ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನಲ್ಲಿ 2022ರಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜನವರಿ 4: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಮಿನಿವಿಧಾನಸೌಧ ನಿರ್ಮಾಣ, ವರ್ತುಲ ರಸ್ತೆ ನಿರ್ಮಾಣ ಹಾಗೂ ಟ್ರಕ್‌ ಟರ್ಮಿನಲ್‌ ನಿರ್ಮಾಣವಾಗುತ್ತವೆ ಎಂದು ಕನಸು ಕಾಣುವುದರಲ್ಲೇ 2022 ವರ್ಷ ಮುಗಿದು ಹೋಗಿದೆ. ಕೆಲವು ಕಾಮಗಾರಿಗಳಿಗೆ ಇನ್ನೂ ಭೂಮಿಪೂಜೆಯೇ ಆಗಿಲ್ಲ. ‍‍ಪ್ರಾರಂಭವಾಗಿದ್ದ ಕಾಮಗಾರಿಗಳನ್ನು ಗಡುವು ಮುಗಿದರೂ ಪೂರ್ಣಗೊಳಿಸಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಲ್ಲಿ ಕನಸು ಬಿತ್ತುವುದನ್ನು ಮುಂದುವರಿಸಿದ್ದಾರೆ.

2023 ನೂತನ ವರ್ಷದಲ್ಲಾದರೂ ಅಭಿವೃದ್ಧಿ ಕೆಲಸಗಳು ಪೂರ್ಣವಾಗಬಹುದು ಎನ್ನುವ ನಿರೀಕ್ಷೆಯಿಂದ ಮುನ್ನಡೆಯುವುದು ಜಿಲ್ಲೆಯ ಜನತೆಗೆ ಅನಿವಾರ್ಯವಾಗಿದೆ. ಇದು ವಿಧಾನಸಭೆ ಚುನಾವಣೆ ವರ್ಷ ಆಗಿರುವುದರಿಂದ ಕನಸುಗಳ ಬಿತ್ತನೆ ಇನ್ನೂ ಜೋರಾಗಲಿದೆ ಎನ್ನುವುದು ಜನರ ಅಭಿಪ್ರಾಯ. ವಾಸ್ತವವಾಗಿ ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಅತ್ಯಲ್ಪ, ಆಗಬೇಕಾಗಿರುವುದೇ ಬಹಳಷ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಪಡೆಯುವುದಕ್ಕೆ ಅವಕಾಶ ಇದ್ದರೂ ರಾಯಚೂರು ಜಿಲ್ಲೆಯು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದು ವಾಸ್ತವ.

ರಾಯಚೂರು ಜಿಲ್ಲೆಯಲ್ಲಿ ದಿಢೀರ್‌ ಬದಲಾದ ವಾತಾವರಣರಾಯಚೂರು ಜಿಲ್ಲೆಯಲ್ಲಿ ದಿಢೀರ್‌ ಬದಲಾದ ವಾತಾವರಣ

ರಸ್ತೆ ದುರಸ್ತಿ, ರಸ್ತೆ ನಿರ್ಮಾಣ, ಸಾಮಗ್ರಿಗಳ ಖರೀದಿ ಹಾಗೂ ಕಟ್ಟಡಗಳ ದುರಸ್ತಿಯಲ್ಲೇ ಅನುದಾನ ಬಳಕೆಯಾಗುತ್ತಿದೆ. ಶಾಶ್ವತವಾಗಿ ಬಳಕೆಯಾಗುವ ಬೃಹತ್‌ ಯೋಜನೆಗಳ ಬಗ್ಗೆ ಕ್ರಿಯಾಯೋಜನೆಯೂ ಆಗುತ್ತಿಲ್ಲ. ಅನುದಾನಕ್ಕೆ ಬೇಡಿಕೆಯೂ ಸಲ್ಲಿಕೆಯಾಗುತ್ತಿಲ್ಲ. ಯೋಜಿಸಿ ಪ್ರಾರಂಭಿಸಿದ್ದ ಜಿಲ್ಲಾ ಕ್ರೀಡಾಂಗಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಸಿಲ್ಲ ಎನ್ನುವುದು ಜನರ ಆರೋಪ.

ರಾಯಚೂರಿನಲ್ಲಿ ಕಲ್ಮಶ ನೀರು ಸೇವಿಸಿ ಜನರು ಪ್ರಾಣ ಕಳೆದುಕೊಂಡರು. ಇದರಿಂದ ಎಚ್ಚೆತ್ತುಕೊಂಡಿದ್ದರಿಂದ ಉದ್ಘಾಟನೆ ಭಾಗ್ಯವಿಲ್ಲದೆ ಬಿದ್ದಿದ್ದ ರಾಂಪುರ ನೂತನ ನೀರಿನ ಸಂಸ್ಕರಣೆ ಘಟಕವು ತರಾತುರಿ ಬಳಕೆಗೆ ತೆರೆದುಕೊಂಡಿದೆ. ಇದೇ ನೆಪದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಯಚೂರಿನಲ್ಲಿ ವಿಭಾಗೀಯ ಪ್ರಯೋಗಾಲಯ ನಿರ್ಮಾಣವಾಗಿ ಲೋಕಾಪರ್ಣೆಯೂ ಆಗಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರ್‌ಡಿಪಿಆರ್‌ ನೂತನ ಕಚೇರಿಗಳು ಉದ್ಘಾಟನೆಗೊಂಡಿವೆ. ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್‌ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಮುಕ್ತವಾಗಿದೆ. ಮಾವಿನಕೆರೆ ಪಕ್ಕದಲ್ಲಿ ಮತ್ಸ್ಯಾಲಯ ನಿರ್ಮಿಸಿ ಉದ್ಘಾಟಿಸಲಾಗಿದೆ.

ಬಾಕಿ ಉಳಿದ ಮಿನಿ ವಿಧಾನಸೌಧದ ಕಾಮಗಾರಿ

ಬಾಕಿ ಉಳಿದ ಮಿನಿ ವಿಧಾನಸೌಧದ ಕಾಮಗಾರಿ

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದ್ದು, ಅನುದಾನ ಮೀಸಲಿಡಲಾಗಿದೆ. ಆದರೆ ಭೂಮಿಪೂಜೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಮಿನಿ ವಿಧಾನಸೌಧದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಯಾವ ವರ್ಷ ಉದ್ಘಾಟನೆಯಾಗಿ ಬಳಕೆಗೆ ತೆರೆದುಕೊಳ್ಳುತ್ತದೆ ಎಂಬುದು ನಿರ್ಧಿಷ್ಟವಾಗಿಲ್ಲ. ಸಾರಿಗೆ ಇಲಾಖೆಯಿಂದ ಹೈಟೆಕ್‌ ಟ್ರ್ಯಾಕ್‌ ನಿರ್ಮಿಸುವ ಗಡುವು ಮುಗಿದಿದ್ದರೂ ಇನ್ನೂ ಉದ್ಘಾಟನೆ ಸಿದ್ಧವಾಗಿಲ್ಲ. ಐಐಐಟಿ ಕಟ್ಟಡ ಕಾಮಗಾರಿಯೂ ವಿಳಂಬವಾಗಿದೆ. ಹೊಸದಾಗಿ ಬೆಳಗಾವಿ-ರಾಯಚೂರು ಚತುಷ್ಪಥ ರಸ್ತೆ, ಅಕ್ಕಲಕೋಟೆ-ಕರ್ನೂಲ್‌ ಷಟ್ಪಥ ರಸ್ತೆಗಳ ಕಾಮಗಾರಿಗಳು ಆರಂಭವಾಗಿದ್ದು, ಅವುಗಳ ಸುತ್ತಮುತ್ತಲೂ ಆರ್ಥಿಕ ಚಟುವಟಿಕೆಗಳು ಬಿರುಸಾಗಿವೆ. ಮುಖ್ಯವಾಗಿ ರಿಯಲ್‌ ಎಸ್ಟೇಟ್‌ ದಂಧೆ ಗರಿಗೆದರಿದೆ. ಈ ಮೂಲಕ ಜಿಲ್ಲೆಯಲ್ಲಿ ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಬಹುದು ಎನ್ನುವ ನಿರೀಕ್ಷೆ ಜನರಲ್ಲಿದೆ.

ಉದ್ಘಾಟನೆಯಾಗದೇ ಉಳಿದ ಪಶು ಚಿಕಿತ್ಸಾಲಯ

ಉದ್ಘಾಟನೆಯಾಗದೇ ಉಳಿದ ಪಶು ಚಿಕಿತ್ಸಾಲಯ

ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಶಾಲಾ ಕಟ್ಟಡಗಳು, ಸಮುದಾಯ ಭವನ, ಅಂಗನವಾಡಿ ಕಟ್ಟಡ ಹೀಗೆ ವಿವಿಧ ಯೋಜನೆಗಳಲ್ಲಿ ಹಲವಾರು ಕಾಮಗಾರಿಗಳನ್ನು 2022ರಲ್ಲಿ ಕೈಗೊಳ್ಳಲಾಗಿದ್ದು, ಅದರಲ್ಲಿ ಕೆಲವು ಪೂರ್ಣಗೊಂಡರೆ, ಇನ್ನೂ ಕೆಲವು ಪ್ರಗತಿಯಲ್ಲಿವೆ.

ನಗರದ ಸುಕಾಲಪೇಟೆ ರಸ್ತೆಯಲ್ಲಿ ಪಶು ಚಿಕಿತ್ಸಾಲಯದ ನೂತನ ಕಟ್ಟಡವನ್ನು ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಲ್ಲಿ ₹2.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕಾಮಗಾರಿ ಮುಗಿದಿದ್ದು, ಉದ್ಘಾಟನೆ ಆಗಬೇಕಿದೆ. ನಗರದ ಕ್ರೀಡಾಂಗಣದ ಮುಂಭಾಗದಲ್ಲಿರುವ ರಸ್ತೆಯನ್ನು ₹ 46 ಲಕ್ಷ ವೆಚ್ಚದಲ್ಲಿ ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಕೈಗೊಂಡಿದ್ದು, ಕೆಲಸ ಪ್ರಗತಿಯಲ್ಲಿದೆ. ದೇವರಾಜ ಅರಸು ತರಕಾರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಯು ನಗರೋತ್ಥಾನ 3 ರಲ್ಲಿ ₹163.28 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜನಿಯರ್ ಸಿ.ಎಸ್. ಪಾಟೀಲ್‌ ತಿಳಿಸಿದ್ದಾರೆ.

ಮಾನ್ವಿ ತಾಲೂಕಿನಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳು

ಮಾನ್ವಿ ತಾಲೂಕಿನಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳು

ಮಾನ್ವಿ ತಾಲೂಕಿನಲ್ಲಿ 2022ರಲ್ಲಿ ಸಾರಿಗೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕಟ್ಟಡಗಳ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾಗಿವೆ. ಮಾನ್ವಿ ಪಟ್ಟಣದಲ್ಲಿ ₹ 6 ಕೋಟಿ ವೆಚ್ಚದ ಸಾರಿಗೆ ಬಸ್ ಡಿಪೊ, ₹ 4 ಕೋಟಿ ವೆಚ್ಚದ ಪರಿಶಿಷ್ಟ ವರ್ಗಗಳ ಬಾಲಕಿಯರ ವಸತಿ‌ ನಿಲಯ, ಪೋತ್ನಾಳ ಪಟ್ಟಣದಲ್ಲಿ ₹ 1.2 ಕೋಟಿ ವೆಚ್ಚದ ಪಿಯು ಕಾಲೇಜು ಕಟ್ಟಡ ಹಾಗೂ ₹40 ಲಕ್ಷ ವೆಚ್ಚದ ಪಶು ಆಸ್ಪತ್ರೆ ಕಟ್ಟಡ, ಚೀಕಲಪರ್ವಿ ಹಾಗೂ ಮದ್ಲಾಪುರ ಗ್ರಾಮಗಳಲ್ಲಿ ತಲಾ ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅರೋಗ್ಯ ಉಪಕೇಂದ್ರಗಳ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ.

₹ 5 ಕೋಟಿ ವೆಚ್ಚದ ತಾಲ್ಲೂಕು ಕ್ರೀಡಾಂಗಣ, ₹1 ಕೋಟಿ ವೆಚ್ಚದ ರೀಡಿಂಗ್ ರೂಮ್, ₹ 1.20 ಕೋಟಿ ವೆಚ್ಚದ ತಾಲೂಕು ಪಂಚಾಯಿತಿ ಕಟ್ಟಡ, ₹ 8 ಕೋಟೆ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ₹ 1 ಕೋಟಿ ವೆಚ್ಚದ ಚೀಕಲಪರ್ವಿ ಗ್ರಾಮದ ಹಳ್ಳದ ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.

ಮಸ್ಕಿ ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯ

ಮಸ್ಕಿ ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯ

ಮಾನ್ವಿ ಪಟ್ಟಣದಲ್ಲಿ ಅಂದಾಜು ₹10 ಕೋಟಿ ವೆಚ್ಚದಲ್ಲಿ ಪಟ್ಟಣದ ಬಾಲಕರ ಸರ್ಕಾರಿ ಪಿಯು ಕಾಲೇಜು, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ‌ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಮಸ್ಕಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರದ 2018-19 ಸಾಲಿನ ವಿಶೇಷ ಅನುದಾನ ₹ 2 ಕೋಟಿಯಲ್ಲಿ‌ ನಿರ್ಮಿಸಲಾದ ಪುರಸಭೆಯ ನೂತನ ಕಟ್ಟಡ ಕಾಮಗಾರಿ 2022 ರಲ್ಲಿ ಲೋಕಾರ್ಪಣೆಯಾಗಿದೆ. ಮಸ್ಕಿ ಸಂಚಾರಿ ನ್ಯಾಯಾಲಯದ ಕಟ್ಟಡ ಆಧುನೀಕರಣ ಕಾಮಗಾರಿ, ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ವಸತಿ ನಿಲಯ, ಮಾರಲದಿನ್ನಿಯಲ್ಲಿ ಬಾಲಕರ‌ ವಸತಿ ನಿಲಯ, ಜೆಸ್ಕಾಂ ಕಚೇರಿ ಕಟ್ಟಡ ಉದ್ಘಾಟನೆಗೊಂಡಿವೆ.

ಮಸ್ಕಿ ಪುರಸಭೆಯ ವಾಣಿಜ್ಯ ಸಂಕೀರ್ಣ, ಮುದಗಲ್ ಹಾಗೂ ಕವಿತಾಳ ಸ್ವಾಗತ ಕಾಮಾನು, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಸತಿ ನಿಲಯ, ಪಶು ಆಸ್ಪತ್ರೆ, ಮೆದಿಕಿನಾಳದ ಸರ್ಕಾರಿ ಪ್ರೌಢ ಶಾಲೆ ಹಾಗೂ ಆಸ್ಪತ್ರೆ ಕಟ್ಟಡ, ಮೂಡಲದಿನ್ನಿ ಬಾಬು ಜಗಜೀವನ ರಾಂ ಭವನ ಕಾಮಗಾರಿಗಳು ಪ್ರಗತಿಯಲ್ಲಿವೆ.

ನೂತನ ತಾಲ್ಲೂಕು ಕೇಂದ್ರವಾಗಿರುವ ಸಿರವಾರ ಪಟ್ಟಣದಲ್ಲಿ 2022 ರಲ್ಲಿಯೂ ಯಾವುದೇ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿ ಉದ್ಘಾಟನೆಗೊಂಡಿಲ್ಲ. ಏಕೈಕ ಬಸ್‌ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ. ಮಸ್ಕಿ ತಾಲೂಕು ಕೇಂದ್ರಕ್ಕೆ ಹೋಲಿಸಿದರೆ, ಸಿರವಾರಕ್ಕೆ ಲಭಿಸುತ್ತಿರುವ ಅನುದಾನ ಕಡಿಮೆ. ನೂತನ ತಾಲೂಕು ಕೇಂದ್ರಕ್ಕಾಗಿಯೇ ಕೆಕೆಆರ್‌ಡಿಬಿಯಿಂದ ವಿಶೇಷ ಅನುದಾನ ಪಡೆದು ಅಭಿವೃದ್ಧಿ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ.

English summary
Pending development works in Raichur in 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X