ರಾಯಚೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಉತ್ತಮ ಸ್ಪಂದನೆ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಸ್‌ನಿಂದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಪ್ರಾರಂಭಿಸಿದ್ದಾರೆ.
ರಾಮನಗರ ಜನವರಿ 27: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಸ್‌ನಿಂದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಪ್ರಾರಂಭಿಸಿದರು.
ಜೆಡಿಎಸ್‌ನ ಪಂಚರತ್ನ ರಥಯಾತ್ರೆ ದೇವದುರ್ಗ ತಾಲೂಕಿನ ಜಾಲಹಳ್ಳಿ, ಗಾಣದಾಳ, ಗಲಗ, ಅರಕೇರಾ, ಕೋತ್ತದೊಡ್ಡಿ, ಸಾನ್ವಿಗೇರಾ ತಾಂಡಾ, ದೇವದುರ್ಗ, ಗಬ್ಬೂರು ಮೂಲಕ ಸಾಗಿ ಬಂದಿದ್ದು, ಮಸರಕಲ್‌ನಲ್ಲಿ ಜೆಡಿಎಸ್ ನಾಯಕರು ಗ್ರಾಮ ವಾಸ್ತವ್ಯ ನಡೆಸಿದರು. ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಸ್ಪಂದನೆ ದೊರಕಿದೆ.
ಜಾಲಹಳ್ಳಿಯಲ್ಲಿ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಆಡಳಿತ ನಡೆಸಲು ಕಾಂಗ್ರೆಸ್, ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದೀರಿ. ಆದರೆ, ರಾಜ್ಯದ ಸಮಗ್ರ ಅಭಿವೃದ್ಧಿಯಾಗಿಲ್ಲ. ಬಡವರು, ರೈತರು, ಕೂಲಿಕಾರರು, ಮಹಿಳೆರ ಸಮಗ್ರ ಅಭಿವೃದ್ಧಿಗಾಗಿ ನಮಗೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು.

ಎಲ್‌ಕೆಜಿಯಿಂದ ಪಿಯುಸಿವರೆಗೆ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ
ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ ಬಡತನ ನಿರ್ಮೂಲನೆ ಮಾಡಲಾಗಿಲ್ಲ. ಇದಕ್ಕೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಕಾರಣವಾಗಿವೆ. ರಾಜ್ಯದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಂಚರತ್ನ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ನೀಡುವುದು, ಪ್ರತಿಯೊಂದು ಗ್ರಾಪಂಯಲ್ಲಿ ಸುಸಜ್ಜಿತ ಸರ್ಕಾರಿ ಶಾಲೆ ತೆರೆದು ಎಲ್‌ಕೆಜಿಯಿಂದ ಪಿಯುಸಿವರೆಗೆ ಬಡವರ ಮಕ್ಕಳಿಗೆ ಉಚಿತ ಗುಣಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣ ನೀಡಲಾಗುವುದು ಎಂದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ
ಪಂಚರತ್ನ ಐದು ಕಾರ್ಯಕ್ರಮದಲ್ಲಿ ರೈತರು, ಆರೋಗ್ಯ, ಶಿಕ್ಷಣ, ವಸತಿ ಸೇರಿ ಸರ್ವ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒಗಿಸಲಾಗುವುದು. ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಅಲೆಮಾರಿ ಕುಟುಂಬಗಳಿಗೆ ಶಾಶ್ವತ ವಸತಿ ಕಲ್ಪಿಸಲು ಪ್ರತಿ ಗ್ರಾಮ ಪಂಚಾಯತಿಗೆ 15 ಎಕರೆ ಜಾಗ ಖರೀದಿ ಮಾಡಿ ನಿವೇಶನ ಸಹಿತ ಮನೆ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರ ಆರೈಕೆಗೆ ಪ್ರತಿ ಕುಂಟುಂಬಕ್ಕೆ ಮಾಸಿಕ 5 ಸಾವಿರ ರೂ, ವಿಧವೆಯರು, ಮದುವೆಯಾಗದ ಸ್ತ್ರೀಯರು, ಅಂಗವಿಲಕರಿಗೆ ಮಾಸಿಕ 2,500 ರೂಪಾಯಿ ವೇತನ ನೀಡಲಾಗುವುದು ಎಂದರು.

ಒಂದೇ ತಾಯಿ ಮಕ್ಕಳಂತೆ ಬದುಕಲು ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಬೇಕು
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, "ರಾಜ್ಯದ ಮತದಾರರು ಕಾಂಗ್ರೆಸ್, ಬಿಜೆಪಿಗೆ ಅವಕಾಶ ನೀಡಿದ್ದಾರೆ. ಜೆಡಿಎಸ್‌ಗೂ ಒಂದು ಅವಕಾಶ ನೀಡಿದರೆ ಅಭಿವೃದ್ಧಿ ಎನ್ನುವುದು ಏನು ಎನ್ನುವುದನ್ನು ಮಾಡಿ ತೋರಿಸುತ್ತೇವೆ. ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬದುಕಲು ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಬೇಕು. ಕಷ್ಟದಲ್ಲಿರುವ ಬಡವರ ಮಗಳು ಕರೆಮ್ಮ ನಿಮ್ಮ ಬೆನ್ನಿಗೆ ನಿಂತಿದ್ದು, ಆಕೆಗೆ ಒಂದು ಅವಕಾಶ ನೀಡುವಂತೆ" ಮನವಿ ಮಾಡಿದರು.

ಬಡವರ ಸಮಸ್ಯೆ ಅಧ್ಯಯನ ಮಾಡಿ ಪಂಚರತ್ನ ಯೋಜನೆ ರೂಪಿಸಿದ್ದಾರೆ
ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಮಾತನಾಡಿ, "ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಮಾತ್ರ ಬಡವರು, ರೈತರು, ಮಹಿಳೆಯರ ಕಷ್ಟಗಳಿಗೆ ಪರಿಹಾರ ಸಿಗುವ ಜತೆಗೆ ಬಡತನ ನಿವಾರಣೆ ಮಾಡಲು ಸಾಧ್ಯ. ಬಡವರ ಕಷ್ಟ ಅರಿತು ಕುಮಾರಣ್ಣ ರಾಜ್ಯಾದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಬಡವರ ಸಮಸ್ಯೆ ಅಧ್ಯಯನ ಮಾಡಿ ಪಂಚರತ್ನ ಯೋಜನೆ ರೂಪಿಸಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಪಂಚರತ್ನದಲ್ಲಿ ಪರಿಹಾರವಿದೆ ಎಂದರು.












Click it and Unblock the Notifications