ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆ: ಸಿಎಂ ಆಗಿ ಪದಗ್ರಹಣ ಯಾವಾಗ?
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಶನಿವಾರ ಘೋಷಿಸಿದರು. ಈ ಮೂಲಕ ಮುಖ್ಯಮಂತ್ರಿ ಪಟ್ಟ ಅಲಂಕರಿಸಲು ಡಿಕೆಶಿ ಅವರು ಸಜ್ಜಾಗಿದ್ದಾರೆ. ಶೀಘ್ರವೇ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಡಿಕೆ ಶಿವಕುಮಾರ್ ಅವರ ಸಿಎಂ ಪದಗ್ರಹಣಕ್ಕೂ ಮಹೂರ್ತ ಫಿಕ್ಸ್ ಆಗಲಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಶನಿವಾರ (ಮೇ 30) ಸಂಜೆ 4 ಗಂಟೆಗೆ ನಡೆದ ಮಹತ್ವದ ಸಭೆಯಲ್ಲಿ ನಿಯಮದಂತೆ ಮುಖ್ಯಮಂತ್ರಿಗಳ ರಾಜೀನಾಮೆ ಬಳಿಕ ಹೊಸ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಸೂಚಿಸಿದ್ದು, ಅದರಂತೆ ಆಯ್ಕೆ ಮಾಡಲಾಯಿತು.

ಆಯ್ಕೆ ಪ್ರಕ್ರಿಯೆಗೆ ಸುರ್ಜೇವಾಲ ಚಾಲನೆ
ಗೃಹ ಸಚಿವರ ಡಾ. ಜಿ ಪರಮೇಶ್ವರ್ ಅವರು ಶಾಸಕಾಂಗ ಪಕ್ಷದ ನೂತನ ನಾಯಕರನ್ನು ಅನುಮೋದಿಸುತ್ತಿದ್ದಂತೆ ಸಭೆಯ ಎಲ್ಲ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು. ಸಭೆಯ ಆರಂಭಕ್ಕೂ ಮುನ್ನ ಸಾಂವಿಧಾನಿಕ ನಿಯಮಗಳಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪ್ರಕಟಿಸಿ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ಮಂಡಿಸಿದರು. ಆಯ್ಕೆ ಅನುಮೋದಿಸುತ್ತಿದ್ದಂತೆ ಎಲ್ಲ ಶಾಸಕರು ಕೈ ಎತ್ತುವ ಮೂಲಕ ಡಿಕೆ ಶಿವಕುಮಾರ್ ಅವರ ಆಯ್ಕೆಯನ್ನು ಬೆಂಬಲಿಸಿದರು. ಬಳಿಕ ಸುರ್ಜೇವಾಲ ಅವರು ಹತ್ತು ನಿಮಿಷಗಳ ವಿರಾಮ ಘೋಷಿಸಿದರು.
ಆಯ್ಕೆ ಪ್ರಕ್ರಿಯೆ ಹೇಗಿತ್ತು?
ಸುಮಾರು 10 ನಿಮಿಷಗಳ ವಿರಾಮದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಿಎಂ ಕೊಠಡಿಗೆ ತೆರಳಿದರು. ಅಲ್ಲಿಂದ ಸಮ್ಮೇಳನ ಸಭಾಂಗಣಕ್ಕೆ ಮೂವರು ವಾಪಸ್ಸು ಬಂದ ನಂತರ ಶಾಸಕಾಂಗ ಪಕ್ಷದ ನೂತನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಡಿ.ಕೆ.ಶಿವಕುಮಾರ್ ಅವರು ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯ ಕಾರ್ಯವೈಖರಿಯನ್ನು ಕೊಂಡಾಡಿದರು. ಬಳಿಕ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಸಭೆ ಒಕ್ಕೋರಲಿನಿಂದ ಬೆಂಬಲಿಸಿತು. ಈ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕರ ಆಯ್ಕೆ ಜರುಗಿತೆಂದು ರಾಜ್ಯ ಕಾಂಗ್ರೆಸ್ ಮಾಹಿತಿ ನೀಡಿದೆ.













Click it and Unblock the Notifications