ಮಹಾರಾಷ್ಟ್ರದ ಈರುಳ್ಳಿಗೆ ಬೇಡಿಕೆ: ಸಂಕಷ್ಟದಲ್ಲಿ ರಾಜ್ಯದ ರೈತರು
ರಾಯಚೂರು, ನವೆಂಬರ್ 8: ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ರಾಯಚೂರು ತಾಲೂಕಿನ ಈರುಳ್ಳಿ ಬೆಳೆ ಹಾನಿಯಾಗಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಸುರಿದ ನಿರೀಕ್ಷೆಗೂ ಮೀರಿದ ಮಳೆಯಿಂದ ಅನೇಕ ಬೆಳೆಗಳು ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ರಾಚೂರು ತಾಲೂಕಿನ ಕಡಂಗಂದೊಡ್ಡಿ, ಬಿಜನಗೇರಾ, ರಾಜೊಳ್ಳಿ, ಯದ್ಲಾಪುರ, ಕಟಕನೂರು, ಹನುಮಾಪುರು, ಬಿಚ್ಚಾಲಿ, ಮೂಡಲದಿನ್ನಿ ಭಾಗದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆದಿದ್ದಾರೆ. ಒಂದೆಡೆ ಮಳೆಯಿಂದ ಬೆಳೆ ಹಾನಿಯಾದರೆ ಇನ್ನೊಂದೆಡೆ ಬೆಳೆದ ಬೆಳೆಗೆ ಬೆಲೆ ಸಿಗದೇ ರೈತರು ಪರದಾಡುತ್ತಿದ್ದಾರೆ.
ಎರಡು ಮೂರು ವರ್ಷಗಳಿಂದ ಈರುಳ್ಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಸರಿಯಾಗಿ ಬೆಲೆ ಸಿಗದ ಕಾರಣ ರೈತರು ಕಣ್ಣಿರು ಸುರಿಸುವಂತಾಗಿದೆ. ಈರುಳ್ಳಿ ಸಸಿ ನಾಟಿ ಮಾಡು ವುದರಿಂದ ಹಿಡಿದು ಕೀಳುವವರೆಗೆ ಒಂದು ಎಕರೆಗೆ ಅಂದಾಜು ₹50ರಿಂದ ₹60 ಸಾವಿರ ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಕ್ವಿಂಟಾಲ್ ಗೆ ₹800ನಿಂದ ₹1000 ವರೆಗೆ ಇದೆ.

ಕಟಾವು ಮಾಡದೆ ಹೊಲದಲ್ಲೇ ಉಳಿದ ಈರುಳ್ಳಿ
ಸದ್ಯ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ಕ್ವಿಂಟಾಲ್ ಗೆ ₹800ನಿಂದ ₹1000 ನೀಡಿ ಖರೀದಿಸಲಾಗುತ್ತಿದೆ. ಬೆಳೆ ಸ್ವಲ್ಪ ಹಾನಿಯಾದರೆ ₹500-₹600ಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಹಾಕಿದ ಬಂಡವಾಳವೂ ವಾಪಸ್ ಬಾರದೆ ರೈತರು ನಷ್ಟಕ್ಕೆ ಈಡಾಗುವಂತಹ ಪರಿಸ್ಥಿತಿ ಇದೆ. ಅನೇಕ ರೈತರು ಮಾರುಕಟ್ಟೆಯಲ್ಲಿ ದರ ಕಡಿಮೆಯಿರುವ ಕಾರಣ ಈರುಳ್ಳಿ ಕಟಾವು ಮಾಡದೆ ದರ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿಂದ ಹೊಲಗಳಲ್ಲಿಯೇ ಬಿಟ್ಟಿದ್ದಾರೆ.
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರ ಹೊಲಗಳಿಗೆ ಭೇಟಿ ನೀಡಿ ಹತ್ತಿ, ಸೂರ್ಯಕಾಂತಿ, ಟೊಮಾಟೋ, ಈರುಳ್ಳಿ ಹಾಗೂ ಇತರೆ ಬೆಳೆಗಳ ಹಾನಿಯ ಕುರಿತು ಸಮೀಕ್ಷೆ ನಡೆಸಿ ತುರ್ತು ಪರಿಹಾರ ನೀಡಬೇಕು ಹಾಗೂ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ರೈತರು
ರಾಯಚೂರು ತಾಲೂಕು ಮಾತ್ರವಲ್ಲದೆ ದೇವದುರ್ಗ, ಲಿಂಗಸುಗೂರು, ಸಿರವಾರ ತಾಲೂಕು ಹಾಗೂ ನೀರಾವರಿ ಪ್ರದೇಶಗಳಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. "ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಗೆ ಖರೀದಿ ಮಾಡಬೇಕು ಎಂದು ನಿಯಮ ಇದೆ. ಆದರೆ ಇದುವರೆಗೆ ಈರುಳ್ಳಿ ಖರೀದಿ ಕೇಂದ್ರ ತೆರೆಯದೆ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ," ಎಂದು ರಾಯಚೂರು ತಾಲೂಕಿನ ಕಡಗಂದೊಡ್ಡಿ ಗ್ರಾಮದ ರೈತ ಮುಖಂಡ ಲಕ್ಷ್ಮಣಗೌಡ ತಮ್ಮ ರೈತ ಸಮೂದಾಯದ ಅಳಲು ತೋಡಿಕೊಂಡಿದ್ದಾರೆ.

ಸಂಕಷ್ಟದಲ್ಲಿ ರಾಯಚೂರು ಈರುಳ್ಳಿ ಬೆಳೆಗಾರರು
ಇನ್ನು ರಾಜ್ಯದಲ್ಲಿ ನಮ್ಮ ಸ್ಥಳೀಯ ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಯಚೂರು ಜಿಲ್ಲೆಯ ಸ್ಥಳೀಯ ರೈತರು ಬೆಳೆದಿರುವ ಈರುಳ್ಳಿ ದರವು ಪ್ರತಿ ಕ್ವಿಂಟಾಲ್‌ಗೆ ₹1 ಸಾವಿರ ಇದೆ. ಆದರೆ, ಹೊರರಾಜ್ಯಗಳ ಈರುಳ್ಳಿಗೆ ಎರಡು ಪಟ್ಟು ದರವಿದೆ. ಹೊರ ರಾಜ್ಯದ ಬೆಳೆಯ ದರ ₹2 ಸಾವಿರಕ್ಕಿಂತ ಹೆಚ್ಚಿನ ದರ ಇದ್ದರೂ ಇವುಗಳಿಗೆ ಭಾರಿ ಬೇಡಿಕೆ ಇದೆ. ಮಹಾರಾಷ್ಟ್ರ ರಾಜ್ಯದ ಈರುಳ್ಳಿ ರಾಯಚೂರಿನಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದೆ. ಹೋಟೆಲ್, ಖಾನಾವಳಿಯವರು ಹಾಗೂ ವಿವಿಧ ಕಾರ್ಯಕ್ರಮಕ್ಕಾಗಿ ಮಾತ್ರ ಅಗ್ಗದಲ್ಲಿ ಸ್ಥಳೀಯ ಈರುಳ್ಳಿಯನ್ನು ಖರೀದಿಸುತ್ತಾರೆ. ಇದು ಇನ್ನಷ್ಟು ರೈತರ ಬೇಸರಕ್ಕೆ ಕಾರಣವಾಗಿದೆ.

ಮಳೆಯಿಂದ ಈರುಳ್ಳಿ ನಾಶ: ಸಂಕಷ್ಟದಲ್ಲಿ ರೈತರು
ಇನ್ನು ಈ ಬಾರಿಯ ಮಳೆಯಿಂದ ಚಿಕ್ಕಮಗಳೂರಿನ ಶಿವನಿ, ಗೌರಪುರ, ಹೆಬ್ಬೂರು, ಮಾಳೇನಹಳ್ಳಿ, ಬಂಕನಕಟ್ಟೆ ಮುಗುಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಅಲ್ಲದೇ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯಲ್ಲೂ ಈರುಳ್ಳಿ ಬೆಳೆ ಅಧಿಕ ಮಳೆಯಿಂದ ನಾಶವಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ನೆಲದಲ್ಲೇ ಕೊಳೆತು ಹೋಗಿದೆ. ಸಾಲ-ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು, ಕೊಳೆತು ಹೋದ ಈರುಳ್ಳಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಮಳೆಯ ಅವಾಂತರದಿಂದ ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications