ಅಭಿಮಾನಿಯ ರಸ್ತೆ ಬದಿ ಅಂಗಡಿ ಚಹಾ ಸೇವಿಸಿದ 'ಕಿಚ್ಚ'; ಶಿವನಗೌಡ ಗೆದ್ದರೆ ನಾನು ಗೆದ್ದಂತೆ ಎಂದ 'ಸುದೀಪ್'
ರಾಯಚೂರು, ಮೇ 4: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇರುವಾಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದ್ದು, ಗೆಲುವಿಗಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಎದುರಾಳಿಗಳನ್ನು ಸೋಲಿಸಲು ಕೊನೆಯ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ನಾಯಕರು ಮಾತ್ರವಲ್ಲದೆ, ಸಿನಿಮಾ ತಾರೆಯರು ಪ್ರಚಾರದ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉತ್ತರ ಕರ್ನಾಟಕದ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಇಂದು (ಮೇ 4, ಗುರುವಾರ) ನಟ ಕಿಚ್ಚ ಸುದೀಪ್ ಅವರು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ್ ಪರ ಭರ್ಜರಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದರು.
ದೇವದುರ್ಗ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾಷಣ ಮಾಡಿದ ಕಿಚ್ಚ ಸುದೀಪ್, "ಮ್ಮ ಹಿರಿಯ ಅಣ್ಣನಂತಿರುವ ಶಿವನಗೌಡ ನಾಯಕ್‌ರನ್ನ 4 ಸಾರಿ ಗೆಲ್ಲಿಸಿದ್ದೀರಾ ಅಂದರೆ, ಅವರು ಒಳ್ಳೆಯವರು ಅಂತಾ ಅರ್ಥ. ಜನರೂ ಬುದ್ಧಿವಂತರಾಗಿದ್ದಾರೆ ಎಂದರ್ಥ. ಎಜುಕೇಶನ್ ಲೇಔಟ್ ಮಾಡಿ ಶಿವನಗೌಡ ಯಶಸ್ವಿ ಮಾಡಿದ್ದಾರೆ. ಅವರನ್ನು ದೇವದುರ್ಗದಲ್ಲಿ ಮತ್ತೊಮ್ಮೆ ಗೆಲ್ಲಿಸಿ," ಎಂದು ಅಭಿಮಾನಿಗಳಲ್ಲಿ ಮತ್ತು ಮತದಾರರಲ್ಲಿ ಮನವಿ ಮಾಡಿದರು.
"ಶಿವನಗೌಡ ನಾಯಕ್ ಬೇರೆ ಯಾರೂ ಅಲ್ಲ ಅವ ನಮ್ಮವರಿದ್ದಾರೆ
ಶಿವನಗೌಡರಿಗೆ ವೋಟ್ ಹಾಕುವುದು ಒಂದೇ, ನನ್ನ ಗೆಲ್ಲಿಸೋದು ಒಂದೇ. ನಾನು ಚುನಾವಣಾ ಪ್ರಚಾರ ಮಾಡುತ್ತಿರಬಹುದು. ಆದರೆ ನಾನೊಬ್ಬ ಸಾಮಾನ್ಯ ಕಲಾವಿದ. ಶಿವನಗೌಡ ನಾಯಕ್ ಕೆಲಸ ಮಾಡಿದ್ದು ಸರಿ ಅನ್ನಿಸಿದರೆ, ಅವರು ನಿಮ್ಮವರು ಅನಿಸಿಕೊಂಡಿದ್ದರೆ ಉಳಿಸಿಕೊಳ್ಳಿ. 10ನೇ ತಾರೀಕು ತಪ್ಪದೇ ಮತದಾನ ಮಾಡಿ," ಎಂದು ಕಿಚ್ಚ ಸುದೀಪ್ ಮನವಿ ಮಾಡಿದರು.

ರಸ್ತೆ ಬದಿ ಅಂಗಡಿಯ ಚಹಾ ಸೇವಿಸಿದ ಮಾಣಿಕ್ಯ
ಇನ್ನು ದೇವದುರ್ಗ ಪಟ್ಟಣದಲ್ಲಿ ರೋಡ್ ಶೋ ಮಧ್ಯೆ ಕಿಚ್ಚ ಸುದೀಪ್ ಅವರು ರಸ್ತೆ ಬದಿಯ ಸಣ್ಣ ಚಹಾ ಅಂಗಡಿಯ ಚಹಾ ಸೇವಿಸಿ ಖುಷಿಪಟ್ಟರು.
ದೇವದುರ್ಗದ ಬಸವೇಶ್ವರ ವೃತ್ತದಲ್ಲಿ ರೋಡ್ ಶೋ ವೇಳೆ ಚಹಾದಂಗಡಿಯ ಅಭಿಮಾನಿ ಕಿಚ್ಚ ಸುದೀಪ್‌ಗೆ ಟೀ ತಂದುಕೊಟ್ಟರು. ಟೀ ಸೂಪರ್ ಅಂತಾ ಕೈ ಸನ್ನೆ ಮಾಡುತ್ತಾ ಕಿಚ್ಚ ಖುಷಿ ವ್ಯಕ್ತಪಡಿಸಿದರು. ಚಹಾ ಕುಡಿದು ಮತ್ತೆ ಬಿಜೆಪಿ ಕೆ. ಶಿವನಗೌಡ ನಾಯಕ್ ಪರ ಪ್ರಚಾರದಲ್ಲಿ ತೊಡಗಿ ಮತಯಾಚನೆ ಮಾಡಿದರು.
ಶುಕ್ರವಾರ ವಿ. ಸೋಮಣ್ಣ ಪರ ಸುದೀಪ್ ಪ್ರಚಾರ
ಚಾಮರಾಜನಗರ ಕ್ಷೇತ್ರ ಪ್ರಚಾರದ ಅಖಾಡಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಡಲಿದ್ದು, ಚಾಮರಾಜನಗರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ.

ಕಿಚ್ಚ ಸುದೀಪ್ ಅವರು ವಿ. ಸೋಮಣ್ಣ ಸ್ಪರ್ಧಿಸುತ್ತಿರುವ ಚಾಮರಾಜನಗರ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಚಾಮರಾಜನಗರ ಜಿಲ್ಲಾದ್ಯಂತ ಇರುವ ನಾಯಕ ಸಮುದಾಯ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗಾಳ ಹಾಕಲೂ ಬಿಜೆಪಿ ತಂತ್ರ ರೂಪಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನ್ ಕುಮಾರ್, ಚಾಮರಾಜನಗರದ ವಿ. ಸೋಮಣ್ಣ ಮತ್ತು ಕೊಳ್ಳೇಗಾಲದ ಎನ್. ಮಹೇಶ್ ಪರವಾಗಿ ಕಿಚ್ಚ ಸುದೀಪ್ ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಲಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications