ತನ್ನ ವೈಫಲ್ಯ ಮುಚ್ಚಿಡಲು ಕಾಂಗ್ರೆಸ್ ಕಿರುಚಾಡುತ್ತಿದೆ: ಓವೈಸಿ ವಾಗ್ದಾಳಿ
ಪಟ್ನಾ, ನವೆಂಬರ್ 11: ಬಿಹಾರ ವಿಧಾನಸಬೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಅಚ್ಚರಿಯ ಪ್ರದರ್ಶನ ನೀಡಿರುವ ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ, ತನ್ನ ಸೋಲಿಗೆ ತಮ್ಮನ್ನು ದೂಷಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
'ಮತ ವಿಭಜನೆ ಮಾಡಿದವರು' ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ, ಬಿಹಾರದಲ್ಲಿನ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಕಿರುಚಾಡುತ್ತಿದೆ ಎಂದು ಟೀಕಿಸಿದ್ದಾರೆ.
'ಮತವಿಭಜನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿಂದಿನಂತೆಯೇ ಈಗಲೂ ಕಿರುಚಾಡುತ್ತಿದೆ. ಅವರು ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ತಮ್ಮ ವೈಫಲ್ಯಗಳಿಗಾಗಿ ಎಐಎಂಐಎಂ ಯಶಸ್ಸಿನ ಮೇಲೆ ಆಪಾದನೆ ಹೊರಿಸಲು ಆರಂಭಿಸಿದೆ' ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ತಮ್ಮ ಪಕ್ಷವು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಅವುಗಳಲ್ಲಿ ಐದರಲ್ಲಿ ಮಾತ್ರ ಗೆದ್ದಿದೆ. ಇನ್ನು ಕಾಂಗ್ರೆಸ್ ಭಾಗವಾಗಿರುವ ಮಹಾಘಟಬಂಧನವು 9 ಮತ್ತು ಎನ್‌ಡಿಎ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದ್ದಾರೆ.
'ಎನ್‌ಡಿಎ ಗೆದ್ದ ಕ್ಷೇತ್ರಗಳಲ್ಲಿ ನಮ್ಮ ಮತಗಳಿಗಿಂತಲೂ ಗೆಲುವಿನ ಅಂತರ ದೊಡ್ಡದಾಗಿದೆ. ನಮ್ಮ ಅಭ್ಯರ್ಥಿ ಇಲ್ಲದೆ ಹೋಗಿದ್ದರೂ ಅಲ್ಲಿ ಎನ್‌ಡಿಎ ಗೆಲ್ಲುತ್ತಿತ್ತು. ಇನ್ನೊಂದೆಡೆ ಮಹಾಘಟಬಂಧನವು ಈ ಕ್ಷೇತ್ರಗಳಲ್ಲಿ ಎನ್‌ಡಿಎಯನ್ನು ಸೋಲಿಸಲು ವಿಫಲವಾಗಿದೆ. ಶೆರ್ಘಾಟಿಯಲ್ಲಿ ಆರ್‌ಜೆಡಿಯು ಉಗ್ರವಾದಿ ದುರ್ಗಾ ವಾಹಿನಿಯಿಂದ ಅಭ್ಯರ್ಥಿಯನ್ನು ಇಳಿಸಿತ್ತು. ಉಗ್ರವಾದಿತನ ಮತ್ತು ಮತ ವಿಭಜನೆ ಬಗ್ಗೆ ಇದು ಏನು ಹೇಳುತ್ತದೆ? ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
'ನಾವು ರಾಜಕೀಯ ಪಕ್ಷ ನಡೆಸುತ್ತಿದ್ದೇವೆ. ನಾವು ಎಲ್ಲಿ ಬೇಕಾದರೂ ಸ್ವಂತವಾಗಿ ಸ್ಪರ್ಧಿಸುವ ಹಕ್ಕು ಹೊಂದಿದ್ದೇವೆ. ನೀವು ಮಾತ್ರ ಮಹಾರಾಷ್ಟ್ರದಲ್ಲಿ ಶಿವಸೇನಾ ಮಡಿಲಲ್ಲಿ ಕುಳಿತು ಅಧಿಕಾರ ನಡೆಸಬಹುದು. ಆದರೆ ನಾವು ಚುನಾವಣೆಗೆ ಹೋಗಬಾರದಾ? ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚುನಾವಣೆಗಳಲ್ಲಿಯೂ ನಮ್ಮ ಪಕ್ಷ ಸ್ಪರ್ಧಿಸುತ್ತದೆ. ದೇಶದ ಪ್ರತಿ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇವೆ. ಇದಕ್ಕೆ ಯಾರದ್ದಾದರೂ ಅನುಮತಿ ಕೇಳಬೇಕಾ?' ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.












Click it and Unblock the Notifications