ಆನ್‌ಲೈನ್ ಬೆಟ್ಟಿಂಗ್ ದಂಧೆ ಬಂದ್: ಜೆಡಿಎಸ್ ವಾಗ್ದಾನ

ಲಿಂಗಸುಗೂರು: ಆಧುನಿಕ ಜಮಾನದಲ್ಲಿ ಯುವ ಜನರನ್ನ ಸುಳಿಗೆ ಸಿಲುಕಿಸುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕುವುದಾಗಿ ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದುಬಂಡಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಎಚ್‌ಡಿಕೆ ಮಾತನಾಡಿದರು. ಈ ವೇಳೆ ಆನ್‌ಲೈನ್ ಬೆಟ್ಟಿಂಗ್ ದಂಧೆ ವಿರುದ್ಧ ಹರಿಹಾಯ್ದರು.

ಬೆಟ್ಟಿಂಗ್ ದಂಧೆಯಿಂದಾಗಿ ಹಳ್ಳಿ ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಆನ್ಲೈನ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಬೆಟ್ಟಿಂಗ್ ಇತ್ಯಾದಿ ದಂಧೆಗಳಿಂದ ಬಡವರ ಮಕ್ಕಳು, ಹಳ್ಳಿಯ ಮಕ್ಕಳು ಕೂಡ ಹಾಳಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಅವರ ಭವಿಷ್ಯವನ್ನು ಭದ್ರ ಮಾಡಬೇಕಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಇಂಥ ಅನಿಷ್ಟಗಳನ್ನು ತೊಳಗಿಸುತ್ತೇನೆ ಎಂದಿದ್ದಾರೆ.

HD Kumaraswamy assured that if JDS comes to power in Karnataka online betting will ban

ಸಾರಾಯಿ, ಲಾಟರಿ ನಿಷೇಧ ಮಾಡಿದ್ದೆ

ಹಿಂದೆ ಸಾರಾಯಿ ನಿಷೇಧ ಮಾಡಲು ತಾಯಂದಿರು ಒತ್ತಾಯಿಸಿದರು, ಅವರ ಕಷ್ಟಕ್ಕೆ ಪರಿಹಾರವಾಗಿ ಸಾರಾಯಿ ನಿಷೇಧ ಮಾಡಿದ್ದೆ. ಒಂದಂಕಿ ಲಾಟರಿ ನಿಷೇಧ ಮಾಡಿದೆ, ನಾನು ಸರಕಾರ ಮಾಡಿದ ಸಂದರ್ಭದಲ್ಲಿ ತಾಯಂದಿರು, ಅಕ್ಕತಂಗಿಯರ ಬೇಡಿಕೆ ಈಡೇರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು. ನಾನು ರಾಜಕೀಯ ಭಾಷಣ ಮಾಡಿ, ಇನ್ನೊಬ್ಬರನ್ನು ನಿಂದನೆ ಮಾಡಲು ಬಂದಿಲ್ಲ. ನನ್ನ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳಲು ಬಂದಿದ್ದೇನೆ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ಒಂದು ಬಾರಿ ಪರೀಕ್ಷೆ ಮಾಡಿ

ಕಾಂಗ್ರೆಸ್ ನಾಯಕರು ಪ್ರಣಾಳಿಕೆ ರಿಲೀಸ್ ಮಾಡಿದ್ದಾರೆ. ನಾಡಿನ ಜನತೆಗೆ ಬೇಡುವ ಸ್ಥಿತಿ ತಂದೊಡ್ಡುವ ರೀತಿ ಇದೆ ಕಾಂಗ್ರೆಸ್ ಪ್ರಣಾಳಿಕೆ. ನಮ್ಮ ಪಂಚರತ್ನ ಕಾರ್ಯಕ್ರಮ ಹಾಗಲ್ಲ, ಎಲ್ರೂ ಸದೃಢವಾಗಿ ಇರಬೇಕು ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುವಂತೆ ಶಕ್ತಿ ತುಂಬಲಿದೆ. ಒಂದೇ ಒಂದು ಬಾರಿ ಪರೀಕ್ಷೆ ಮಾಡಿ. ನಿಮ್ಮ ಕಷ್ಟಗಳಿಗೆ ಮುಕ್ತಿ ಕೊಡ್ತೇನೆ. ಹೇಳಿದಂತೆ ಮಾಡದಿದ್ದರೆ ಇನ್ನೆಂದು ನಿಮ್ಮೆದುರು ಬರೋದಿಲ್ಲ ಎಂದು ಅವರು ಮನವಿ ಮಾಡಿದರು.

HD Kumaraswamy assured that if JDS comes to power in Karnataka online betting will ban

ಇಂಗ್ಲಿಷ್ ಶಿಕ್ಷಣದ ಆಶ್ವಾಸನೆ

5 ವರ್ಷದ ಆಡಳಿತದ ಸರ್ಕಾರವನ್ನು ಜನತಾದಳಕ್ಕೆ ಕೊಡಿ. ನೀವು ಮೆಚ್ಚುವ ಆಡಳಿತ ಕೊಡುತ್ತೇನೆ. ಅಧಿಕಾರಕ್ಕೇರಿ ನಾನು ಮುಖ್ಯಮಂತ್ರಿ ಆಗಿ ಮೆರೆಯಬೇಕು ಅಂತಲ್ಲ. ಎಲ್ಲರೂ ನೆಮ್ಮದಿಯಿಂದ ಬಾಳುವಂತ ಸರ್ಕಾರ ಕೊಡುತ್ತೇನೆ. ಶ್ರೀಮಂತ ಮಕ್ಕಳಿಗೆ ಸಮಾನವಾದ ಶಿಕ್ಷಣವನ್ನ ಬಡವರ ಮಕ್ಕಳೂ ಪಡೆಯಬೇಕು. ಬಡವರ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತೇನೆ ಎಂದು ಕುಮಾರಸ್ವಾಮಿ ಆಶ್ವಾಸನೆ ನೀಡಿದರು.

ಸರ್ವ ಜನಾಂಗದ ಶಾಂತಿಯ ತೋಟ

ಜೆಡಿಎಸ್ ಸರಕಾರ ಬಂದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಉಚಿತ ಚಿಕಿತ್ಸೆ ಸಿಗಲಿದೆ. ಅಪರೂಪದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೂಡ ಚಿಕಿತ್ಸೆ ಕೊಡಿಸುತ್ತೇವೆ. ನಾನು ಜಾತಿ-ಧರ್ಮ ನೋಡೋಡಿಲ್ಲ. ಸರ್ವರಿಗೂ ಒಳ್ಳೆಯದಾಗಬೇಕು, ಸಮಾನ ಸೌಲಭ್ಯ ಸಿಗಬೇಕು. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವೇ ನನ್ನ ಗುರಿ ಎಂದರು ಎಚ್.ಡಿ. ಕುಮಾರಸ್ವಾಮಿ.

ನೀರಾವರಿ ಯೋಜನೆಗಳಿಗೆ ಆದ್ಯತೆ

ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಕಾರ್ಯಗತ ಮಾಡುತ್ತೇವೆ. ಜನತಾ ಜಲಧಾರೆ ಹೆಸರಿನಲ್ಲಿ ಯೋಜನೆ ರೂಪಿಸಿದ್ದೇವೆ. ಕೃಷಿ, ನೀರಾವರಿಗೆ ಸಮೃದ್ಧ ನೀರು ಕೊಡುವುದು ನಮ್ಮ ಬದ್ಧತೆ. ಅದನ್ನು ಮಾಡಿ ತೋರಿಸುತ್ತೇವೆ.
ಜಮೀನಿಲ್ಲದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ. ವೃದ್ಧಾಪ್ಯ ವೇತನವಾಗಿ ತಿಂಗಳಿಗೆ 5 ಸಾವಿರ ನೀಡಲಾಗುವುದು. ಈ ನಾಡಿನ ಬಡತನ ಹೋಗಲಾಡಿಸಲು ಜನತಾ ಸರ್ಕಾರ ತನ್ನಿ ಎಂದು ಜನರನ್ನು ಮಾಜಿ ಸಿಎಂ ಕೋರಿದರು.

ಸಿದ್ದುಬಂಡಿಗೆ ಮಾಜಿ ಸಿಎಂ ಎಚ್‌ಡಿಕೆ ಧೈರ್ಯ

ಚುನಾವಣೆಗೆ ವಿರೋಧಿ ಪಕ್ಷಗಳು ಈಗ ಹಣವನ್ನು ನೀರಿನಂತೆಯೇ ಚೆಲ್ಲುತ್ತಿದ್ದಾರೆ. ನಾನು ದುಡ್ಡನ್ನ ಎಲ್ಲಿಂದ ತರಲಿ ಅಂತಾ ಸಿದ್ದುಬಂಡಿ ಕಣ್ಣೀರು ಹಾಕುತ್ತಿದ್ದಾರೆ ಎಂದ ಕುಮಾರಸ್ವಾಮಿ, ಸಿದ್ದುಬಂಡಿಗೆ ನಾನು ಸಮಾಧಾನ ಹೇಳಿದ್ದೇನೆ. ಧೈರ್ಯ ತುಂಬಿದ್ದೇನೆ. ಜನರೇ ನಿಮ್ಮ ಆಸ್ತಿ ಅಂತಾ ಅವರಿಗೆ ಹೇಳಿ ಸಮಾಧಾನಪಡಿಸಿದ್ದೇನೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಕಾರ್ಯಾಧ್ಯಕ್ಷ ಆಲ್ಕೊಡ್ ಹನುಮಂತಪ್ಪ, ಮಾಜಿ ಸಚಿವ ಹಾಗೂ ಸಿಂಧನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+