ಮೆಜೆಸ್ಟಿಕ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯಂತೆ ಗಿರಾಕಿ ಹುಡುಕಿ, ಸಮಾಜದ ಕಣ್ತೆರೆಸಿದ ನಟಿ ಕಾವ್ಯಾ ಶಾ
ಬೆಂಗಳೂರಿನ ಹೃದಯ ಭಾಗವಾಗಿರುವ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಕೇವಲ ಸಾವಿರಾರು ಪ್ರಯಾಣಿಕರ ನಿಲ್ದಾಣವಷ್ಟೇ ಅಲ್ಲ. ಅದರ ತೆರೆಮರೆಯಲ್ಲಿ ಅಸಂಖ್ಯಾತ ಕಣ್ಣೀರಿನ ಕಥೆಗಳೂ ಇವೆ. ಮೆಜೆಸ್ಟಿಕ್‌ನ ಕೆಲವು ರಸ್ತೆಗಳ ಬದಿಯಲ್ಲಿ ನಿಲ್ಲುವ ಲೈಂಗಿಕ ಕಾರ್ಯಕರ್ತೆಯರನ್ನು ಕಂಡು ಸಮಾಜ ಕೀಳಾಗಿ ನೋಡುವುದು, ಕಾಮದ ಕಣ್ಣಿನಿಂದ ಅಳೆಯುವುದು ಹೊಸದೇನಲ್ಲ. ಆದರೆ, ಯಾರೂ ಧೈರ್ಯ ಮಾಡದ ಅಂತಹದ್ದೊಂದು ಜಾಗದಲ್ಲಿ ಸ್ವತಃ ತಾವೇ ಲೈಂಗಿಕ ಕಾರ್ಯಕರ್ತೆಯಂತೆ ವೇಷ ಧರಿಸಿ ನಿಲ್ಲುವ ಮೂಲಕ, ಅಲ್ಲಿನ ಕಟು ಸತ್ಯವನ್ನು ಸಮಾಜದ ಮುಂದೆ ತಂದಿಟ್ಟಿದ್ದಾರೆ ಕನ್ನಡದ ಕಿರುತೆರೆ ಹಾಗೂ ಸಿನಿಮಾ ನಟಿ ಕಾವ್ಯಾ ಶಾ (Kaavya Sha).
ಹೊಟ್ಟೆಪಾಡಿನ ಒದ್ದಾಟ
ಲೈಂಗಿಕ ಕಾರ್ಯಕರ್ತೆಯರ ದೈನಂದಿನ ಯಾತನೆ, ಗಿರಾಕಿಗಳಿಗಾಗಿ ಕಾಯುವ ಅವರ ಒದ್ದಾಟ ಹಾಗೂ ವ್ಯವಹಾರ ಕುದುರಿಸುವಾಗ ಎದುರಾಗುವ ಮುಜುಗರದ ಕ್ಷಣಗಳನ್ನು ಕಾವ್ಯಾ ಶಾ ತಮ್ಮ ವಿಡಿಯೋದಲ್ಲಿ ಅತ್ಯಂತ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. ತಮಗೆ ಬೇಕಾದಾಗ ಬಳಸಿಕೊಂಡು, ಆನಂತರ ಅದೇ ಮಹಿಳೆಯರನ್ನು ಸಮಾಜ ಹೇಗೆ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತದೆ ಮತ್ತು ಅವರ ಮನಸ್ಥಿತಿಯನ್ನು ಹೇಗಿರುತ್ತದೆ ಎಂಬುದನ್ನು ಕಾವ್ಯಾ ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದಾರೆ. ಒಂದೆಡೆ ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಕೀಟಲೆ, ಮತ್ತೊಂದೆಡೆ ಪೊಲೀಸರ ನಿರಂತರ ಕಾಟದ ಮಧ್ಯೆ ಬದುಕುವ ಇವರ ಸಂಕಟಗಳನ್ನು ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರೀತಿಯ ಹೆಸರಲ್ಲಿ ಮೋಸ ಹೋದವರ ಧ್ವನಿ
ಈ ವೃತ್ತಿಗೆ ಬರುವ ಬಹುತೇಕ ಹೆಣ್ಣುಮಕ್ಕಳು ಇಷ್ಟಪಟ್ಟು ಬಂದವರಲ್ಲ ಎಂಬ ವಾಸ್ತವವನ್ನು ಕಾವ್ಯಾ ಇಲ್ಲಿ ನೆನಪಿಸಿದ್ದಾರೆ. ನಂಬಿದವರಿಂದಲೇ ಪ್ರೀತಿ-ಪ್ರೇಮದ ಹೆಸರಿನಲ್ಲಿ ವಂಚನೆಗೆ ಒಳಗಾಗಿ, ದಿಕ್ಕುತೋಚದೆ ಕೊನೆಗೆ ಹೊಟ್ಟೆಪಾಡಿಗಾಗಿ ಈ ಕರಾಳ ದಂಧೆಗೆ ತಳ್ಳಲ್ಪಟ್ಟ ಅಸಹಾಯಕ ಮಹಿಳೆಯರ ಪರವಾಗಿ ಕಾವ್ಯಾ ಶಾ ಧ್ವನಿ ಎತ್ತಿದ್ದಾರೆ. "ಈ ವ್ಯವಸ್ಥೆಯಲ್ಲಿ ಯಾರೇ ತಪ್ಪು ಮಾಡಿದರೂ ಸಹ ಅಂತಿಮವಾಗಿ ಅವಮಾನ, ಸಮಾಜದ ನಿಂದನೆ, ಕಠಿಣ ಶಿಕ್ಷೆ ಮತ್ತು ಸಾವು... ಇವೆಲ್ಲವೂ ಕೇವಲ ಹೆಣ್ಣಿಗೆ ಮಾತ್ರ ಯಾಕೆ ಸೀಮಿತವಾಗುತ್ತದೆ?" ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ
ಕೇವಲ ಗ್ಲಾಮರ್ ಅಥವಾ ಮನರಂಜನೆಗೆ ಸೀಮಿತವಾಗದೆ, ಸಮಾಜದ ಅತ್ಯಂತ ನಿರ್ಲಕ್ಷಿತ ಹಾಗೂ ಶೋಷಿತ ವರ್ಗದ ನೋವಿಗೆ ಕನ್ನಡಿ ಹಿಡಿದಿರುವ ನಟಿ ಕಾವ್ಯಾ ಶಾ ಅವರ ಈ ಸಾಹಸಕ್ಕೆ ಇಂಟರ್ನೆಟ್‌ನಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಕೇವಲ ಒಂದು ರೀಲ್ ಆಗಿ ಉಳಿಯದೆ, ಸಾರ್ವಜನಿಕರಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗೆಗಿನ ಧೋರಣೆಯನ್ನು ಬದಲಾಯಿಸುವ ಮತ್ತು ಅವರ ಮಾನಸಿಕ ಯಾತನೆಯನ್ನು ಅರ್ಥಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ನಟಿ ಕಾವ್ಯಾ ಶಾ ಅವರಂತಹ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಸುಪ್ರೀಂಕೋರ್ಟ್ ಕಾನೂನಿನ ಮೂಲಕ ಈ ವ್ಯವಸ್ಥೆಗೆ ಲಕ್ಮಣ ರೇಖೆಯನ್ನು ಎಳೆದಿದೆ. ಈ ಇವೆರಡರ ಆಶಯ ಒಂದೇ. "ವೃತ್ತಿ ಯಾವುದೇ ಇರಲಿ, ಪ್ರತಿಯೊಂದು ಜೀವಕ್ಕೂ ತನ್ನದೇ ಆದ ಗೌರವ ಮತ್ತು ಬದುಕುವ ಹಕ್ಕಿದೆ". ಲೈಂಗಿಕ ಕಾರ್ಯಕರ್ತೆಯರಿಗೂ ಸಮಾಜದಲ್ಲಿ ಘನತೆ ಸಿಗಬೇಕು. ಸ್ವಯಂಪ್ರೇರಿತವಾಗಿ ಆ ವೃತ್ತಿಯಲ್ಲಿರುವವರಿಗೆ ಕಾನೂನುಬದ್ಧ ಗೌರವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಬೇಕಿದೆ. ಈ ಸೂಕ್ಷ್ಮ ವ್ಯತ್ಯಾಸವನ್ನು ಅರಿತು ವ್ಯವಸ್ಥೆ ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದಾಳಿಗಳ ಹೆಸರಿನಲ್ಲಿ ಇವರ ಫೋಟೋ ಹಾಗೂ ವೀಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿ, ಇಡೀ ಸಮಾಜದ ಮುಂದೆ ಇವರ ಗೌಪ್ಯತೆಯನ್ನು ಹರಾಜು ಹಾಕುವುದನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಖಂಡಿಸಿದೆ. ಯಾವುದೇ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ. ಇವರನ್ನು ಕೇವಲ 'ಸರಕು' ಎಂದು ನೋಡದೆ 'ನಾಗರಿಕರು' ಎಂದು ಗುರುತಿಸುವಂತೆ ಹೇಳಿದೆ.













Click it and Unblock the Notifications