ಮಹಾಮೈತ್ರಿಕೂಟದ ಲಾಲೂ ಕನಸಿಗೆ ದೊಡ್ಡ ಮಗನೇ ಅಡ್ಡಿ
ಪಟ್ನಾ, ಏಪ್ರಿಲ್ 1: ಬಿಹಾರದ ಮಹಾಘಟಬಂಧನದಲ್ಲಿ ಮನಸ್ತಾಪಗಳು ಉಂಟಾದ ಬೆನ್ನಲ್ಲೇ ಲಾಲು ಪ್ರಸಾದ್ ಅವರ ಆರ್‌ಜೆಡಿಗೆ ಮತ್ತೊಂದು ತಲೆನೋವು ಎದುರಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕುಟುಂಬ ಕಲಹದಿಂದ ಮುನಿಸಿಕೊಂಡಿರುವ ಲಾಲು ಪ್ರಸಾದ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್, ಆರ್‌ಜೆಡಿಯಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅದಕ್ಕೆ ಅವರು ಇಟ್ಟಿರುವ ಹೆಸರು 'ಲಾಲು ರಾಬ್ಡಿ ಮೋರ್ಚಾ' ಎಂದು.
ಕೆಲವು ದಿನಗಳ ಹಿಂದಷ್ಟೇ ತೇಜ್‌ಪ್ರತಾಪ್ ಯಾದವ್ ಪಕ್ಷದ ವಿದ್ಯಾರ್ಥಿ ಘಟಕದ ಸಂಚಾಲಕ ಹುದ್ದೆ ತೊರೆದಿದ್ದರು. ಇದು ಕುಟುಂಬದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು. ಇದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.

ತೇಜ್ ಪ್ರತಾಪ್ ಯಾದವ್ ಮತ್ತು ಪಕ್ಷದ ಜವಾಬ್ದಾರಿ ಹೊತ್ತಿರುವ ಲಾಲು ಅವರ ಎರಡನೆಯ ಮಗ ತೇಜಸ್ವಿ ಯಾದವ್ ನಡುವೆ ಮನಸ್ತಾಪ ಉಂಟಾಗಿರುವ ಬಗ್ಗೆ ವದಂತಿ ದಟ್ಟವಾಗಿದ್ದವು. ತೇಜ್ ಪ್ರತಾಪ್ ಅವರ ಅಸಮಾಧಾನದಿಂದಾಗಿ ಆರ್‌ಜೆಡಿ ಇಬ್ಭಾಗವಾಗಲಿದೆ ಎನ್ನಲಾಗಿತ್ತು. ಅದನ್ನು ತೇಜಸ್ವಿ ಯಾದವ್ ತಳ್ಳಿಹಾಕಿದ್ದರು. ಇದೀಗ ಅದು ಸತ್ಯವಾಗಿದೆ.
ತೇಜಸ್ವಿ ಯಾದವ್ ಅವರಷ್ಟು ಪ್ರಭಾವಿ ಮತ್ತು ವರ್ಚಸ್ವಿ ನಾಯಕರಲ್ಲದೆ ಇದ್ದರೂ ತೇಜ್ ಪ್ರತಾಪ್ ಅವರ ನಡೆ ಲಾಲೂ ಅವರ ಕುಟುಂಬಕ್ಕೆ ಮತ್ತು ಮಹಾಘಟಬಂಧನಕ್ಕೆ ನಕಾರಾತ್ಮಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತೇಜ್ ಪ್ರತಾಪ್ ಅವರ ತಮಗೆ ಹೆಣ್ಣುಕೊಟ್ಟ ಮಾವನ ವಿರುದ್ಧವೇ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ತೇಜ್ ಅವರ ಮಾವ ಚಂದ್ರಿಕ ರಾಯ್ ಅವರು ಸರಣ್ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications