ಬಿಹಾರ ಚುನಾವಣೆ; ಪಾಟ್ನಾದಲ್ಲಿ ಬಿಜೆಪಿ ನಾಯಕ ಹತ್ಯೆ
ಪಾಟ್ನಾ, ಅಕ್ಟೋಬರ್ 01 : ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿವೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಜೆಪಿ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ ಬಿಜೆಪಿ ನಾಯಕ ರಾಜೇಶ್ ಝಾ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪಾಟ್ನಾದ ಬಿಜೆಪಿ ನಾಯಕ ರಾಜೇಶ್ ಮುಂಜಾನೆ ವಾಯು ವಿಹಾರಕ್ಕೆ ಹೋದಾಗ ಬೈಕ್‌ನಲ್ಲಿ ಬಂದ ಇಬ್ಬರು ಗುಂಡಿ ದಾಳಿ ಮಾಡಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ರಾಜೇಶ್ ಝಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

"ರಾಜೇಶ್ ಝಾ ಅವರನ್ನು ಯಾರೋ ಟಾರ್ಗೆಟ್ ಮಾಡಿದ್ದರು. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿಯೂ ಹತ್ಯೆ ನಡೆದಿರಬಹುದು" ಎಂದು ಸಂಬಂಧಿರೊಬ್ಬರು ಎಎನ್‌ಐ ಜೊತೆ ಮಾತನಾಡಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 28, ನವೆಂಬರ್ 3 ಮತ್ತು ನ.7ರಂದು ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications