ಚಿರಾಗ್ ವಿರುದ್ಧ ಕ್ರಮದ ಬಗ್ಗೆ ಬಿಜೆಪಿ ನಿರ್ಧರಿಸಲಿ: ನಿತೀಶ್ ಕುಮಾರ್
ಪಟ್ನಾ, ನವೆಂಬರ್ 11: ತಾವು ಮುಖ್ಯಮಂತ್ರಿಯಾಗುವುದಾಗಿ ಎಲ್ಲಿಯೂ ಹೇಳಿಲ್ಲ. ಅದು ಎನ್‌ಡಿಎ ಮೈತ್ರಿಕೂಟದ ನಿರ್ಧಾರ ಎಂದು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹೇಳಿದ್ದಾರೆ.
ಮಾಧ್ಯಮದೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷವು (ಎಲ್‌ಜೆಪಿ) ಅನೇಕ ಕ್ಷೇತ್ರಗಳಲ್ಲಿ ಜೆಡಿಯುದ ಮುನ್ನಡೆಗೆ ಹಾನಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಎಲ್‌ಜೆಪಿ ವಿರುದ್ಧದ ಎಲ್ಲ ಸಂಬಂಧಗಳನ್ನು ಬಿಜೆಪಿ ಕಡಿದುಕೊಳ್ಳುವಂತೆ ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ, ಅದು ಬಿಜೆಪಿಗೆ ಬಿಟ್ಟ ನಿರ್ಧಾರವಾಗಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಮತಗಳಿಕೆ ಹಾಗೂ ಕ್ಷೇತ್ರಗಳನ್ನು ಗೆಲುವುದರಲ್ಲಿ ಜೆಡಿಯು ಸಾಧನೆ ಕುಸಿದಿದೆ. ಇದರಲ್ಲಿ ಎಲ್‌ಜೆಪಿ ನಿತೀಶ್ ಕುಮಾರ್ ಹಾಗೂ ಜೆಡಿಯು ವಿರುದ್ಧ ಸತತ ಪ್ರಚಾರ ಮತ್ತು ಆರೋಪಗಳನ್ನು ಮಾಡಿದ್ದೇ ಕಾರಣ ಎಂದು ಆರೋಪಿಸಲಾಗಿದೆ.

ಎಲ್‌ಜೆಪಿ ವಿರುದ್ಧ ಯಾವುದಾದರೂ ಕ್ರಮ ತೆಗೆದುಕೊಳ್ಳುವುದಿದ್ದರೆ ಬಿಜೆಪಿ ಅದನ್ನು ತೆಗೆದುಕೊಳ್ಳಬೇಕು. ಎನ್‌ಡಿಎದಲ್ಲಿ ಎಲ್‌ಜೆಪಿಯನ್ನು ಮತ್ತೆ ಸೇರಿಸಿಕೊಳ್ಳಬೇಕೋ ಬೇಡವೋ ಎನ್ನುವುದನ್ನು ಬಿಜೆಪಿಯೇ ನಿರ್ಧರಿಸಬೇಕು ಎಂದು ನಿತೀಶ್ ಹೇಳಿದರು.
'ನಾವು ಇಡೀ ಎನ್‌ಡಿಎಗಾಗಿ ಪ್ರಚಾರ ಮಾಡಿದ್ದು ಸತ್ಯ. ಆದರೆ ಕೆಲವು ಪಕ್ಷಗಳು ತಮ್ಮ ಬಳಿ ಅಭ್ಯರ್ಥಿಗಳನ್ನು ಹೊಂದಿರದೆ ಇದ್ದರೂ ನಮ್ಮ ಮತಗಳನ್ನು ಕಡಿತ ಮಾಡಲು ಜನರನ್ನು ಹುಡುಕಿದ್ದವು. ಈ ಪ್ರಯತ್ನಗಳು ಕಣ್ಣಿಗೆ ಕಾಣುವಂತಿದ್ದವು. ಮಾಧ್ಯಮಗಳೂ ಅದರ ಬಗ್ಗೆ ವರದಿ ಮಾಡುತ್ತಿದ್ದವು. ನಮ್ಮ ವಿಶ್ಲೇಷಣೆ ಕೂಡ ನಡೆಯುತ್ತಿದೆ' ಎಂದು ನಿತೀಶ್ ತಿಳಿಸಿದರು.












Click it and Unblock the Notifications