ದಶಪಥ ಹೆದ್ದಾರಿಗೆ ಕಾಂಗ್ರೆಸ್‌ನವರು ಒಂದು ರೂಪಾಯಿ ಬಿಡುಗಡೆ ಮಾಡಿದ್ದರೆ ತೋರಿಸಲಿ- ಸಿ.ಟಿ ರವಿ ಸವಾಲು
ರಾಯಚೂರು ಮಾ.10: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಲ ಶಾಸಕರಿಗೆ ಟಿಕೆಟ್ ಇಲ್ಲಾ ಎನ್ನುವ ಹೇಳಿಕೆಗೆ ಕಾಂಗ್ರೆಸ್‌ನಿಂದ ಟೀಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಕೊಡುವವರು ಯಾರು ಎನ್ನುವುದು ಮೊದಲು ಕಾಂಗ್ರೆಸ್ ನವರು ಹೇಳಲಿ ಎಂದು ತಿರುಗೇಟು ನೀಡಿದರು.
ರಾಯಚೂರಿನ ವಿಜಯ ಸಂಕಲ್ಪ ಯಾತ್ರೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಕೊಡುವುದು ಸಿದ್ದರಾಮಯ್ಯನವರಾ, ಡಿ.ಕೆ ಶಿವಕುಮಾರ್ ಅವರ, ಇಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಟಿಕೆಟ್ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಡಿಸೆಂಬರ್ ಒಳಗೆ ಟಿಕೆಟ್ ಘೋಷಣೆ ಮಾಡುತ್ತೇವೆ ಅಂತ ಹೇಳಿದರು. ಈಗ ಮಾರ್ಚ್ ಬಂತು ಟಿಕೆಟ್ ಘೋಷಣೆ ಆದ ಕೂಡಲೇ ಆಂತರಿಕ ಸ್ಫೋಟ ಆಗುತ್ತದೆ. ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ್, ಖರ್ಗೆ ಬೆಂಬಲಿಗರು ಬಡಿದಾಡುತ್ತಾರೆ. ಚುನಾವಣೆ ಘೋಷಣೆಯಾದ ನಂತರ ನಮ್ಮ ಪಕ್ಷದಲ್ಲಿ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರು ಬೋರ್ಡ್‌ನ ಸದಸ್ಯರಿದ್ದಾರೆ ಎಂದು ತಿಳಿಸಿದರು.
ಸಚಿವ ವಿ.ಸೋಮಣ್ಣ ಕಾಂಗ್ರೆಸ್‌ಗೆ ಸೇರುತ್ತಾರೆ ಎನ್ನುವ ವಿಚಾರ ಕೇವಲ ಊಹಾಪೋಹಾ. ಇಂತಹ ಊಹಾಪೋಹಾಗಳಿಗೆ ನಾನು ಉತ್ತರ ನೀಡುವುದಿಲ್ಲ. ಅವರು ಗೋವಿಂದರಾಜನಗರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನಾನು ನೋಡಿದ್ದೇನೆ. ಬೆಂಗಳೂರಿನ ಮೂರ್ನಾಲ್ಕು ಕಡೆ ಕಾರ್ಯಕ್ರಮದಲ್ಲೂ ನೋಡಿದ್ದೇನೆ. ನನ್ನ ಮಾಹಿತಿ ಪ್ರಕಾರ ಸೋಮಣ್ಣ ಅವರು ಪಕ್ಷ ಬಿಡುವುದಿಲ್ಲ ಎಂದರು.
ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪ್ರಕರಣ ಕುರಿತು ಹೇಳಿಕೆ ನೀಡಿದ ಸಿ.ಟಿ ರವಿ, ಕಾಂಗ್ರೆಸ್ ಶಾಸಕರಾಗಿ ಈ ಪ್ರಕರಣ ಆಗಿದ್ದರೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಆಲ್ ಇಂಡಿಯಾ ಜನರಲ್ ಸೆಕ್ರೆಟರಿ ಏನು ಹೇಳುತ್ತಿದ್ದರು. ಸ್ವಾಯತ್ತ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳುತ್ತಾರೆ ಎನ್ನುತ್ತಿದ್ದರು ಆದರೆ ಈಗ ಗೊತ್ತಾಗಿದೆ. ಬಿಜೆಪಿ ಯಾವುದೇ ದುರುಪಯೋಗ ಪಡಿಸಿಕೊಳ್ತಿಲ್ಲ ಎನ್ನುವುದು ಈ ಪ್ರಕರಣದಿಂದ ಸಾಬೀತಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಕಾಂಗ್ರೆಸ್‌ನ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್‌ನವರು ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದವರು. ಊರಲ್ಲಿರುವ ಮಕ್ಕಳೆಲ್ಲಾ ನನ್ನವೇ ಎಂದರೆ ಯಾರಾದರೂ ಕಾಲಲ್ಲಿ ಇದ್ದವನ್ನು ಕೈಗೆ ತಗೋತಾರೆ. ಕಾಂಗ್ರೆಸ್‌ನವರದ್ದು ಈಗ ಅದೇ ಸ್ಥಿತಿ ಇದೆ. ಅವರೇನಾದ್ರೂ ಹಣ ಬಿಡುಗಡೆ ಮಾಡಿದ್ದಾರೆ ತೋರಿಸಲಿ, ಕಾಂಗ್ರೆಸ್ ಸುಳ್ಳು ಹೇಳುತ್ತೋ ಸತ್ಯ ಹೇಳುತ್ತೋ ಎನ್ನುವುದು ಸಾರ್ವಜನಿಕರಿಗೆ ತಿಳಿಯುತ್ತದೆ ಎಂದರು.
ಕಾಂಗ್ರೆಸ್ ನಿರಂತರ ಸೋಲಿನಿಂದ ಹತಾಶವಾಗಿದ್ದು, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅನುಮಾನ, ಅಪಮಾನ, ಅಪಪ್ರಚಾರಗಳ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಹಣಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ಸಲದ ಚುನಾವಣೆಯಲ್ಲಿಯೂ ಸೋಲು ಕಾಣುವುದು ನಿಶ್ಚಿತ, ಸ್ಪಷ್ಟ ಬಹುಮತ ಬಿಜೆಪಿ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಸಂಸ್ಥೆ ಮಂಜೂರು ಮಾಡಿಲ್ಲ. ಮಾಡಿದರೆ ರಾಯಚೂರಿಗೆ ಆದ್ಯತೆ ನೀಡಲಾಗುವುದು. ಏಮ್ಸ್ ಮಾದರಿ ಸಂಸ್ಥೆ ರಾಯಚೂರಿಗೆ ಮಂಜೂರು ಮಾಡಿದ್ದು, ಏಮ್ಸ್ ರೀತಿಯಲ್ಲಿಯೇ ಎಲ್ಲ ಸೌಲಭ್ಯಗಳು ಅದರಲ್ಲಿ ಲಭ್ಯವಾಗಲಿವೆ ಎಂದು ಸಿ.ಟಿ ರವಿ ತಿಳಿಸಿದರು.












Click it and Unblock the Notifications