ಈ ಪಾತ್ರದಿಂದಾಗಿ ನನ್ನ ಕೆಟ್ಟ ಅಭ್ಯಾಸಗಳನ್ನೆಲ್ಲ ಬಿಟ್ಟಿದ್ದೇನೆ: ನಟ ರಣಬೀರ್ ಕಪೂರ್
ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಸದ್ಯ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' (Ramayana) ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗೆ ನಿರ್ದೇಶಕರ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರಣಬೀರ್, ಈ ಪಾತ್ರ ಕೇವಲ ನನ್ನ ವೃತ್ತಿಜೀವನವನ್ನಲ್ಲ, ಬದಲಿಗೆ ನನ್ನ ಇಡೀ ಜೀವನ ಮತ್ತು ಮೌಲ್ಯಗಳನ್ನೇ ಬದಲಾಯಿಸಿದೆ ಎಂದು ಹೇಳಿದ್ದಾರೆ.
"ನಾನು ಈ ಪಾತ್ರಕ್ಕೆ ಯೋಗ್ಯನೇ?" ಎಂಬ ಭಯವಿತ್ತು
ಮಗಳು ರಾಹಾಳಿಗಾಗಿ (Raha) ಒಬ್ಬ ಉತ್ತಮ ತಂದೆಯಾಗಲು ಪ್ರೇರಣೆ ನೀಡಿದೆ ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಇಷ್ಟು ದೊಡ್ಡ ಮಹಾಕಾವ್ಯದ ನಾಯಕನ ಪಾತ್ರವನ್ನು ಒಪ್ಪಿಕೊಳ್ಳಲು ರಣಬೀರ್ ಅವರಿಗೆ ಸಾಕಷ್ಟು ಹಿಂಜರಿಕೆಯಿತ್ತಂತೆ. "ನಾನು ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ನಾನು ಶ್ರೀರಾಮನ ಪಾತ್ರ ಮಾಡಲು ನಿಜಕ್ಕೂ ಯೋಗ್ಯನೇ? ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆದರೆ, ಕ್ರಮೇಣ ಆ ಭಯವು ಭಕ್ತಿ ಮತ್ತು ಕೃತಜ್ಞತೆಯಾಗಿ ಬದಲಾಯಿತು. ಈ ಸಿನಿಮಾ ನನ್ನ ವೃತ್ತಿ ಬದುಕಿಗಿಂತ ಹೆಚ್ಚಾಗಿ, ನನ್ನ ವೈಯಕ್ತಿಕ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿತು" ಎಂದು ರಣಬೀರ್ ಹೇಳಿದ್ದಾರೆ.

'ಕೆಟ್ಟ ಹವ್ಯಾಸಗಳು' ದೂರವಾದವು
ಶ್ರೀರಾಮನ ಧರ್ಮದ ಹಾದಿ ಮತ್ತು ಅವರ ಜೀವನವನ್ನು ಅರ್ಥಮಾಡಿಕೊಂಡ ನಂತರ ನನ್ನಲ್ಲಿದ್ದ ಹಲವು ಕೆಟ್ಟ ಅಭ್ಯಾಸಗಳು ದೂರಾಗಿವೆ ಎಂದು ರಣಬೀರ್ ಒಪ್ಪಿಕೊಂಡಿದ್ದಾರೆ. ರಾಮಾಯಣವು ನನ್ನ ಯೋಚನಾ ಶೈಲಿ, ತ್ಯಾಗ, ನಷ್ಟ ಮತ್ತು ಧರ್ಮದ ಬಗೆಗಿನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಸಕಾರಾತ್ಮಕವಾಗಿ ಬದಲಾಯಿಸಿತು. ನನ್ನ ಬದುಕಿಗೆ ಈ ರೀತಿಯ ಬದಲಾವಣೆಯ ಅಗತ್ಯವಿತ್ತು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಗಳು ರಾಹಾ ಹುಟ್ಟಿದ್ದು ಮತ್ತು ತಮಗೆ ರಾಮನ ಪಾತ್ರ ಸಿಕ್ಕಿದ್ದು ಒಂದು ಕಾಕತಾಳೀಯ ಎನ್ನುತ್ತಾರೆ ರಣಬೀರ್. "ಮಗಳು ನನ್ನನ್ನು ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ಮಾಡಿದರೆ, ರಾಮಾಯಣ ಸಿನಿಮಾವು ಮಗಳಿಗಾಗಿ ಮತ್ತಷ್ಟು ಆದರ್ಶಪ್ರಾಯ ತಂದೆಯಾಗಲು ದಾರಿ ತೋರಿಸಿತು. ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ" ಎಂದು ಅವರು ಭಾವುಕರಾಗಿದ್ದಾರೆ.
ರಾಮನಿಂದ ಕಲಿಯುವುದು ಸಾಕಷ್ಟಿದೆ
ಇಂದಿನ ಆಧುನಿಕ ಜಗತ್ತಿಗೆ ಶ್ರೀರಾಮನ ಗುಣಗಳು ಎಷ್ಟು ಪ್ರಸ್ತುತ ಎಂಬುದನ್ನು ರಣಬೀರ್ ಕಪೂರ್ ವಿವರಿಸಿದ್ದಾರೆ. "ಶ್ರೀರಾಮನಿಗೂ ಹಾರುವ ಅಥವಾ ಅದ್ಭುತ ಶಕ್ತಿಗಳಂತಹ ಸೂಪರ್ ಪವರ್ ಇಲ್ಲ. ಅವರ ನಿಜವಾದ ಶಕ್ತಿಯೇ ಅವರಲ್ಲಿರುವ ಶಾಂತಿ, ಅಪಾರ ಸಂಯಮ, ಧರ್ಮದ ಹಾದಿ ಮತ್ತು ಕ್ಷಮಾ ಗುಣ. ಇಂದು ನಾವೆಲ್ಲರೂ ಸಣ್ಣ ವಿಷಯಕ್ಕೂ ತಕ್ಷಣವೇ ರೊಚ್ಚಿಗೇಳುತ್ತೇವೆ, ನಮ್ಮ ಅಹಂ ಪ್ರದರ್ಶಿಸಲು ಯತ್ನಿಸುತ್ತೇವೆ. ಆದರೆ ಶ್ರೀರಾಮ ತನಗಾದ ಅನ್ಯಾಯ, ಸಂಘರ್ಷ ಮತ್ತು ನಷ್ಟದ ಸಂದರ್ಭದಲ್ಲೂ ಅಹಂನಿಂದಲ್ಲ, ಬದಲಿಗೆ ಕರುಣೆಯಿಂದ ಪ್ರತಿಕ್ರಿಯಿಸುತ್ತಾರೆ. ಶತ್ರುಗಳನ್ನು ಸಂಹರಿಸುವಾಗಲೂ ಅವರಲ್ಲಿರುವ ಕರುಣೆಯ ಭಾವನೆ ಅದ್ಭುತವಾದದ್ದು" ಎಂದಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ 'ರಾಮಾಯಣ' ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು 2026ರ ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಭವ್ಯವಾಗಿ ಬಿಡುಗಡೆಯಾಗಲಿದೆ.













Click it and Unblock the Notifications