ಬಿಹಾರ ಫಲಿತಾಂಶ: ಮತಎಣಿಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿ
ಪಾಟ್ನಾ, ನವೆಂಬರ್.09: ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ 3755 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಮಂಗಳವಾರ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಕಾರ್ಯ ಆರಂಭಿಸುವುದಕ್ಕೆ ಚುನಾವಣಾ ಆಯೋಗವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬಿಹಾರದ 38 ಜಿಲ್ಲೆಗಳ 55 ಕಡೆಗಳಲ್ಲಿ ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳು ಮತ್ತು ಪಂಚಾಯತ್ ಕಚೇರಿಗಳಲ್ಲಿ ಮತಎಣಿಕೆಗೆ ಆಯೋಗವು ತಯಾರಿ ಮಾಡಿಕೊಂಡಿದೆ. ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಅಧಿಕಾರ ದಕ್ಕುತ್ತದೆ ಎಂಬುದರ ಕುರಿತು ಒಂದು ಚಿತ್ರಣ ಗೊತ್ತಾಗಲಿದೆ.
2020ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದೆ. ಬಹುತೇಕ ರಾಷ್ಟ್ರೀಯ ಸುದ್ದಿಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಮಹಾಘಟಬಂಧನ್ ಮಹಾಮೈತ್ರಿಕೂಟವೇ ದಿಗ್ವಿಜಯ ಸಾಧಿಸಲಿದೆ ಎಂದು ಹೇಳಿವೆ. ಎನ್ ಡಿಎ ಮೈತ್ರಿಕೂಟವು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದು, ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಕಿಂಗ್ ಮೇಕರ್ ಆಗುತ್ತಾರೆ ಎಂಬ ಬಗ್ಗೆಯೂ ವಿಶ್ಲೇಷಿಸಲಾಗುತ್ತಿದೆ.

ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ:
- ರಾಜ್ಯದ 38 ಜಿಲ್ಲೆಗಳಲ್ಲಿರುವ 55 ಮತಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತಎಣಿಕೆ ಕಾರ್ಯ ಆರಂಭ
- ವಿಧಾನಸಭಾ ಚುನಾವಣಾ ಮತಎಣಿಕೆ ಸಂದರ್ಭದಲ್ಲಿ ಕೊವಿಡ್-19 ಶಿಷ್ಟಾಚಾರ ಮತ್ತು ನಿಯಮಗಳ ಪಾಲನೆ ಕಡ್ಡಾಯ
- ಚಂಪಾರನ್, ಗಯಾ, ಸಿವಾನ್ ಮತ್ತು ಬೆಗುಸರಾಯ್ ಜಿಲ್ಲೆಗಳಲ್ಲಿ ಮತಎಣಿಕೆಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ
- ಮತಎಣಿಕೆ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿರುತ್ತದೆ
- 19 ಕಂಪನಿಗಳ ಸಿಎಪಿಎಫ್ ಪಡೆಗಳನ್ನು ಮತಎಣಿಕೆಯ ಸ್ಟ್ರಾಂಗ್ ರೂಮ್ ಬಳಿ ನಿಯೋಜಿಸಲಾಗಿರುತ್ತದೆ. ಇದರ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ 59 ಕಂಪನಿಗಳ ಸೈನಿಕರನ್ನು ನಿಯೋಜಿಸಲಾಗಿದೆ
- ಪ್ರತಿಯೊಂದು ಮತಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಕಾನೂನು ಸುವ್ಯವಸ್ಥೆ ಮೇಲೆ ನಿಗಾ ವಹಿಸಿರುತ್ತಾರೆ
- ಮತಎಣಿಕೆ ಪ್ರಕ್ರಿಯೆ ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ
- ಬೆಳಗ್ಗೆ 10 ಗಂಟೆಯ ನಂತರದಲ್ಲಿ 38 ಜಿಲ್ಲೆಗಳಲ್ಲಿನ 55 ಮತಎಣಿಕೆ ಕೇಂದ್ರಗಳಲ್ಲಿ ಇವಿಎಂ ಮತಗಳ ಎಣಿಕೆ ಕಾರ್ಯವು ಆರಂಭವಾಗಲಿದೆ
- ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶದಿಂದ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಏರುವ ಪಕ್ಷ ಯಾವುದು ಎಂಬುದರ ಬಗ್ಗೆ ಒಂದು ಚಿತ್ರಣ ಸ್ಪಷ್ಟವಾಗುತ್ತದೆ
- ಅಂತಿಮವಾಗಿ ಚುನಾವಣಾ ಆಯೋಗವು ಫಲಿತಾಂಶವನ್ನು ಪ್ರಕಟಿಸಲಿದ್ದು, ವಿಜೇತ ಅಭ್ಯರ್ಥಿಗಳಿಗೆ ಗೆಲುವಿನ ಪ್ರಮಾಣ ಪತ್ರವನ್ನು ನೀಡುವುದರ ಮೂಲಕ ಪ್ರಕ್ರಿಯೆಗೆ ಒಂದು ಹಂತದಲ್ಲಿ ತೆರೆ ಬೀಳಲಿದೆ.












Click it and Unblock the Notifications