Lumpiskin: ಲಿಂಗಸೂಗೂರಿನಲ್ಲಿ ಹೆಚ್ಚಾದ ಜಾನುವಾರುಗಳ ಚರ್ಮಗಂಟು ರೋಗ: ಸಾವಿನ ಸಂಖ್ಯೆ ಏರಿಕೆ!
ರಾಯಚೂರು ನವೆಂಬರ್ 29: ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಸುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಚರ್ಮಗಂಟು ರೋಗ (ಲಂಪಿಸ್ಕಿನ್) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಜತೆಗೆ ಅವುಗಳ ಸಾವಿನ ಸಂಖ್ಯೆ ಕೂಡ ಏರುತ್ತಿದೆ. ಇಲ್ಲಿಯವರೆಗೆ 3 ಜಾನುವಾರು ಸಾವನ್ನಪ್ಪಿವೆ.
ರೋಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜಾನುವಾರುಗಳಿಗೆ ಅತಿಯಾದ ಜ್ವರ, ಕಣ್ಣಿನಲ್ಲಿ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು, ಕುಂಟುವುದು, ಚರ್ಮದ ಮೇಲೆ ದಪ್ಪದ ಗಂಟುಗಟ್ಟುವುದು, ನಂತರ ಗಂಟು ಒಡೆದು ಗಾಯವಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಜಾನುವಾರುಗಳು ಸಾಯುತ್ತಿವೆ.

ಈ ಹಿಂದೆ ಚರ್ಮ ಗಂಟು ರೋಗ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಮುದಗಲ್ ಪಟ್ಟಣದಲ್ಲಿ ನಡೆಯುತ್ತಿದ್ದ ಜಾನುವಾರು, ಕುರಿ, ಮೇಕೆ ಸಂತೆಗಳನ್ನು ನಿಷೇಧಿಸಿದ್ದರು. ಆಗ ಸಾವಿನ ಸಂಖ್ಯೆ ಕಡಿಮೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರವಾಗಿ ಹರಡುತ್ತಿದೆ. ಪಶು ಇಲಾಖೆ ಸರ್ವೆ ಪ್ರಕಾರ ತಾಲ್ಲೂಕಿನಲ್ಲಿ 16 ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದೆ. ಆದರೆ ಪಶು ಇಲಾಖೆ ವೈದ್ಯರ ಗಮನಕ್ಕೆ ಬಾರದೆ ಇರುವ ಪ್ರಕರಣಗಳು ಹೆಚ್ಚಿವೆ ಎಂದು ಹೇಳುತ್ತಿದ್ದಾರೆ ರೈತರು. ರೋಗ ಇದ್ದ ಜಾನುವಾರುಗೆ ಕಚ್ಚಿದ ಸೊಳ್ಳೆಯು ಆರೋಗ್ಯವಂತ ಜಾನುವಾರಿಗೆ ಕಚ್ಚಿದಾಗ ಹರಡುತ್ತದೆ.
'ರೋಗ ಕಾಣಿಸಿಕೊಂಡು 7 ದಿನದವರೆಗ ಜಾನುವಾರು ಜೀವಂತವಾಗಿ ಇರುತ್ತದೆ. ಅಷ್ಟರಲ್ಲಿ ರೈತರು ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು. ಮೃತಪಟ್ಟ ಜಾನುವಾರುಗಳು ಸಣ್ಣ ಕರುಗಾಳಗಿವೆ. ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮೃತಪಟ್ಟಿವೆ' ಎನ್ನುತ್ತಾರೆ ಲಿಂಗಸುಗೂರು ತಾಲ್ಲೂಕು ಪಶು ವೈದ್ಯಾಧಿಕಾರಿ ರಾಚಪ್ಪ.
'ಪಶುಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಉಳುಮೆ ಮಾಡುವ ಹೋರಿ, ಹಾಲು ಕೊಡುವ ಹಸು, ಎಮ್ಮೆ ಸೇರಿದಂತೆ ಎಲ್ಲ ವಯೋಮಾನದ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮತ್ತೊಂದಕ್ಕೆ ಬಂದಿರುತ್ತದೆ. ರೋಗ ಆರಂಭದಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು. ಈಗ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಹಾಲು ಕೊಡುವ ಹಸುಗಳು ಸಾವನ್ನಪ್ಪಿದರೆ ರೈತರ ಜೀವನ ಕ್ರಮವೇ ಏರುಪೇರರಾಗುತ್ತದೆ' ಎಂದು ರೈತ ಮಹಿಳೆ ನಿಂಗಮ್ಮ ಆತಂಕ ವ್ಯಕ್ತಪಡಿಸುತ್ತಾರೆ.
ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಲಂಪಿಸ್ಕಿನ್ ಕಂಡು ಬಂದ ತಕ್ಷಣ ಪಶುವೃದ್ಯರನ್ನು ಸಂಪರ್ಕಿಸಿ ಜಾನುವಾರಗಳಿಗೆ ಚಿಕಿತ್ಸೆ ಕೊಡಿಸಬೇಕು.












Click it and Unblock the Notifications