"ಭಾರತ್ ಮಾತಾ ಕೀ ಜೈ" ಕೂಗದವರನ್ನು ನಂಬುವುದು ಹೇಗೆ: ಮೋದಿ
ಪಾಟ್ನಾ, ನವೆಂಬರ್.03: "ಭಾರತ್ ಮಾತಾ ಕೀ ಜೈ" ಎಂದು ಘೋಷಣೆ ಕೂಗುವುದಕ್ಕೆ ಹಿಂದೇಟು ಹಾಕುವ ಜನರಿಂದ ಏನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.
ಬಿಹಾರದ ಸಹರ್ಸಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಪ್ರಧಾನಮಂತ್ರಿ ಮೋದಿ ನೇರ ವಾಗ್ದಾಳಿ ನಡೆಸಿದರು. ಬಿಹಾರವನ್ನು "ಜಂಗಲ್ ರಾಜ್" ಆಗಿ ಪರಿವರ್ತಿಸಿ ಜನರನ್ನು ಕತ್ತಲೆಗೆ ದೂಡಿದ್ದು ಯಾರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತದಾನ ಮಾಡುವುದಕ್ಕೂ ರಕ್ಷಣೆ ಇಲ್ಲದಂತಾ ಸ್ಥಿತಿಯನ್ನು ನಿರ್ಮಿಸಿದವರು ಯಾರು ಎಂದು ಪ್ರಶ್ನಿಸಿದರು.
ಒಂದು ಗುಂಪು ಭಾರತ್ ಮಾತಾ ಕೀ ಜೈ ಎಂದು ಕೂಗುವುದಿಲ್ಲ ಎಂದು ಹೇಳುತ್ತದೆ. ಇನ್ನೊಂದು ಗುಂಪು ಹಾಗೆ ಕೂಗುವುದೇ ದೊಡ್ಡ ತಲೆನೋವು ಎನ್ನುತ್ತದೆ. ಇದೀಗ ಎರಡೂ ಗುಂಪುಗಳು ಸೇರಿಕೊಂಡು ಬಿಹಾರದ ಜನರ ಎದುರಿನಲ್ಲಿ ಮತ ಕೇಳುವುದಕ್ಕೆ ಬರುತ್ತಿವೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು. ಜೈ ಶ್ರೀರಾಮ್ ಎನ್ನುವುದಕ್ಕೂ ಆ ಜನರು ಹಿಂಜರಿಯುತ್ತಾರಲ್ಲವೇ ಎಂದು ಮೋದಿ ಪ್ರಶ್ನೆ ಮಾಡಿದರು.

ಡಬಲ್ ಯುವರಾಜರ ಸರ್ಕಾರ ಬೇಕೇ?:
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವನ್ನು ಡಬಲ್ ಇಂಜಿನ್ ಸರ್ಕಾರ ಎಂದು ಅಣುಕಿಸಿದ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದರು. ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿಗೆ ಪೂರಕವಾಗಿದೆ. ಅದನ್ನು ಬಿಟ್ಟು ಒಬ್ಬರು ಕಾಂಗ್ರೆಸ್ ಯುವರಾಜ ಮತ್ತೊಬ್ಬರು ಆರ್ ಜೆಡಿ ಯುವರಾಜ, ಈ ಡಬಲ್ ಯುವರಾಜರ ಸರ್ಕಾರವು ಅಸ್ತಿತ್ವಕ್ಕೆ ಬರಬೇಕೇ ಎಂದು ಪ್ರಧಾನಿ ಮೋದಿ ಅಣುಕಿಸಿದರು.
ಕೆಲವರಿಗೆ ಇಂದಿಗೂ ನನ್ನ ಗೆಲುವಿನ ಬಗ್ಗೆ ಚಿಂತೆ ಹುಟ್ಟಿಕೊಳ್ಳುತ್ತದೆ. ಹೇಗೆ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂದು ಆಲೋಚನೆಯಲ್ಲಿ ತೊಡಗಿರುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿದೆ. ಬಡವರ ಮಹಿಳೆಯರ ಮತ್ತು ಮಕ್ಕಳ, ಸೋದರ-ಸೋದರಿಯರ ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ಗೆಲುವು ಸಿಗುತ್ತಿದೆ. ಅದೇ ಕಾಂಗ್ರೆಸ್ ಗತಿಯನ್ನೊಮ್ಮೆ ನೋಡಿ. ಸಂಸತ್ ಉಭಯ ಸದನಗಳಲ್ಲಿ ಪಕ್ಷದ 100 ಸದಸ್ಯರು ಕೂಡಾ ಇಲ್ಲ. ಏಕೆಂದರೆ ಜನರನ್ನು ಬಹುದಿನಗಳವರೆಗೂ ಮೂರ್ಖರನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿವಿದರು.












Click it and Unblock the Notifications