ಪಾಟ್ನಾ: ಮತದಾನಕ್ಕಾಗಿ ಅಜ್ಜಿಯನ್ನು ಸೈಕಲ್ ನಲ್ಲಿ ಕರೆತಂದ ಮೊಮ್ಮಗಳು
ಪಾಟ್ನಾ, ನವೆಂಬರ್.03: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 2ನೇ ಹಂತದ ಮತದಾನ ಪ್ರಕ್ರಿಯೆ ಸಾಕಷ್ಟು ಮಹತ್ವದ ಪಾತ್ರ ವಹಿಸಲಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಚುರುಕಿನ ಮತದಾನ ನಡೆಯುತ್ತಿದೆ.
ಪಾಟ್ನಾದಲ್ಲಿ ತಮ್ಮ ಹಕ್ಕು ಚಲಾಯಿಸುವುದಕ್ಕಾಗಿ ಮೊಮ್ಮಗಳ ಜೊತೆಗೆ ಸೈಕಲ್ ಏರಿ ಬಂದ ಅಜ್ಜಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅಜ್ಜಿಯನ್ನು ಮೊಮ್ಮಗಳು ತಮ್ಮ ಸೈಕಲ್ ನಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ಕರೆದು ತಂದಿದ್ದಾರೆ.
"ನಾನು ನಮ್ಮ ಅಜ್ಜಿಯ ಜೊತೆಗೆ ಮತದಾನ ಮಾಡುವುದಕ್ಕಾಗಿ ಸೈಕಲ್ ನಲ್ಲಿ ಬಂದಿದ್ದೇನೆ. ಇದೇ ಮೊದಲ ಬಾರಿಗೆ ನಾನು ಮತದಾನ ಮಾಡುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ಅವಶ್ಯಕವಾಗಿದೆ" ಎಂದು ಯುವತಿ ಅಭಿಪ್ರಾಯ ವ್ಯಕ್ತಪಡಸಿದ್ದಾರೆ.

ಎರಡನೇ ಹಂತದ ಮತದಾನ:
ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬಿಹಾರ ಎರಡನೇ ಹಂತದ ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2ನೇ ಹಂತದಲ್ಲಿ ಒಟ್ಟು 2,85,50,285 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 1,50,33,034 ಪುರುಷರು ಮತ್ತು 1,35,16,271 ಮಹಿಳಾ ಮತದಾರರು ಹಾಗೂ 980 ತೃತೀಯ ಲಿಂಗದ ಮತದಾರರು ಮತದಾನ ಮಾಡಲಿದ್ದಾರೆ. ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೇ ಮೊದಲ ಹಂತದಲ್ಲಿ ದಾಖಲೆ ಮಟ್ಟದಲ್ಲಿ ಮತದಾನ ನಡೆದಿತ್ತು. ಅಕ್ಟೋಬರ್.28ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.55.69ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.












Click it and Unblock the Notifications