Traffic Advisory: ಬೆಂಗಳೂರಿನ ಈ ಭಾಗದ ರಸ್ತೆಗಳಲ್ಲಿ 6 ದಿನ ಸಂಚಾರ ಬಂದ್, ಪರ್ಯಾಯ ಮಾರ್ಗಗಳು
ಬೆಂಗಳೂರು: ಬೆಂಗಳೂರಿನಲ್ಲಿ ಒಂದಿಲ್ಲೊಂದು ಕಡೆ ನಿತ್ಯ ಅಭಿವೃದ್ಧಿ ಯೋಜನೆಗಳು, ಮಳೆ ಕಾರಣ ಅಥವಾ ಕಾರ್ಯಕ್ರಮಗಳ ಸಲುವಾಗಿ ಸಂಚಾರ ಮಾರ್ಗ ಬದಲಾವಣೆ ಆಗಿರುತ್ತದೆ. ಇದೀಗ ಕೃಷ್ಣರಾಜಪುರಂ ಬಳಿಯ ಲೌರಿ ಅಂಡರ್ ಬ್ರಿಡ್ಜ್‌ನಲ್ಲಿ ರೈಲ್ವೆ ಸೇತುವೆಯ ಸ್ಲ್ಯಾಬ್ ಬದಲಿಸುವ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಗೆ ಮಹತ್ವದ ಸಲಹೆ ನೀಡಲಾಗಿದೆ. ಸಂಚಾರ ಮಾರ್ಗ ನಿರ್ಬಂಧಿಸುವ ಜೊತೆಗೆ ಪರ್ಯಾಯ ಮಾರ್ಗಗಳನ್ನು ಒದಗಿಸಲಾಗಿದೆ.
ಕೆ.ಆರ್.ಪುರಂ ವ್ಯಾಪ್ತಿಯ ರೈಲ್ವೆ ಬ್ರಿಡ್ಜ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧಗಳು ಮತ್ತು ಮಾರ್ಗ ಬದಲಾವಣೆ ಜೂನ್ 4ರಿಂದಲೇ ಜಾರಿಗೊಳಿಸಲಾಗಿದೆ ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಾಹನ ಸವಾರರು ತಮ್ಮ ದೈನಂದಿನ ಸಂಚಾರಕ್ಕಾಗಿ ತಿಳಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ.

ಲೌರಿ ಅಂಡರ್ ಬ್ರಿಡ್ಜ್ ಮೂಲಕ ಕೃಷ್ಣರಾಜಪುರಂ, ರಾಮಮೂರ್ತಿ ನಗರ ಹಾಗೂ ಐಟಿಐ ಕಾಲೋನಿ ಕಡೆಗೆ ಹೋಗುವ ರಸ್ತೆಯನ್ನು ಜೂನ್ 4 ರಿಂದ ಜೂನ್ 9 ರವರೆಗೆ ಸಂಪೂರ್ಣ ಬಂದ್ ಆಗಿರಲಿದ್ದು, ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಜೂನ್ 4 ರಿಂದ ಜೂನ್ 9 ರವರೆಗೆ ಇಲ್ಲಿ ಸಂಚಾರ ಬಂದ್
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಐಟಿಐ ಕಾಲೋನಿ, ರಾಮಮೂರ್ತಿ ನಗರ ಮತ್ತು ಕೃಷ್ಣರಾಜಪುರಂ ತಲುಪಲು ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಬೇಕಿದೆ. ಇದೇ ರೀತಿ, ಲೌರಿ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಐಟಿಪಿಎಲ್ ಹಾಗೂ ವೈಟ್‌ಫೀಲ್ಡ್ ಕಡೆಗೆ ಸಾಗುವ ರಸ್ತೆಯನ್ನು ಜೂನ್ 4 ರಿಂದ ಜೂನ್ 9 ರವರೆಗೆ ಮುಚ್ಚಲಾಗುತ್ತದೆ. ಇನ್ನೂ ಐಟಿಪಿಎಲ್ ಮತ್ತು ವೈಟ್‌ಫೀಲ್ಡ್‌ಗೆ ತೆರಳುವ ಪ್ರಯಾಣಿಕರು, ಈ ಅವಧಿಯಲ್ಲಿ ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಬಳಸಿಕೊಳ್ಳಬಹುದು.
ಕೆ.ಆರ್. ಪುರಂ-ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಐಟಿಪಿಎಲ್/ವೈಟ್‌ಫೀಲ್ಡ್ ಕಡೆಗಿನ ಮಾರ್ಗವನ್ನು ಜೂನ್ 7ರ ಸಂಜೆ 6 ಗಂಟೆಯಿದ ಜೂನ್ 8ರಂದು ಬೆಳಗ್ಗೆ 6 ಗಂಟೆ ರವರೆಗೆ ಬಂದ್ ಮಾಡಲಾಗುತ್ತದೆ. ಈ ಅವಧಿಯಲ್ಲಿ, ವಾಹನ ಸವಾರರು ರೋಡ್ ಅಂಡರ್ ಬ್ರಿಡ್ಜ್ (RUB) ಬಳಿ ಒದಗಿಸಲಾದ ತಿರುವು ರಸ್ತೆಯನ್ನು ಬಳಸಿಕೊಂಡು ತಮ್ಮ ಸಂಚಾರವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಮಗಾರಿ ಮುಗಿಯುವವರೆಗೆ ಜಾರಿಗೊಳಿಸಲಾಗಿರುವ ಈ ತಾತ್ಕಾಲಿಕ ಸಂಚಾರ ನಿರ್ಬಂಧಗಳಿಂದ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗಲಿದೆ. ಈ ಸಂಚಾರ ಅಡಚಣೆಗೆ ರೈಲ್ವೆ ಅಧಿಕಾರಿಗಳು, ಬೆಂಗಳೂರು ಸಂಚಾರಿ ಪೊಲೀಸರು ವಿಷಾಧಿಸಿದ್ದು, ನಾಗರಿಕರ ಸಹಕಾರ ಕೋರಿದ್ದಾರೆ.
ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕರಣೆ
ನಾರಾಯಣಗಢ-ಭದ್ರಕ್ 3ನೇ ರೈಲು ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಸಲಾಗುತ್ತದೆ. ರೂಪ್ಸಾ ಯಾರ್ಡ್‌ನಲ್ಲಿ ನವಿಕರಣ ಕೆಲಸದ ಮುಂದುವರಿದಿದೆ. ಈ ಕಾರಣದಿಂದ ದಕ್ಷಿಣ ಪೂರ್ವ ರೈಲ್ವೆಯು ಜೂನ್ ತಿಂಗಳಲ್ಲಿ ಕೆಲವು ರೈಲುಗಳ ವೇಳಾಪಟ್ಟಿಯನ್ನು ತಾತ್ಕಾಲಿಕ ಪರಿಷ್ಕರಣೆ ಮಾಡಿದೆ. ಅದರ ವಿವರ ಇಲ್ಲಿದೆ
ಜೂನ್ 06 ಹೌರಾ-ಎಸ್ಎಂವಿಟಿ ಬೆಂಗಳೂರು ಡುರಂಟೊ ಎಕ್ಸ್‌ಪ್ರೆಸ್ ರೈಲು (12245) ತನ್ನ ಮೂಲಕ ನಿಲ್ದಾಣದಿಂದ 60 ನಿಮಿಷ ತಡವಾಗಿ ಪ್ರಯಾಣ ಬೆಳೆಸುತ್ತದೆ. ಜೂನ್ 07 ರಂದು ಅದೇ ದಿಕ್ಕಿನಲ್ಲಿ ಮರಳಿ ಹೋಗುವಾಗ ಹೌರಾ ರೈಲು ನಿಲ್ದಾಣದಿಂದ 120 ನಿಮಿಷ ತಡವಾಗಿ ಪ್ರಯಾಣ ಆರಂಭಿಸುತ್ತದೆ. ಎರಡು ಮಾರ್ಗದ ಪ್ರಯಾಣಿಕರು ಈ ಬದಲಾವಣೆ ನೋಡಿಕೊಂಡು ತಮ್ಮ ಸಂಚಾರ ಪ್ಲ್ಯಾನ್ ಮಾಡಿಕೊಳ್ಳಬೇಕು.
ಜೂನ್ 05ರಂದು ಇನ್ನೂ ಎಸ್ಎಂವಿಟಿ ಬೆಂಗಳೂರು-ಹೌರಾ ಡುರಂಟೊ ಎಕ್ಸ್‌ಪ್ರೆಸ್ ರೈಲು (12246) ಮಾರ್ಗ ಮಧ್ಯೆ ಸುಮಾರು ಎರಡು ಗಂಟೆ (120 ನಿಮಿಷ) ನಿಯಂತ್ರಣಕ್ಕೆ ಒಳಪಡಲಿದೆ. ಮಾರನೇ ದಿನ ಜೂನ್ 06 ರಂದು ಬೆಂಗಳೂರಿನ ಎಸ್ಎಂವಿಟಿ-ಕಾಮಕ್ಯ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12551) ಮಾರ್ಗದ ನಡುವೆ ಸುಮಾರು ಮೂರು ಗಂಟೆ (180 ನಿಮಿಷ) ನಿಯಂತ್ರಿಸಲ್ಪಡುತ್ತದೆ. ಇದರಿಂದ ಸಂಚಾರ ವಿಳಂಬವಾಗಲಿ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.














Click it and Unblock the Notifications