Raichur: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಸತ್ತ ಮಂಗಗಳು- ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥ!
ರಾಯಚೂರು ಜುಲೈ 4: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಂಗಗಳು ಸತ್ತು, ಮೂರು ದಿನ ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಖಾನಾಪೂರದಲ್ಲಿ ನಡೆದಿದೆ. ಈ ಟ್ಯಾಂಕ್‌ಗಳಿಂದ ಇಡೀ ಊರಿಗೇ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ತೆರೆದ ವಾಟರ್ ಟ್ಯಾಂಕ್ ಆಗಿದ್ದರಿಂದ ಮಂಗಗಳು ನೀರು ಕುಡಿಯಲು ಹೋಗಿ ಇದರಲ್ಲಿ ಬಿದ್ದು ಸಾವನ್ನಪ್ಪಿವೆ.
ಇದು ಅರಿವಿಗೆ ಬಾರದೆ ಗ್ರಾಮಸ್ಥರು ಮೂರು ದಿನಗಳ ಕಾಲ ಇದೇ ನೀರನ್ನು ಕುಡಿದಿದ್ದಾರೆ. ಅಸ್ವಸ್ಥರಾದವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇದರಿಂದಾಗಿ ಯಮನಾಳ ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಸಿಬ್ಬಂದಿಗಳ ವಿರುದ್ಧ ಜನರು ಹಿಡಿ ಶಾಪ ಹಾಕಿದ್ದಾರೆ.

ರಾಯಚೂರಿನಲ್ಲಿ ನೀರಿನ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ರಾಯಚೂರಿನಲ್ಲಿ ನೀರಿನ ಸಮಸ್ಯೆ ಇದೆ. ಈ ಭಾಗದ ಜನರಿಗೆ ಕುಡಿಯಲು ಯೋಗ್ಯವಾದ ನೀರು ಸಿಗುವುದಿಲ್ಲ. ಇಂದಿಗೂ ಹಲವೆಡೆ ಟ್ರಾಂಕ್‌ಗಳ ಮೂಲಕವೇ ಗ್ರಾಮಗಳಿಗೆ ನೀರು ಪೂರೈಸಲಾಗುತ್ತದೆ.
ಇದು ಮಾತ್ರವಲ್ಲದೆ ಕಾರ್ಖಾನೆಗಳ ಕೆಮಿಕಲ್ ಕೂಡ ನದಿ ನೀರಿಗೆ ಸೇರುವುದರಿಂದ ನೀರು ವಿಷವಾಗಿ ಹೋಗಿದೆ. ಶಕ್ತಿನಗರ ಬಳಿಯಿರುವ ಕೆಮಿಕಲ್ ಕಾರ್ಖಾನೆಗಳು ಬಿಡುವ ವೇಸ್ಟೇಜ್ ನೀರು ಕೃಷ್ಣಾ ನದಿ ಸೇರುತ್ತಿದ್ದು, ಇಲ್ಲಿಂದಲೇ ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣ ಭಾಗದ ಕೆಲ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ನದಿ ನೀರಿನಲ್ಲಿ ಕಾರ್ಖಾನೆಗಳ ಕೆಮಿಕಲ್ ಸೇರುವುದರಿಂದ ಜೀವಜಲವೇ ಜನರಿಗೆ ವಿಷವಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಇಲಾಖೆಯ ತಜ್ಞರು ಈ ಬಗ್ಗೆ ವರದಿ ನೀಡಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ವಿಷಕಾರಿ ಕೆಮಿಕಲ್ ವೇಸ್ಟೇಜ್ ನೀರನ್ನೇ ಕುಡಿಯಲು ಪೂರೈಸಲಾಗುತ್ತಿದ್ದು, ಇದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 30 ರಿಂದ 40ಕ್ಕೂ ಹೆಚ್ಚು ಕೆಮಿಕಲ್ ಕಾರ್ಖಾನೆಗಳು ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಗಳಿಗೆ ಕೆಮಿಕಲ್ ವೇಸ್ಟೇಜ್ ನೀರು ಬಿಡುತ್ತಿವೆ. ಇದರಿಂದ ಕೃಷ್ಣಾ ನದಿ ನೀರು ಕಲುಷಿತಗೊಳ್ಳುತ್ತಿದೆ. ಇದೇ ನೀರನ್ನೇ ನಗರಸಭೆ ಮತ್ತು ಆಯಾ ಗ್ರಾಮಗಳಿಗೆ ಪಂಚಾಯಿತಿ ಕುಡಿಯಲು ಪೂರೈಸುತ್ತಿದೆ.
ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಸುತ್ತಲಿನ ಕೆಮಿಕಲ್ ಕಾರ್ಖಾನೆಗಳು ಬಿಡುವ ವಿಷಕಾರಿ ವೇಸ್ಟೇಜ್ ನೀರು ಕೃಷ್ಣಾ ನದಿ ಸೇರಲಿದೆ. ತಾಲೂಕಿನ ತೆಲಂಗಾಣ ಗಡಿ ಭಾಗದ ಗುಂಜಳ್ಳಿ, ಹನುಮನದೊಡ್ಡಿ, ವಡ್ಲೂರು ಸೇರಿ ನಾಲ್ಕೈದು ಹಳ್ಳಿಗಳಿಗೆ ಇದೇ ನೀರನ್ನು ಪೂರೈಸಲಾಗುತ್ತದೆ. ಈ ಕುರಿತು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಕೆಮಿಕಲ್ ಮಿಶ್ರಿತ ನೀರು ಸೇವನೆಯಿಂದ ಹಲವರು ಕ್ಯಾನ್ಸರ್, ಟಿಬಿ, ಥೈರಾಯ್ಡ್ ರೋಗಗಳಿಂದ ಬಳಲುತ್ತಿರುವುದು ಕಂಡುಬಂದಿದೆ.
ಕಾರ್ಖಾನೆಗಳು ಹಳ್ಳಕ್ಕೆ ಬಿಡುವ ಕೆಮಿಕಲ್ ವೇಸ್ಟೇಜ್ ನೀರು ಕುಡಿದು ಕೇವಲ ಜನರು ಮಾತ್ರವಲ್ಲದೆ, ಜಾನುವಾರುಗಳು, ಮೀನುಗಳು, ಕುರಿ ಸೇರಿದಂತೆ ಇತರೆ ಪ್ರಾಣಿಗಳು ಸಹ ಸಾವನ್ನಪ್ಪುತ್ತಿವೆ. ಹೊಲಗಳಿಗೂ ಇದೇ ವಿಷಕಾರಿ ನೀರು ಹರಿಯುತ್ತಿದ್ದು, ಇದರಿಂದ ಇಳುವರಿ ಕುಂಠಿತಗೊಂಡಿದೆ.












Click it and Unblock the Notifications