮಾಡುತ್ತಿರುವ

ನಿಮ್ಮ ಹಿತೈಷಿ ಅಣ್ಣ
ವಿಶ್ವಾಸದೊಂದಿಗೆ
ರಂಗಸ್ವಾಮಿ ಮೂಕನಹಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+