ಗೋವಾ ಚುನಾವಣೆ; ಜನವರಿ 13ರೊಳಗೆ ದಿನಾಂಕ ಘೋಷಣೆ
ಪಣಜಿ, ಜನವರಿ 05; ಗೋವಾ ಸೇರಿದಂತೆ 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ತಯಾರಿ ನಡೆದಿದೆ. ಈ ವಾರದ ಅಂತ್ಯದಲ್ಲಿಯೇ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ.
2022ರಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆ ನಡೆಯಲಿದೆ. ಜನವರಿ 10 ರಿಂದ 13ರೊಳಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ.

ಗೋವಾದ 40 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.
403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶ. ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯನ್ನು ಮೊದಲು ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ ಎಂಬ ಮಾಹಿತಿ ಇದೆ.
ಕೋವಿಡ್ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಸಲಹೆ ಪಡೆದು ಚುನಾವಣೆಯನ್ನು ಘೋಷಣೆ ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಕಳೆದ ವಾರದಿಂದ ಕೇಂದ್ರ ಚುನಾವಣಾ ಆಯೋಗದ ತಂಡ ಉತ್ತರ ಪ್ರದೇಶ, ಗೋವಾ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಚುನಾವಣಾ ತಯಾರಿ ಕುರಿತು ಸಭೆ ನಡೆಸುತ್ತಿದೆ.
ಪಕ್ಷಗಳ ತಯಾರಿ; ಗೋವಾ ವಿಧಾನಸಭೆ ಚುನಾವಣೆಗೆ ಪಕ್ಷಗಳು ತಯಾರಿ ಆರಂಭಿಸಿವೆ. ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಎಎಪಿ, ಟಿಎಂಸಿ ಮತ್ತು ಸ್ಥಳೀಯ ಪಕ್ಷಗಳು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿವೆ. ಈ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಮೊದಲ ಬಾರಿಗೆ ಗೋವಾದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಸಹ ಚುನಾವಣಾ ತಯಾರಿಯನ್ನು ಆರಂಭಿಸಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಎಎಪಿಗೆ ಪ್ರತಿಪಕ್ಷ ಸ್ಥಾನ ಸಿಗಲಿದೆ ಎಂದು ಹೇಳಿವೆ.
ಕೋವಿಡ್ ಪರಿಸ್ಥಿತಿ ಇದ್ದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚುನಾವಣೆನಡೆಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲಹೆ ನೀಡಿವೆ. ಉತ್ತರ ಪ್ರದೇಶ ದೊಡ್ಡ ರಾಜ್ಯವಾದ ಕಾರಣ ಮೊದಲು ಅಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ 13 ಸ್ಥಾನಗಳಲ್ಲಿ ಜಯಗಳಿಸಿದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.












Click it and Unblock the Notifications