ದೇವದುರ್ಗದಲ್ಲಿ 40-50 ವರ್ಷದವರೂ ವೃದ್ದಾಪ್ಯ ವೇತನ ಫಲಾನುಭವಿಗಳು!
ರಾಯಚೂರು ಸೆಪ್ಟೆಂಬರ್ 23: ಸಾಮಾಜಿಕ ಪಿಂಚಣಿ ಯೋಜನೆಯಾದ ವೃದ್ಧಾಪ್ಯ ವೇತನವನ್ನು ತಾಲ್ಲೂಕಿನಲ್ಲಿ 40-50 ವಯೋಮಾನದ ಜನರಿಗೆ ಮಂಜೂರು ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಅನರ್ಹರಿಗೆ ಸಾಮಾಜಿಕ ಪಿಂಚಣಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13 ರಿಂದ 17ರವರೆಗೆ ಕಲಬುರಗಿಯ ವಿಭಾಗೀಯ ಲೆಕ್ಕಪರಿಶೋಧನಾ ಸಮಿತಿಯು ಪರಿಶೀಲನೆ ನಡೆಸಿದ್ದು, ಈ ವೇಳೆ ಅನರ್ಹರಿಗೆ ವೃದ್ದಾಪ್ಯ ವೇತನ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ.
ದೇವದುರ್ಗ ತಾಲ್ಲೂಕಿನ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಅನರ್ಹರು ವೃದ್ಯಾಪ್ಯ ವೇತನ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಪರಿಶೀಲನೆ ವೇಳೆ ಲೆಕ್ಕಪತ್ರಗಳು ತಾಳೆಯಾಗಿಲ್ಲ ಎಂಬುದು ಮೇಲುನೋಟಕ್ಕೆ ಕಂಡು ಬಂದಿದೆ. ಸಾಕಷ್ಟು ಲೋಪ ದೋಷಗಳಿದ್ದು, ಈ ಕುರಿತು ಒಂದು ತಿಂಗಳ ಒಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ. ನಂತರ ವಿಭಾಗೀಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಲೆಕ್ಕ ಪರಿಶೋಧನಾ ಅಧಿಕಾರಿಗಳು ತಿಳಿಸಿದರು.

"ಸಾಮಾಜಿಕ ಪಿಂಚಣಿ ಸೌಲಭ್ಯಕ್ಕೆ ಅರ್ಹರಾದ ನಾವು ಕಳೆದ 2 ವರ್ಷದಿಂದ ನಿರಂತರವಾಗಿ ಅರ್ಜಿ ಸಲ್ಲಿಸುತ್ತಿದ್ದು, ಹಣ ನೀಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ" ಎಂದು ತಾಲ್ಲೂಕಿನ ಗಬ್ಬೂರಿನ ಬೂದಿಬಸವ, ಜಾಲಹಳ್ಳಿಯ ರಂಗನಾಥ, ಲಿಂಗಣ್ಣ, ಯಾಟಗಲ ಗ್ರಾಮದ ಗಂಗಪ್ಪ ಮತ್ತು ಅರಕೇರದ ನಾಗರಾಜ ಆರೋಪಿಸಿದ್ದಾರೆ.
"ಕಂದಾಯ ಇಲಾಖೆ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಸಾಮಾಜಿಕ ಪಿಂಚಣಿಯ ಒಂದು ಅರ್ಜಿಗೆ 6 ಸಾವಿರ ರೂ ನಿಗದಿಪಡಿಸಿದ್ದು, ನಿಗದಿತ ಹಣ ನೀಡಿದ ಬಳಿಕ ತಹಶೀಲ್ದಾರ್ ಆದೇಶ ಪ್ರತಿ ನೀಡುತ್ತಿದ್ದಾರೆ. ಅರಿಶಿಣಗಿ, ಕೊಪ್ಪರ, ರಾಮನಾಳ ಗ್ರಾಮದ ಕಡಿಮೆ ವಯೋಮಾನದವರಿಗೆ ಈಗಾಗಲೇ ವೃದ್ಯಾಪ್ಯ ವೇತನ ಮಂಜೂರು ಮಾಡಲಾಗಿದೆ. ದೇವದುರ್ಗ, ಗಬ್ಬೂರು, ಜಾಲಹಳ್ಳಿ, ಅರಕೇರಾ ಹೋಬಳಿಗಳ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ" ಎಂದು ವೃದ್ಯಾಪ್ಯ ವೇತನ ವಂಚಿತರು ಆರೋಪಿಸಿದ್ದಾರೆ.
ಸರ್ಕಾರದ ಬಹುತೇಕ ಯೋಜನೆಗಳಿಗೆ ಸಲ್ಲಿಸುವ ಅರ್ಜಿಗಳಿಗೆ ಹಿಂಬರಹ ನೀಡಿ ನಂತರ ಅವುಗಳಿಗೆ ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಾರೆ. ತಾಲ್ಲೂಕಿನ ಹಲವು ವೃದ್ಧರೂ, ವಿಧವೆಯರು, ಅಂಗವಿಕಲರು ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಪಟ್ಟಣದ ಕೆಲವು ಸರ್ಕಾರಿ ವೈದ್ಯರು 2 ಸಾವಿರ ರೂ ನೀಡಿದರೆ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರಕ್ಕೆ ಸಹಿ ಹಾಕುತ್ತಾರೆ ಎಂದು ಸೂಗರಾಳ ಗ್ರಾಮದ ವೃದ್ಧ ಸಾಬಯ್ಯ ಎಂಬುವವರು ಆರೋಪಿಸಿದ್ದಾರೆ.
ತಾಲ್ಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲೂ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಮಾಹಿತಿ ಸಂಗ್ರಹಿಸಿದ್ದೇವೆ.ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಕರಿಗುಡ್ಡದ ರಾಮಣ್ಣ ಹೇಳಿದರು.












Click it and Unblock the Notifications