ಮಾವೋವಾದಿಗಳಿಗೆ ಬೆಂಬಲ, ದಿಗ್ವಿಜಯ್ ಸಿಂಗ್ ವಿಚಾರಣೆ ಸಾಧ್ಯತೆ!
ನವದೆಹಲಿ, ನವೆಂಬರ್ 19: ಮಾವೋವಾದಿಗಳಿಗೆ ಬೆಂಬಲ ನೀಡಿರುವ ಶಂಕೆ ಮೇರೆಗೆ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರನ್ನು ಪುಣೆ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಕಂಡು ಬಂದಿದೆ.
ಮೋದಿ ಹತ್ಯೆ ಸಂಚು, ಭೀಮಾ ಕೊರೆಂಗಾವ್ ಪ್ರಕರಣ, ಎಲ್ಗಾರ್ ಪರಿಷತ್ ಘೋಷಣೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾವೋವಾದಿಗಳ ಕುರಿತಂತೆ ನಡೆದಿರುವ ತನಿಖೆಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.
ಇತ್ತೀಚೆಗೆ ಜಪ್ತಿ ಮಾಡಲಾದ ಪತ್ರಗಳಲ್ಲಿ ಮಾವೋವಾದಿಗಳು 'ಗೆಳೆಯ' ಎಂದು ಸಂಬೋಧಿಸಿ ಫೋನ್ ನಂಬರ್ ನಮೂದಿಸಿದ್ದಾರೆ. ಆ ಫೋನ್ ನಂಬರ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅದು ದಿಗ್ವಿಜಯ್ ಸಿಂಗ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಹೀಗಾಗಿ, ಈ ಬಗ್ಗೆ ಪ್ರಶ್ನಿಸಲು ಪುಣೆ ಪೊಲೀಸರು ಮುಂದಾಗಿದ್ದಾರೆ ಎಂದು ಡಿಸಿಪಿ ಸುಹಾಸ್ ಭಾವ್ಚೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಜೀ ನ್ಯೂಸ್ ವರದಿ ಮಾಡಿದೆ.

'ಕಾಮ್ ಪ್ರಕಾಶ್' ಅವರು 'ಕಾಮ್ ಸುರೇಂದ್ರ' ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರವ್ಯಾಪಿ ಪ್ರತಿಭಟನೆ ಬಗ್ಗೆ ಮಾತುಕತೆ ನಡೆದಿದೆ. ಈ ಪತ್ರವನ್ನು ಕೋರ್ಟಿಗೂ ಸಲ್ಲಿಸಲಾಗಿದೆ. ಮಾವೋವಾದಿಗಳ ಹಿತೈಷಿಗಳನ್ನು ಹುಡುಕಿ, ವಿಚಾರಣೆ ನಡೆಸಲಾಗುತ್ತಿದೆ. ವಿಚಾರವಾದಿ ವರವರರಾವ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications