CEO Level Attitude: “WFH ಕೇಳಿದ್ರೆ ಸಿಇಒ ಮನೋಭಾವ ಬೇಕಂತೆ!” HR ಉತ್ತರಕ್ಕೆ ನೆಟ್ಟಿಗರ ಆಕ್ರೋಶ
ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಕೆಲಸದ ದಿನಗಳು, ಸಮಯ ಮತ್ತು ಸೌಲಭ್ಯಗಳ ಬಗ್ಗೆ ಉದ್ಯೋಗಿಗಳು ಪ್ರಶ್ನಿಸುವುದು ಸಾಮಾನ್ಯ. ಆದರೆ ಇಂತಹ ಒಂದು ಸರಳ ಪ್ರಶ್ನೆಯೇ ಮಹಿಳಾ ಉದ್ಯೋಗಿಗೆ ಅಚ್ಚರಿಯಾಗುವಂತಹ ಅನುಭವವನ್ನು ನೀಡಿದೆ. ವಾರಾಂತ್ಯದಲ್ಲಿ ಮನೆಯಿಂದ ಕೆಲಸ (WFH) ಮಾಡಲು ಸಾಧ್ಯವೇ ಎಂದು ಮಹಿಳಾ ಉದ್ಯೋಗಿ ಕೇಳಿದ ಪ್ರಶ್ನೆಗೆ ಹೆಚ್.ಆರ್(HR) ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಬ್ಬ ಮಹಿಳೆಯ ಹೇಳಿಕೆಯ ಪ್ರಕಾರ, ಅವರು ಸಂದರ್ಶನಕ್ಕೆ ಹಾಜರಾಗಿದ್ದ ವೇಳೆ ಕಂಪನಿಯಲ್ಲಿ ವಾರಕ್ಕೆ 6 ದಿನ ಕೆಲಸ ಮಾಡುವ ನೀತಿ ಇದೆ ಎಂದು ತಿಳಿಸಲಾಯಿತು. ಇದಾದ ಬಳಿಕ ಶನಿವಾರದಂದು ಮನೆಯಿಂದ ಕೆಲಸ ಮಾಡುಲು ಅವಕಾಶವಿದೆಯೇ ಎಂದು ಉದ್ಯೋಗಿ ಪ್ರಶ್ನೆ ಕೇಳಿದರು. ಅದಕ್ಕೆ ಅಲ್ಲಿನ ಹೆಚ್.ಆರ್ ಈ ಪ್ರಶ್ನೆಯನ್ನು ತಳ್ಳಿಹಾಕಿ 'ನಮಗೆ ಸಿಇಒ ಮಟ್ಟದ ಮನೋಭಾವ ಇರುವ ಅಭ್ಯರ್ಥಿಗಳು ಬೇಕು' ಎಂದು ಹೇಳುವ ಮೂಲಕ ಅವರ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ.

ಇದರಿಂದ ಗೊಂದಲಗೊಂಡ ಮಹಿಳೆ 'ಅಂದರೆ ಇದು ಸಿಇಒ ಹುದ್ದೆಗೆ ನೇಮಕಾತಿಯೇ?' ಎಂದು ಮರು ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಈ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಹೆಚ್.ಆರ್ ಕರೆ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು, ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕೆಲವರು ಇದನ್ನು "ಅಗೌರವದ ನಡವಳಿಕೆ" ಎಂದು ಕರೆದರೆ, ಇನ್ನು ಕೆಲವರು ಇದನ್ನು "ವಿಷಕಾರಿ ಕೆಲಸದ ಸಂಸ್ಕೃತಿ" (Toxic Work Culture) ಎಂದು ಟೀಕಿಸಿದ್ದಾರೆ.
ವೈರಲ್ ಆದ ಪೋಸ್ಟ್‌ನಲ್ಲಿ ಆ ಮಹಿಳೆ ಹೀಗೆ ಬರೆದಿದ್ದಾರೆ: "ನಾನು ಶನಿವಾರದಂದು ಮನೆಯಿಂದ ಕೆಲಸ ಮಾಡುವ (WFH) ಅವಕಾಶದ ಬಗ್ಗೆ ಕೇಳಿದೆ. ಅದಕ್ಕೆ ಹೆಚ್.ಆರ್ ಅವರು ನಮಗೆ 'ಸಿಇಒ ಮಟ್ಟದ ಮನೋಭಾವ' ಇರುವವರು ಬೇಕು ಎಂದರು. ನನ್ನ ಕೆಲಸದ ಇತಿಮಿತಿಗಳನ್ನು (Boundaries) ನಿಗದಿಪಡಿಸುವುದು ನನ್ನನ್ನು ಈ ಕೆಲಸಕ್ಕೆ ಅನರ್ಹಗೊಳಿಸುವುದಾದರೆ, ನಾನು ಸಂತೋಷದಿಂದಲೆ ಅದನ್ನು ಸ್ವೀಕರಿಸುತ್ತೇನೆ. ಏಕೆಂದರೆ, ನಿಜವಾದ ನಾಯಕತ್ವ ಎಂದರೆ ಕೇವಲ ಅತಿಯಾಗಿ ಕೆಲಸ ಮಾಡುವುದಲ್ಲ ಅದರ ಬದಲಾಗಿ ಸ್ವಂತ ಮೌಲ್ಯವನ್ನು ನಾವು ಅರಿತುಕೊಂಡು ಅದಕ್ಕೆ ತಕ್ಕನಾಗಿ ನಡೆದುಕೊಳ್ಳುವುದು."
ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದಾರೆ, ಇದು ಈಗಾಗಲೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನೆಟ್ಟಿಗರು ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ಸಿಇಒ ಮಟ್ಟದ ವರ್ತನೆಯನ್ನು ನಿರೀಕ್ಷಿಸುವುದಾದರೆ, ಸಂಬಳವೂ ಅದೇ ಮಟ್ಟದಲ್ಲಿರಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು "ಕೆಲಸದ ಹೆಸರಿನಲ್ಲಿ ಉದ್ಯೋಗಿಗಳ ಶೋಷಣೆ ಮಾಡಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಘಟನೆ ಕೆಲಸದ ಸ್ಥಳದಲ್ಲಿ ಇರುವ ಒತ್ತಡ, ನಿರೀಕ್ಷೆಗಳು ಮತ್ತು ನೌಕರರ ಹಕ್ಕುಗಳ ಕುರಿತು ಮತ್ತೊಮ್ಮೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.












Click it and Unblock the Notifications