ತನ್ನದೇ ಅಪಹರಣದ ಸಂಚು ರೂಪಿಸಿದ ಬಾಲಕ! ಹೀಗೊಂದು ಆಪರೇಶನ್ ಅಲಮೇಲಮ್ಮ ಪ್ರಸಂಗ!
ನೋಯ್ಡಾ, ಅಕ್ಟೋಬರ್ 17: ಆ ಹುಡುಗನಿಗೆ ಹನ್ನೊಂದು ವರ್ಷ. ಅಂದ್ರೆ ಕೇವಲ ಆರನೇ ತರಗತಿ! ತಂದೆ-ತಾಯಿ ಬೈದರು ಅನ್ನೋ ಒಂದೇ ಕಾರಣಕ್ಕೆ ತನ್ನದೇ ಅಪಹರಣದ ಸಂಚು ರೂಪಿಸಿ, ಐದು ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದ ಪೋರ ಈತ!
ಈ ಸಾಲುಗಳನ್ನು ಓದುತ್ತಿದ್ದಂತೆಯೇ ಕನ್ನಡದ 'ಆಪರೇಷನ್ ಅಲಮೇಲಮ್ಮ' ಚಿತ್ರ ನೆನಪಿಗೆ ಬಂದಿರಬೇಕಲ್ಲ?! ಹೌದು, ಆ ಚಿತ್ರದ ರೀತಿಯಲ್ಲಿಯೇ ನಡೆದ ಘಟನೆ ಇದು.
ವಿಷಯ ಪೊಲೀಸರಿಗೆ ತಿಳಿದು, ನಂತರ ಯಾವ ಅಪಾಯವೂ ಇಲ್ಲದೆ ಘಟನೆಗೆ ಶುಭ ಅಂತ್ಯ ಕಂಡಿತಾದರೂ, ಕೇವಲ ಹನ್ನೊಂದು ವರ್ಷ ವಯಸ್ಸಿನ ಹುಡುಗ ಅಪ್ಪ-ಅಮ್ಮನನ್ನು ಹೆದರಿಸುವುದಕ್ಕಾಗಿ ಈ ರೀತಿಯ ಸಂಚು ಹೋಡಿದ್ದು ಮಾತ್ರ ಅಚ್ಚರಿ ಮೂಡಿಸಿದೆ.

ಕಿರಾಣಿ ಅಂಗಡಿಯಲ್ಲಿ ಹಣ ಕದಿಯುತ್ತಿದ್ದ ಹುಡುಗ
ಈ ಬಾಲಕನ ತಂದೆಯದು ಕಿರಾಣಿ ಅಂಗಡಿಯಿತ್ತು. ಶಾಲೆಯಿಂದ ಬಂದ ನಂತರ ಅಥವಾ ರಜಾ ದಿನಗಳಲ್ಲಿ ತಂದೆಯು, ಮಗನನ್ನು ಅಂಗಡಿಗೆ ತಂದು ಕೂರಿಸಿ ವ್ಯವಹಾರ ನೋಡಿಕೊಳ್ಳುವಂತೆ ಹೇಳುತ್ತಿದ್ದರು. ಇದು ಹುಡುಗನಿಗೆ ಇಷ್ಟವಿರಲಿಲ್ಲ. ಕಿರಾಣಿ ಅಂಗಡಿಯ ಡ್ರಾಯರ್ ನಲ್ಲಿ ಇರುತ್ತಿದ್ದ ಹಣವನ್ನು ಹುಡುಗ ಕದಿಯುತ್ತಿರುವುದು ತಂದೆಗೆ ತಡವಾಘಿ ತಿಳಿಯಿತು. ಇದರಿಂದ ಮಗನನ್ನು ಚೆನ್ನಾಗಿ ಬೈದಿದ್ದರು ತಂದೆ.

ತಂದೆಯ ಬೈಗುಳದಿಂದ ಕೊಪ
ತಂದೆಯ ಬೈಗುಳ ಕೇಳಿ ಕೋಪಗೊಂಡಿದ್ದ ಮಗ ಅಂಗಡಿಗೆ ಹೋಗುವುದನ್ನು ಬಿಟ್ಟಿದ್ದ. ಆದರೆ ಕೆಲ ದಿನಗಳ ನಂತರ ಮತ್ತೆ ತಂದೆ ಆತನನ್ನು ಅಂಗಡಿಗೆ ಕರೆದೊಯ್ಯತೊಡಗಿದರು. ಆದರೆ ಈಗಲೂ ತಂದೆಯ ಕಣ್ತಪ್ಪಿಸಿ ಹಣ ಕದಿಯುವುದಕ್ಕೆ ಶುರು ಮಾಡಿದ್ದ. ಇದು ಬಾಲಕನ ಚಿಕ್ಕಪ್ಪನಿಗೆ ಒಮ್ಮೆ ತಿಳಿದು ಅವರೂ ಬಾಲಕನನ್ನು ಗದರಿದ್ದರು.

ಮನೆಬಿಟ್ಟು ತೆರಳಿದ ಹುಡುಗ
ಪಾಲಕರ ನಿರಂತರ ಬೈಗುಳದಿಂದ ಕೋಪಗೊಂಡ ಹುಡುಗ ಇತ್ತೀಚೆಗೆ ಒಂದು ದಿನ ಶಾಲೆಗೆ ಹೊರಟವನು ಮನೆಗೆ ಬಂದಿರಲಿಲ್ಲ. ಎಷ್ಟು ಹೊತ್ತಾದರೂ ಮಗ ಬಾರದಿದ್ದಾಗ ಕುಟುಂಬಸ್ಥರಿಗೆ ಗಾಬರಿಯಾಗಿತ್ತು. ಈ ಸಂದರ್ಭದಲ್ಲಿ ಫೋನ್ ಕರೆ ಮಾಡಿದ ಹುಡುಗ, ತನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ. ನಾನು ಈಗ ಬಿಸ್ರಾಖ್ ಪ್ರದೇಶದಲ್ಲಿದ್ದೀನಿ. ಕೂಡಲೇ ಐದು ಲಕ್ಷ ರೂ.ಗಳೊಂದಿಗೆ ಈ ಸ್ಥಳಕ್ಕೆ ಬನ್ನಿ ಎಂದು ಹೇಳ ಫೋನ್ ಇಟ್ಟ. ಈ ವಿಷಯವನ್ನು ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.

ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಬಾಲಕ
ಬಾಲಕ ಬಿಸ್ರಾಖ್ ಪ್ರದೇಶದಲ್ಲಿ ಕಟ್ಟಡವೊಂದರ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಬಳಿ ಫೋನ್ ಪಡೆದು ಮನೆಗೆ ಫೋನಾಯಿಸಿದ್ದ. ಆತನ ಫೋನ್ ನಂಬರ್ ಟ್ರೇಸ್ ಮಾಡುವುದಕ್ಕೆ ಪೊಲೀಸರು ಪ್ರಯತ್ನಿಸಿದರೂ, ಅದು ಆಗಾಗ ಸ್ವಿಚ್ಡ್ ಆಫ್ ಆಗುತ್ತಿತ್ತು. ನಂತರ ಬಿಸ್ರಾಖ್ ಪೊಲೀಸರು ಬಾಲಕನ್ನು ಹುಡುಕಲು ಯಶಸ್ವಿಯಾದರು. ವಿಚಾರಣೆಯ ವೇಳೆ ತಾನೇ ಈ ಕೆಲಸ ಮಾಡಿದ್ದು ಎಂಬುದನ್ನು ಬಾಲಕ ಒಪ್ಪಿಕೊಂಡಿದ್ದಾನೆ. ಇದುವರೆಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.












Click it and Unblock the Notifications