Plastic Notes: ಭಾರತದಲ್ಲಿ ಬರಲಿವೆ ಪ್ಲಾಸ್ಟಿಕ್ ನೋಟುಗಳು: ಕಾಗದದ ನೋಟುಗಳಿಗೆ ಗುಡ್‌ಬೈ?
ನವದೆಹಲಿ: ಬ್ಯಾಂಕ್‌ಗಳ ನಿರ್ವಹಣೆ, ನೋಟುಗಳ ಮುದ್ರಣದ ಮೇಲೆ ಅಪಾರ ನಿಯಂತ್ರಣ, ಅಧಿಕಾರ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳ ಸಾರ್ವಜನಿಕ ಬಳಕೆಗೆ ತರಲು ಮುಂದಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕರೆನ್ಸಿ ನೋಟುಗಳ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಬೇಡಿಕೆ ನಿಭಾಯಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್‍ಬಿಐ ಮೂಲಗಳು ತಿಳಿಸಿವೆ ಎಂದು ವರದಿ ಆಗಿದೆ.
ಕರೆನ್ಸಿಗೆ ಬೇಡಿಕೆ ಹಿನ್ನೆಲೆಯಲ್ಲಿ ನಡೆದ ಇತ್ತೀಚಿನ ಕೇಂದ್ರೀಯ ಬ್ಯಾಂಕ್‌ನ ಕಳೆದ ಎರಡು ಮಂಡಳಿ ಮಹತ್ವದ ಸಭೆಗಳಲ್ಲಿ (ಪಾಟ್ನಾ ಮತ್ತು ಮುಂಬೈನಲ್ಲಿ ನಡೆದವು) ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳ ಮುದ್ರಣ, ಪರಿಚಯಿಸುವ ಕುರಿತಂತೆ ಚರ್ಚೆಗಳು ತೀವ್ರ ಸ್ವರೂಪ ಪಡೆದಿವೆ. ಉತ್ಪಾದನಾ ವೆಚ್ಚ ಕೊಂಚ ತಗ್ಗಲಿದ್ದು, ಇವು ಪ್ಲಾಸ್ಟಿಕ್ ನೋಟುಗಳಾಗಿದ್ದರಿಂದ ಬಾಳಿಕೆ ಹೆಚ್ಚು ಬರುತ್ತವೆ. ಈ ಕಾರಣದಿಂದ ಈಗಾಗಲೇ ಒಂದಷ್ಟು ನೋಟುಗಳನ್ನು ಪ್ರಾಯೋಗಿಕ ಬಳಕೆಗೆ ಮುದ್ರಿಸಲಾಗಿದೆ ಎನ್ನಲಾಗಿದೆ. ಆದಷ್ಟು ಶೀಘ್ರವೇ ದೇಶದಲ್ಲಿ ಚಲಾವಣೆಗೆ ನೀಡಲು ಯೋಜಿಸಿದ್ದು, ಅಧಿಕೃತ ಮಾಹಿತಿ ಬಹಿರಂಗಗೊಳ್ಳಬೇಕಿದೆ.

ಪ್ರಸ್ತುತದಲ್ಲಿ ಆರ್‍ಬಿಐ ಕಾಗದದ ನೋಟುಗಳನ್ನು ಮುದ್ರಿಸಲಾಗುತ್ತದೆ. ಅದರ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳ ತಯಾರಿಕೆಯಲ್ಲಿ ವೆಚ್ಚದಲ್ಲಿ ಸಾಕಷ್ಟು ಬದಲಾವಣೆ ಇದೆ. ವೆಚ್ಚ ತಗ್ಗುವ ನಿರಿಕ್ಷೆ ಇವೆ. ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು (ಎಟಿಎಂ) ಪಾಲಿಮರ್ ಆಧಾರಿತ ನೋಟುಗಳನ್ನು ವಿತರಿಸಲು ಸಕ್ರಿಯಗೊಳಿಸಲಾಗುವುದು. ಇದನ್ನು ಮಾಡಲು ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳು ಈಗ ನಮ್ಮ ಬಳಿ ಲಭ್ಯವಿದೆ ಇತ್ತೀಚಿನ ಮಂಡಳಿಯ ಸಭೆಗಳಲ್ಲಿ ಚರ್ಚೆ ಮಾಡಲಾಗಿದೆ.
ಕಾಗದ ನೋಟು ಮುದ್ರಣ ವಾರ್ಷಿಕ ವೆಚ್ಚ ಏರಿಕೆ
ಆರ್‌ಬಿಐ ಎಫ್‌ವೈ25ರ ವಾರ್ಷಿಕ ವರದಿ ಪ್ರಕಾರ, 2024-25ರಲ್ಲಿ ಕಾಗದದ ಕರೆನ್ಸಿ ನೋಟುಗಳ ಭದ್ರ ಮುದ್ರಣಕ್ಕೆ 6,372.8 ಕೋಟಿ ರೂಪಾಯಿ ಖರ್ಚಾಗಿದೆ. ಅದರ ಹಿಂದಿನ ವರ್ಷ ನೋಟುಗಳ ಮುದ್ರಣಕ್ಕೆ 5,101.4 ಕೋಟಿ ರೂ. ಆಗಿತ್ತು. ವರ್ಷದಿಂದ ವರ್ಷಕ್ಕೆ ನೋಟುಗಳ ಮುದ್ರಣದ ವೆಚ್ಚದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ. ಬೇಡಿಕೆ ಹೆಚ್ಚಿದ್ದನ್ನು ನಿಭಾಯಿಸುವ ಜೊತೆಗೆ ಪಾಲಿಮಾರ್ ನೋಟುಗಳ ಬಾಳಿಕೆ ಅಧಿಕ. ಕಾಗದ ನೋಟುಗಳು ಹರಿಯುವುದು, ನೀರಿನಿಂದ ಹಾಳಾಗುವುದು ಹೆಚ್ಚು. ಹಾಲಿ ನೋಟುಗಳು ಬೇಗ ನಾಶವಾಗುತ್ತದೆ. ಇದರಿಂದ ಆರ್‍ಬಿಐಗೆ ಕಳಪೆ ನೋಟು ವಿಲೇವಾರಿ ಪ್ರಮಾಣ ಏರಿಕೆ ಕಂಡು ಬಂದಿದೆ. ಇದರಿಂದಲೂ ಆರ್‍ಬಿಐಗೆ ಒಂದಷ್ಟು ನಷ್ಟವಾಗುತ್ತಿದೆ. ಇದರ ಪರಿಹಾರಾರ್ಥವಾಗಿ ಪ್ಲಾಸಿಕ್ ನೋಟು ಸೂಕ್ತ ಎಂಬ ತೀರ್ಮಾನಕ್ಕೆ ಆರ್‍ಬಿಐ ಬಂದಿದೆ.
ವರದಿಗಳ ಪ್ರಕಾರ, ಆರ್‍ಬಿಐ 23.8 ಬಿಲಿಯನ್ ಕಳಪೆ ನೋಟುಗಳನ್ನು ವಿಲೇವಾರಿ ಮಾಡಿದೆ. ಹಿಂದಿನ ವರ್ಷದ 21.24 ಬಿಲಿಯನ್‌ಗಿಂತ ಅಧಿಕ (ಶೇ.12.3) ಕಳಪೆ ನೋಡುಗಳನ್ನು ವಿಲೇವಾರಿ ಮಾಡಿದೆ. ಅಂದರೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿರುವ 500 ರೂ. ಮತ್ತು 100 ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ವಿಲೇವಾರಿ ಮಾಡಲಾಗಿದೆ.
ಕಡಿಮೆ ಮೌಲ್ಯದ ನೋಟುಗಳ ಬಳಕೆ ಇಳಿಕೆ
ಕರೆನ್ಸಿ ಇನ್ ಸರ್ಕ್ಯುಲೇಶನ್ (ಸಿಐಸಿ) ಮೇ 15ರ ಹೊತ್ತಿಗೆ ₹42.86 ಟ್ರಿಲಿಯನ್ ದಾಖಲೆಯ ಗರಿಷ್ಠ ಮಟ್ಟ ತಲುಪುವ ಮೂಲಕ ವರ್ಷದಿಂದ ವರ್ಷಕ್ಕೆ ಶೇ.11.5ರಷ್ಟು ಏರಿಕೆಯಾಗಿದೆ. ಎಫ್‌ವೈ27ರ ಮೊದಲ ಒಂದೂವರೆ ತಿಂಗಳಲ್ಲಿ ಸಿಐಸಿ 1.15 ಟ್ರಿಲಿಯನ್ ರೂ.ನಷ್ಟು ವಿಸ್ತರಿಸಿತ್ತು. ಕಳೆದ ಕೆಲವು ವರ್ಷಗಳಿಂದ 10 ರೂಪಾಯಿ ಮತ್ತು 20 ರೂಪಾಯಿಗಿಂತ ಕಡಿಮೆ ಮುಖಬೆಲೆಯ ನೋಟುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಉತ್ಪಾದನೆ, ಬಳಕೆಯಲ್ಲಿ ಅವುಗಳ ಪಾಲು ಕಡಿಮೆ ಇರುತ್ತಿತ್ತು. ಕ್ರಮವಾಗಿ ಆ ನೋಟುಗಳ ಬಳಕೆಯ ಪಾಲು ಶೇ.0.7ರಷ್ಟು ಮತ್ತು ಶೇ.0.8ರಷ್ಟು ಇದೆ. ಈ ಮಧ್ಯ ನಾಣ್ಯಗಳ ಬಳಕೆ, ಜನಪ್ರಿಯತೆ ಹೆಚ್ಚಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ.













Click it and Unblock the Notifications