ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀಕಾ ವೈರಸ್‌ ಪತ್ತೆಯಾದರೂ ಎಚ್ಚೆತ್ತುಕೊಳ್ಳದ ನಗರಸಭೆ, ಪುರಸಭೆ: ಸೊಳ್ಳೆ ಕಾಟಕ್ಕೆ ಜನ ಹೈರಾಣು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌ 27: ರಾಜ್ಯದಲ್ಲಿಯೇ ಮೊದಲ ಜೀಕಾ ವೈರಸ್‌ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದಂತೆ ಮತ್ತೆ ಸೊಳ್ಳೆಗಳ ಉಪಟಳ ಚರ್ಚೆಗೆ ಬಂದಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಳ್ಳುತ್ತಿಲ್ಲ.

ಫಾಗಿಂಗ್‌ ಯಂತ್ರಗಳಿದ್ದಲ್ಲಿ ಸಿಬ್ಬಂದಿಯಿಲ್ಲ, ಸಿಬ್ಬಂದಿಗಳಿದ್ದಲ್ಲಿ ಫಾಗಿಂಗ್‌ ಯಂತ್ರಗಳು ಕೆಲಸ ಮಾಡುತ್ತಿಲ್ಲ ಎನ್ನುವುದರಲ್ಲೇ ನಗರಸಭೆ ಹಾಗೂ ಪುರಸಭೆ ಕಾಲಹರಣ ಮಾಡುತ್ತಿವೆ.

ಸರ್ಕಾರಿ ಲೆಕ್ಕದಲ್ಲಿ ಫಾಗಿಂಗ್‌ ಮಾಡುವುದನ್ನು ತೋರಿಸಲು ಅಲ್ಲಲ್ಲಿ ಕೆಲ ದಿನಗಳವರೆಗೂ ಫಾಗಿಂಗ್‌ ಮಾಡಲಾಗಿದೆ. ಆದರೆ, ಸೊಳ್ಳೆಗಳ ನಿಯಂತ್ರಣಕ್ಕೆ ನಿಯಮಿತವಾಗಿ ಕ್ರಮ ಕೈಗೊಳ್ಳುವುದನ್ನು ಸ್ಥಳೀಯ ಸಂಸ್ಥೆಗಳು ಬಹುತೇಕ ಮರೆತು ಹೋಗಿವೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಂಜೂರ ಹಣ್ಣಿನಿಂದ ವೈನ್ ತಯಾರಿಕೆ, ರೈತರಿಗೋಸ್ಕರ ಹೊಸ ತಂತ್ರಜ್ಞಾನರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಂಜೂರ ಹಣ್ಣಿನಿಂದ ವೈನ್ ತಯಾರಿಕೆ, ರೈತರಿಗೋಸ್ಕರ ಹೊಸ ತಂತ್ರಜ್ಞಾನ

35 ವಾರ್ಡ್‌ಗಳಿರುವ ರಾಯಚೂರು ನಗರದಲ್ಲಿ ಮೂರು ತಂಡಗಳನ್ನು ಫಾಗಿಂಗ್‌ ಮಾಡುವುದಕ್ಕೆ ನೇಮಕ ಮಾಡಲಾಗಿದೆ. ಇದುವರೆಗೂ ಎಲ್ಲ ವಾರ್ಡ್‌ಗಳಿಗೂ ಫಾಗಿಂಗ್‌ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕನಿಷ್ಟ ತಿಂಗಳಿಗೊಮ್ಮೆ ಫಾಗಿಂಗ್‌ ಮಾಡುವುದಕ್ಕೆ ನಗರಸಭೆಗೆ ಸಾಧ್ಯವಾಗುತ್ತಿಲ್ಲ. ದಿನಕ್ಕೆ ಒಂದು ವಾರ್ಡ್‌ನಲ್ಲಿ ಫಾಗಿಂಗ್‌ ಮಾಡುವುದು ಕಷ್ಟಸಾಧ್ಯವಾಗಿದೆ.

ಒಂದು ತಂಡದಲ್ಲಿ ಮೂವರು ಫಾಗಿಂಗ್‌ ಸಿಂಪಡಣೆ ಕಾರ್ಯ ಮಾಡುತ್ತಿದ್ದು, ಇದುವರೆಗೂ 10 ವಾರ್ಡ್‌ಗಳಲ್ಲಿ ಮಾತ್ರ ಫಾಗಿಂಗ್‌ ಮಾಡುವುದಕ್ಕೆ ಸಾಧ್ಯವಾಗಿದೆ. ಒಂದು ವಾರ್ಡ್‌ನಲ್ಲಿ ಫಾಗಿಂಗ್‌ ಮಾಡುವುದ್ಕೆ 10 ಲೀ. ಪೆಟ್ರೋಲ್‌ ಹಾಗೂ 60 ಲೀಟರ್‌ ಡೀಸೆಲ್‌ ಬೇಕಾಗುತ್ತಿದೆ. ರಾಸಾಯನಿಕ ಮಾತ್ರೆಗಳನ್ನು ಡೀಸೆಲ್‌ನಲ್ಲಿ ಮಿಶ್ರಣಗೊಳಿಸಿ, ಪೆಟ್ರೋಲ್‌ ಚಾಲಿತ ಯಂತ್ರದಿಂದ ಡೀಸೆಲ್‌ ಉರಿಸಿ ಸಿಂಪರಣೆ ಮಾಡಲಾಗುತ್ತಿದೆ.

ಬರೀ ಮೂರು ಫಾಗಿಂಗ್‌ ಯಂತ್ರಗಳಿರುವುದರಿಂದ ಹಾಗೂ ಬೆರಳೆಣಿಕೆ ಸಿಬ್ಬಂದಿಯಿರುವ ಕಾರಣ, ಬಿಟ್ಟುಬಿಡದೆ ಸಿಂಪರಣೆ ಕೈಗೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎನ್ನುವುದು ಫಾಗಿಂಗ್‌ ಮಾಡುವುದಕ್ಕೆ ನೇಮಿಸಿದ ಸಿಬ್ಬಂದಿಯ ಸಮಸ್ಯೆಯಾಗಿದೆ.. ಯಂತ್ರವು ಬಿಸಿಯಾಗುತ್ತದೆ. ಅಲ್ಲದೆ, ಸಿಂಪರಣೆ ಮಾಡುವ ಸಿಬ್ಬಂದಿಗೂ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ.

ಜನವಸತಿಗಳ ಪಕ್ಕದಲ್ಲಿಯೇ ತೆರೆದ ಚರಂಡಿ

ಜನವಸತಿಗಳ ಪಕ್ಕದಲ್ಲಿಯೇ ತೆರೆದ ಚರಂಡಿ

ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಮನೆಮನೆಗೂ ಭೇಟಿ ನೀಡಿ ಆಶಾ ಕಾರ್ಯಕರ್ತೆಯರ ಮೂಲಕ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಕೊಳಗೇರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ, ಸಂಚಲನವಿಲ್ಲದೆ ಸಂಗ್ರಹವಾಗುವ ಚರಂಡಿಗಳಿವೆ. ಗಿಡಗಂಟಿಗಳಲ್ಲಿ ತ್ಯಾಜ್ಯ ಬಿಸಾಕುವುದು ಹೆಚ್ಚಿನ ಪ್ರಮಾಣದಲ್ಲಿದೆ. ಇಂಥ ಕಡೆಗಳಲ್ಲಿ ಸೊಳ್ಳೆಗಳು ಸಂತಾನ ದುಪ್ಪಟ್ಟಾಗುತ್ತಿದೆ. ಈ ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕೆ ನಿಯಮಿತವಾಗಿ ಫಾಗಿಂಗ್‌ ಮಾಡುವುದು ಅಗತ್ಯವಿದೆ.

ಸಾರ್ವಜನಿಕ ನಲ್ಲಿಗಳಿರುವ ಕಡೆಗಳಲ್ಲಿ ನೀರು ಸಂಗ್ರಹವಾಗುವುದು ಸಾಮಾನ್ಯವಾಗಿದೆ. ರಾಯಚೂರಿನ ಬೇಹರೂನ್‌ ಕಿಲ್ಲಾ ಪಕ್ಕದ ಕಂದಕವು ಸೊಳ್ಳೆ ಉತ್ಪತ್ತಿಗೆ ಸಾಕಷ್ಟು ಕಾರಣವಾಗಿದೆ. ರಾಯಚೂರು ನಗರ ವ್ಯಾಪ್ತಿಯ ಅಸ್ಕಿಹಾಳ, ಯರಮರಸ್‌, ಹೊಸೂರ, ರಾಂಪೂರ ಕಡೆಗಳಲ್ಲಿ ಜನವಸತಿಗಳ ಪಕ್ಕದಲ್ಲಿಯೇ ತೆರೆದ ಚರಂಡಿ ತ್ಯಾಜ್ಯ ಸಂಗ್ರಹವಾಗಿದೆ. ತಿಪ್ಪೆಗಳ ರಾಶಿಯೂ ಸಾಕಷ್ಟಿವೆ. ಜನಜಾಗೃತಿ ಮೂಡಿಸುವುದು ಮತ್ತು ಫಾಗಿಂಗ್‌ ಮಾಡಿಸುವುದು ನಿಯಮಿತವಾಗಿ ನಡೆಸುವುದು ಅಗತ್ಯವಿದೆ.

ವಾರಕ್ಕೊಮ್ಮೆ ಫಾಗಿಂಗ್‌ ಮಾಡುವಂತೆ ಒತ್ತಾಯ

ವಾರಕ್ಕೊಮ್ಮೆ ಫಾಗಿಂಗ್‌ ಮಾಡುವಂತೆ ಒತ್ತಾಯ

ರಾಯಚೂರು ನಗರ 35 ವಾರ್ಡ್‌ಗಳಲ್ಲಿ ಕನಿಷ್ಠ ವಾರಕ್ಕೊಮ್ಮೆ ಫಾಗಿಂಗ್‌ ಮಾಡಿಸಿದರೆ ಮಾತ್ರ ಸೊಳ್ಳೆ ಉಪಟಳ ಕಡಿಮೆಯಾಗುತ್ತದೆ. ಮಾವಿನಕೆರೆ ಪಕ್ಕದ ಜಹೀರಾಬಾದ್‌ನಲ್ಲಿರುವ ಜನರು ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಆದರೆ ಫಾಗಿಂಗ್‌ ಮಾಡುವುದನ್ನು ನಿಯಮಿತಗೊಳಿಸುವ ಕೆಲಸ ಮಾಡುವುದಕ್ಕೆ ನಗರಸಭೆಯಲ್ಲಿ ಯಾವುದೇ ಯೋಜನೆಗಳಿಲ್ಲ. ಒತ್ತಡ ಬಂದಾಗೊಮ್ಮೆ ಮಾತ್ರ ಫಾಗಿಂಗ್‌ ಸಿಂಪರಣೆ ಮಾಡುವುದು ರೂಢಿಯಲ್ಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕ್ರಮ ವಹಿಸುತ್ತಿಲ್ಲ. ಹೀಗಾಗಿ ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲೂ ಫಾಗಿಂಗ್‌ ಯಂತ್ರಗಳನ್ನು ಇಟ್ಟು ಫಾಗಿಂಗ್‌ ಮಾಡಿಸುವುದು ತುರ್ತು ಅಗತ್ಯವಿದೆ.

ಸೊಳ್ಳೆ ಪರದೆಗಳನ್ನು ಬಳಸುವಂತೆ ಜನರಿಗೆ ಸೂಚನೆ

ಸೊಳ್ಳೆ ಪರದೆಗಳನ್ನು ಬಳಸುವಂತೆ ಜನರಿಗೆ ಸೂಚನೆ

ಸಿರವಾರ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುವ ವಾರ್ಡ್‌ಗಳಲ್ಲಿ ಪಟ್ಟಣ ಪಂಚಾಯಿತಿಯಿಂದ ಫಾಗಿಂಗ್ ಮಾಡುವ ಮೂಲಕ ಕೆಲ ಮಟ್ಟಿನ ನಿಯಂತ್ರಣ ಮಾಡಿದೆ ಚರಂಡಿ ಸ್ವಚ್ಚತೆ, ನೀರು ನಿಲ್ಲದಂತೆ ಎಚ್ಚರದಿಂದಿರಲು ನಿವಾಸಿಗಳಿಗೆ ಸೂಚಿಸಲಾಗಿದೆ. ಸೊಳ್ಳೆ ಪರದೆಯ ಬಳಕೆ ಮತ್ತು ಅಡ್ಡಪರಿಣಾಮವಿಲ್ಲದ ರಸಾಯನಿಕ ಗಳನ್ನು ಬಳಸಿ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.

'ಸೊಳ್ಳೆ ಉತ್ಪತ್ತಿಯಾಗದಂತೆ ಪ್ರತಿನಿತ್ಯ ಕಸ ವಿಲೇವಾರಿ, ಚರಂಡಿ ಸ್ವಚ್ಚತೆ, ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಮಣ್ಣು ಹಾಕಿ ಸ್ಪಚ್ಚತೆ ಕಾಪಾಡಲು ಕ್ರಮ ಕೈಗೊಂಡಿದ್ದೇವೆ' ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ತಿಳಿಸಿದ್ದಾರೆ.

ಮಿತಿ ಮೀರಿದ ಸೊಳ್ಳೆ ಕಾಟ

ಮಿತಿ ಮೀರಿದ ಸೊಳ್ಳೆ ಕಾಟ

ಪಿಂಚಣಿಪುರ (1), ಪಿಂಚಣಿಪುರ (2), ವಡ್ಡರ ಓಣಿ, ಗೌಳಿಪುರ, ಕೊರವರ ಓಣಿ ಸೇರಿದಂತೆ ಆರು ಕೊಳಚೆ ಪ್ರದೇಶ ಗುರುತಿಸಿ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಕೊಳಚೆ ಪ್ರದೇಶಗಳ ದುಸ್ಥಿತಿ ಒಂದು ರೀತಿಯದಾಗಿದ್ದರೆ, ಪ್ರತಿಷ್ಠಿತರ ವಾರ್ಡ್‌ಗಳಲ್ಲಿ ಸ್ವಯಂ ಅಹಂಭಾವದಿಂದ ಬಟ್ಟೆ ತೊಳೆವ, ಬಚ್ಚಲು ನೀರು ರಸ್ತೆಗೆ ಬೀಡುತ್ತಿದ್ದಾರೆ. ಘನತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ದುರ್ನಾತ ಜೊತೆ ರೋಗಗ್ರಸ್ಥ ಸ್ಥಳಗಳಾಗಿರುವುದು ಕಂಡು ಬರುತ್ತಿವೆ.

ಸ್ವಚ್ಛತೆ ಇಲ್ಲದೇ ಇರುವುದರಿಂದ ಸೊಳ್ಳೆಗಳು ನಿಯಂತ್ರಣ ಮೀರಿ ಬೆಳೆದಿವೆ. ಸೊಳ್ಳೆಗಳ ಕಚ್ಚುವಿಕೆಯಿಂದ ಜ್ವರ, ಡೆಂಘಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿವೆ. ಪುರಸಭೆ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದರೂ ಚರಂಡಿ ನಿರ್ಮಾಣ ಮಾಡುತ್ತಿಲ್ಲ. ಕೆಲವರು ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವುದು ಬೇಡ ಅಂದರು ಸಹಕಾರ ನೀಡುತ್ತಿಲ್ಲ ಎಂದು ಕೆಲ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

English summary
Nagarasabha and Purasabhe officers neglecting mosquito problem in Raichur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X