ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ಡ್ರಾ ಮಾಡಬಹುದು
ಹಣ ವಿತ್ ಡ್ರಾ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದ್ದು, ಮದುವೆ ಮತ್ತಿತರ ಸಮಾರಂಭಗಳಿಗಾಗಿ ಒಮ್ಮೆಲೆ 2.5 ಲಕ್ಷ ರೂ. ವರೆಗೂ ಡ್ರಾ ಮಾಡಲು ಗುರುವಾರ ಅವಕಾಶ ಕಲ್ಪಿಸಿದೆ.
ನವದೆಹಲಿ, ನವೆಂಬರ್, 17: ಹಣದ ಕೊರತೆಯಿಂದ ಶುಭ ಸಮಾರಂಭಗಳಿಗೆ ಪೆಟ್ಟು ಬೀಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರ ಹಣ ವಿತ್ ಡ್ರಾ ಮಾಡಿಕೊಳ್ಳಲು ವಿಧಿಸಿದ್ದ ನಿಯಮಗಳನ್ನು ಸಡಿಲಿಸಿದೆ.
ಮದುವೆ ಮತ್ತು ಇತರೆ ಸಮಾರಂಭಗಳನ್ನು ನಡೆಸಲು ಹಣದ ಕೊರತೆ ಎದುರಿಸುತ್ತಿರುವ ವ್ಯಕ್ತಿಯು ತನ್ನ ಖಾತೆಯಿಂದ 2.5 ಲಕ್ಷ ರೂ. ವರೆಗೂ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. [ನೋಟು ಬದಲಾವಣೆ ನಿರ್ಧಾರ ಯಾವ್ಯಾವ ದೇಶದಲ್ಲಿ ಸೋತಿದೆ?]

ಈ ಕುರಿತು ಗುರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಮದುವೆ ಸಮಾರಂಭಗಳಿಗೆ ಹಣ 2.5ಲಕ್ಷದ ವರೆಗೂ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಹೇಳಿದರು.
ಆದರೆ ಹಣ ಡ್ರಾ ಮಾಡಿಕೊಳ್ಳುವ ವ್ಯಕ್ತಿಯ ಕೆವೈಸಿ KYC- Know your customer (ನಿಮ್ಮ ಗ್ರಾಹಕನ ಬಗ್ಗೆ ತಿಳಿದಿರಲಿ) ವಿವರಗಳನ್ನು ಬ್ಯಾಂಕ್ ಗೆ ಸಲ್ಲಿಸುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.
ಗರಿಷ್ಠ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ಜನಸಾಮಾನ್ಯರು ದಿನನಿತ್ಯದ ಖರ್ಚುಗಳಿಗಾಗಿ ಪೇಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು, ರೈತರು ಸಾಕಷ್ಟು ಹಣವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇನ್ನು ಮದುವೆ ಸಮಾರಂಭಗಳನ್ನು ಹಮ್ಮಿಕೊಂಡಿದ್ದ ಕುಟುಂಬಗಳಿಗೆ ಇದರ ಬಿಸಿ ತಟ್ಟಿತ್ತು.












Click it and Unblock the Notifications