ರಾಯಚೂರಿನ ಆರ್‌ಟಿಪಿಎಸ್ 2ನೇ ವಿದ್ಯುತ್ ಘಟಕದಲ್ಲಿ ಅವಘಡ: 3 ಜನರಿಗೆ ಗಂಭೀರ ಗಾಯ
ರಾಯಚೂರು, ಜನವರಿ, 04: ರಾಯಚೂರು ಆರ್‌ಟಿಪಿಎಸ್‌ನ ಎರಡನೇ ವಿದ್ಯುತ್ ಘಟಕದ ಕೋಲ್ ಫೀಡರ್‌ಗಳಲ್ಲಿ ಕೆಲಸ ಮಾಡುತ್ತಿದ್ದ 3 ಜನ ಗುತ್ತಿಗೆ ಕಾರ್ಮಿಕರು ಕುಸಿದು ಬಿದ್ದು ಗಂಭೀರ ಗಾಯಗಳಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬಿಹಾರ ರಾಜ್ಯದ ಮೂಲದ ಕಾರ್ಮಿಕರಾದ ರಾಮಪ್ರೀತ್ , ಮಹಾದೇವ, ಸೋನು ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ರಾಯಚೂರು ನಗರದ ಭಂಡಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
2022 ಆಗಸ್ಟ್ 10ರಂದು 210 ಮೆಗಾವ್ಯಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕದ ಆರು ಕೋಲ್ ಫೀಡರ್‌ಗಳಲ್ಲಿ, ಮೂರು ಕೋಲ್ ಫೀಡರ್‌ಗಳು ಕುಸಿದು ಬಿದ್ದಿವೆ. ಕೋಲ್ ಫೀಡರ್‌ಗಳಲ್ಲಿ ಕೆಲಸ ಮಾಡುತ್ತಿರುವಾಗ ಬುಧವಾರ (ಜನವರಿ 4 ರಂದು) ಬೆಳಗ್ಗೆ 11 ಗಂಟೆಗೆ 10 ಅಡಿ ಎತ್ತರದಿಂದ ಕಾರ್ಮಿಕರೊಬ್ಬನು ಕೆಳಗೆ ಬಿದಿದ್ದಾರೆ. ಕಳಗಡೆ ಕೆಲಸ ಮಾಡುತ್ತಿದ್ದ ಇನ್ನೂ ಇಬ್ಬರು ಕಾರ್ಮಿಕರ ಮೇಲೆ ಬಿದ್ದ ಕಾರಣ 3 ಜನರಿಗೆ ಗಾಯಗಳಾಗಿವೆ.
ಸ್ಥಳಕ್ಕೆ ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಕಾ ನಿರ್ದೇಶಕ ಸಿ.ಎಂ.ದಿವಾಕರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯ ವೈದ್ಯರ ತಂಡ ಗಾಯಗೊಂಡವರಿಗೆ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಿದರು.

ಸ್ಥಳೀಯರಿಗೆ ಕೆಲಸ ನೀಡುತ್ತಿಲ್ಲ, ಆರೋಪ
ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಸಾಮಾಗ್ರಿಗಳನ್ನು ನೀಡಲಾಗಿದೆ. ಕಾಲು ಜಾರಿ ಬಿದ್ದ ಕಾರಣ ಈ ಅವಘಡ ಸಂಭವಿಸಿದೆ. ಬೆನ್ನಿಗೆ ಸೇಫ್ಟಿ ಬೆಲ್ಟ್ ಕಟ್ಟಿಕೊಂಡ ಪರಿಣಾಮ ಕಾರ್ಮಿಕರು ಪ್ರಾಣಪ್ರಾಯದಿಂದ ಪಾರಾಗಿದ್ದಾರೆ. 3 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಕಾ ನಿರ್ದೇಶಕ ಸಿ.ಎಂ.ದಿವಾಕರ ಹೇಳಿದರು. ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸುರಕ್ಷತೆ ಸಾಮಾಗ್ರಿಗಳು ನೀಡದ ಕಾರಣ ಇಂತಹ ಅವಘಡ ಸಂಭವಿಸಿದೆ. ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಸ್ಥಳೀಯರಿಗೆ ಕೆಲಸ ನೀಡುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿಬಂದವು.

ಕಲ್ಲಿದ್ದಲು ಸಮಸ್ಯೆ ಎದುರಾಗಿದೆ
ಇನ್ನು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಒಂದನೇ ವಿದ್ಯುತ್ ಉತ್ಪಾದನೆಯ ಘಟಕದ ಆಧುನೀಕರಣಕ್ಕೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಯೋಜಿಸಿದೆ. 30 ವರ್ಷಗಳಷ್ಟು ಹಳೆಯದಾದ ಆರ್‌ಟಿಪಿಎಸ್‌ನ ಮೊದಲೆರಡು ಘಟಕಗಳ ಪೈಕಿ 210 ಮೆಗಾವಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕವನ್ನು ಆಧುನೀಕರಣ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡುವುದು ಕೆಪಿಸಿಗೆ ಸವಾಲಾಗಿದೆ. ಹೊಸ ಯೋಜನೆಗಳಿಗೆ ಕಲ್ಲಿದ್ದಲು ಲಭ್ಯತೆ ಸಮಸ್ಯೆಯೂ ಎದುರಾಗಿದೆ. ವಿದ್ಯುತ್ ಉತ್ಪಾದಿಸುತ್ತಿರುವ ಹಾಲಿ ವಿದ್ಯುತ್ ಘಟಕಗಳೂ ಸುಮಾರು 25ವರ್ಷ ದಾಟಿದ್ದರಿಂದ ಜೀವ ತುಂಬುವ ಕಾರ್ಯಕ್ಕೆ ಕೆಪಿಸಿ ಮುಂದಾಗಿದೆ.












Click it and Unblock the Notifications