ಅಪಘಾತ ತಡೆಗೆ ರಾಯಚೂರು ಪೊಲೀಸರ ಯತ್ನ: ಹೆದ್ದಾರಿಗಳಲ್ಲಿ ಸಂಚಾರಿ ನಿಯಮಗಳ ಚಿಹ್ನೆ ಅಳವಡಿಕೆ
ರಾಯಚೂರು, ಜುಲೈ 31: ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಡುವೆ ಸಂಭವಿಸುವ ಅಪಘಾತಗಳ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಚಿಹ್ನೆ ಅಳವಡಿಸುವ ಕಾರ್ಯ ಜೋರಾಗಿ ಸಾಗಿದೆ. ಮಳೆಗಾಲದಲ್ಲಿ ಕಿತ್ತುಹೋಗಿರುವ ರಸ್ತೆಗಳು ಗುಂಡಿಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡದಿರುವುದು ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.
ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲು ಜಿಲ್ಲಾ ಪೊಲೀಸ್ ಇಲಾಖೆ ದಿಟ್ಟ ನಡೆಯಿಟ್ಟಿದೆ. ಇತ್ತೀಚೆಗೆ ಜಿಲ್ಲಾ ಪೊಲೀಸ್ ಇಲಾಖೆ , ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ನೇತೃತ್ವದ ಸಭೆಯಲ್ಲಿ, ಜಿಲ್ಲೆಯ ರಸ್ತೆಗಳ ಉಬ್ಬುಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ. ಹೀಗಾಗಿ ಅಪರಿಚಿತರು ರಸ್ತೆಗಳಲ್ಲಿ ಸಂಚಾರಿಸುವ ವೇಳೆ ಉಬ್ಬುಗಳು ಗೋಚರಿಸದೆ ಅಪಘಾತಕ್ಕೀಡಾದ ಸಾಕಷ್ಟು ನಿದರ್ಶನಗಳಿವೆ ಎಂದರು.

ಇಂತಹ ಅವಘಡಗಳ ತಡೆಗೆ ಅಧಿಕಾರಿಗಳು ಸಭೆಯಲ್ಲಿ ನಿರ್ಧರಿಸಿದ್ದರಿಂದ ಚಿಹ್ನೆಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಹೆದ್ದಾರಿಗಳಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಉಬ್ಬು ತಗ್ಗುಗಳು ಕಾಣದೇ ಪಲ್ಟಿಯಾಗಿ ಜಖಂಗೊಂಡಿವೆ. ಅಲ್ಲದೆ ಬೈಕ್ ಹಿಂಬದಿ ಕುಳಿತಿದ್ದವರೂ ಕೂಡ ಸಾವು ನೋವು ಕಂಡ ಸಾಕಷ್ಟು ಘಟನೆಗಳು ಪದೇ ಪದೇ ಸಂಭವಿಸಿವೆ. ರಸ್ತೆಗಳಲ್ಲಿ ಸಂಚಾರಿ ನಿಯಮಗಳ ಚಿಹ್ನೆಗಳ ಅಳವಡಿಕೆಯಿಂದ ಅಪಘಾತ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇಷ್ಟಲ್ಲದೇ ಸವಾರರಿಗೆ ಸಂಚಾರಿ ನಿಯಮ ಪಾಲಿಸುವಂತೆ ಹೆಚ್ಚು ಜಾಗೃತಿ ಮೂಡಿಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ರಾಯಚೂರು ನಗರದ ರಾಷ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಉಬ್ಬುಗಳನ್ನು ಮಾಡಿದ್ದಾರೆಯೇ ವಿನಃ ಮಾರ್ಕಿಂಗ್ ಮಾಡಿಲ್ಲ. ಮಂತ್ರಾಲಯ ರಸ್ತೆಯ ಆಕಾಶವಾಣಿ ಕೇಂದ್ರದ ಎದುರು, ಐಡಿಎಸ್ ಎಂ ಟಿ ಬಸ್ ನಿಲ್ದಾಣ ಪಕ್ಕ , ಐಬಿ ಕಾಲೊನಿ ಎದುರು, ನವೋದಯ ಕಾಲೇಜು ಕ್ಯಾ ಕ್ಯಾ ಎದುರು , ಲಿಂಗಸೂಗೂರು ಮಾರ್ಗದ ಅನೇಕ ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಆದರೆ ಎಲ್ಲಿಯೂ ವಾಹನ ಸವಾರರಿಗೆ ಗೋಚರಿಸುವ ರೀತಿಯಲ್ಲಿ ಮಾರ್ಕಿಂಗ್ ಮಾಡಿಲ್ಲ. ಹೀಗಾಗಿ ಸಂಚಾರಿ ನಿಯಮಗಳ ಚಿಹ್ನೆಗಳನ್ನು ಹಾಕಲು ಮುಂದಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ರಾಯಚೂರು -ಸಿಂಧನೂರು, ಮುದಗಲ್ -ಇಳಕಲ್ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ನಡುವೆ ಸಂಚಾರಿ ಸುರಕ್ಷತಾ ಚಿಹ್ನೆಗಳನ್ನು ಜಿಲ್ಲೆಯ 28 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಠಾಣೆಯಿಂದ ಸುಮಾರು 6ಕ್ಕೂ ಅಧಿಕ ಸಂಚಾರಿ ಚಿಹ್ನೆಗಳನ್ನು ರಸ್ತೆ ಪಕ್ಕದಲ್ಲಿ ಅಳವಡಿಸಲಾಗಿದೆ. ರಸ್ತೆ ಪಕ್ಕದ ಸಂಚಾರಿ ನಿಯಮಗಳ ಚಿಹ್ನೆಗಳಿಂದ ಸವಾರರಿಗೆ ಮುಂದಿನ ಉಬ್ಬುಗಳು, ತಿರುವುಗಳು , ವೇಗದ ಮಿತಿಯ ಸುಮಾರು 100ಕ್ಕೂ ಅಧಿಕ ಚಿಹ್ನೆಗಳನ್ನು ಹಾಕಲಾಗಿದೆ.
ಅಪಘಾತ ತಡೆಗೆ ರಾಯಚೂರು - ಸಿಂಧನೂರು, ಮುದಗಲ್ -ಇಳಕಲ್ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ನಡುವೆ ಸಂಚಾರಿ ನಿಯಮಗಳ ಚಿಹ್ನೆಗಳನ್ನು ಅಳವಡಿಸಲಾಗಿದ್ದು, ಇನ್ನೂ ಕೆಲವಡೆ ಮಾಡಲು ಆಲೋಚಿಸಲಾಗುತ್ತಿದೆ. ವಾಹನಗಳ ಸವಾರರಲ್ಲೂ ಸಂಚಾರಿ ನಿಯಮ ಪಾಲನೆಗೆ ಜಾಗೃತಿ ಮೂಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.












Click it and Unblock the Notifications