ಈಶಾನ್ಯ ಪದವೀಧರ ಕ್ಷೇತ್ರ: ಪೈಪೋಟಿ ಕೊಡ್ತಾರಾ ಡಾ.ರಝಾಕ್ ಉಸ್ತಾದ್?
ರಾಯಚೂರು, ಜೂನ್.08 : ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯ ಗುಂಗು ಇನ್ನೂ ಬಿಟ್ಟಿಲ್ಲ. ಇದೀಗ ವಿಧಾನ ಪರಿಷತ್ ಚುನಾವಣೆ ಬಂದಿದೆ. ಅದರಲ್ಲೂ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಹೈದ್ರಾಬಾದ್ ಕರ್ನಾಟಕದ ಹೋರಾಟಗಾರ ಡಾ.ರಝಾಕ್ ಉಸ್ತಾದ್ ಕಣದಲ್ಲಿದ್ದು ಕಾಂಗ್ರೆಸ್, ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಒಳಗೊಂಡಿರುವುದು ಈಶಾನ್ಯ ಪದವೀಧರ ಕ್ಷೇತ್ರ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿ, ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಹೈದ್ರಾಬಾದ್ ಕರ್ನಾಟಕ ಆರು ಜಿಲ್ಲೆಯ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಸೇರಿ 50 ತಾಲೂಕುಗಳು ಬರುತ್ತವೆ. ಒಟ್ಟು 82,054 ಪದವೀಧರರಿದ್ದು ಮತ ಚಲಾಯಿಸಲಿದ್ದಾರೆ.

ಕಾಂಗ್ರೆಸ್ನಿಂದ ಡಾ.ಚಂದ್ರಶೇಖರ್ ಪಾಟೀಲ್, ಬಿಜೆಪಿಯಿಂದ ಕೆ.ಬಿ.ಶ್ರೀನಿವಾಸ್, ಜೆಡಿಎಸ್ನಿಂದ ಎನ್.ಪ್ರತಾಪರೆಡ್ಡಿ, ಬಿಎಸ್ಪಿಯಿಂದ ಡಾ.ರಾಹುಲ್ ತಮ್ಮನ್, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಕಲಂ 371(ಜೆ)ರ ಸಮರ್ಪಕ ಜಾರಿಗಾಗಿ ಹೋರಾಟಗಳಲ್ಲಿ ಸಕ್ರಿಯರಾಗಿರುವ ರಾಯಚೂರಿನ ಡಾ.ರಝಾಕ್ ಉಸ್ತಾದ್ ಸ್ಪರ್ಧಿಸಿದ್ದಾರೆ.
ಹಲವಾರು ವರ್ಷಗಳಿಂದ ಹೈದ್ರಾಬಾದ್ ಕರ್ನಾಟಕ ಭಾಗದ ಸಮಸ್ಯೆಗಳ ವಿರುದ್ಧದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಡಾ.ರಝಾಕ್ ಉಸ್ತಾದ್ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.
ಕಳೆದ ಅವಧಿಯಲ್ಲಿ ಬಿಜೆಪಿ ಪಾಲಾಗಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ ಕಂಡು ಬರುತ್ತಿದ್ದರೂ ಪಕ್ಷೇತರ ಅಭ್ಯರ್ಥಿ ಡಾ.ರಝಾಕ್ ಉಸ್ತಾದ್ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ವಿದ್ಯಾರ್ಥಿ, ಯುವಜನರು ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಿದ್ದು, ಹೈದ್ರಾಬಾದ್ ಕರ್ನಾಟಕದ ಬಹುತೇಕ ಸಂಘಟನೆಗಳು ಉಸ್ತಾದ್ ಬೆಂಬಲಕ್ಕಿವೆ. ಪಕ್ಷಾತೀತವಾಗಿಯೂ ಹಲವರು ಕೈ ಜೋಡಿಸುವ ಸಾಧ್ಯತೆಯಿದೆ.












Click it and Unblock the Notifications