'ಹಿಂದೂಗಳು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು': ಯತಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ
ನವದೆಹಲಿ ಏಪ್ರಿಲ್ 04: ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿರುವ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾನುವಾರ ದೆಹಲಿಯ ಬುರಾರಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು ಮತ್ತೊಮ್ಮೆ ಹಿಂದೂಗಳು ಶಸ್ತ್ರಾಸ್ತ್ರ ಹಿಡಿಯುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ದೇಶದಲ್ಲಿ ಒಬ್ಬ ಮುಸ್ಲಿಂ ಪ್ರಧಾನಿಯಾದರೆ ಆತನಿಂದ ಧಾರ್ಮಿಕ ಮತಾಂತರ, ಹಿಂಸಾಚಾರದ ಅಪಾಯ ಹೆಚ್ಚುತ್ತದೆ. ಹೀಗಾಗಿ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು ಎಂದು ನರಸಿಂಹಾನಂದರು ಹೇಳಿದ್ದಾರೆ.
ಒಬ್ಬ ಮುಸ್ಲಿಂ ಭಾರತದ ಪ್ರಧಾನಿಯಾದರೆ ಮುಂದಿನ 20 ವರ್ಷಗಳಲ್ಲಿ ದೇಶದ ಶೇ.50ರಷ್ಟು ಜನಸಂಖ್ಯೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲಿದೆ ಎಂದು ನರಸಿಂಹಾನಂದ ತುಂಬಿದ ಸಭೆಯಲ್ಲಿ ಹೇಳಿದರು. ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು. ಕಳೆದ ವರ್ಷವೂ ಪ್ರೀತ್ ಸಿಂಗ್ ಅವರು ಜಂತರ್ ಮಂತರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅದರಲ್ಲಿ ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು. ಆ ಸಮಯದಲ್ಲಿ ಪ್ರೀತ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರೀತ್ ಸಿಂಗ್ ಅವರು ದೇವಿಯ ಪ್ರಧಾನ ಅರ್ಚಕರಾಗಿದ್ದು, ಹರಿದ್ವಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ.

40 ರಷ್ಟು ಹಿಂದೂಗಳ ಕೊಲೆ
ಬುರಾರಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರಸಿಂಹಾನಂದ ಮಾತನಾಡಿ, ದೇಶದಲ್ಲಿ ಮುಸ್ಲಿಂ ಪ್ರಧಾನಿಯಾದರೆ ಶೇ.40 ರಷ್ಟು ಹಿಂದೂಗಳ ಹತ್ಯೆಯಾಗಲಿದೆ. ಇದನ್ನು ಬದಲಾಯಿಸಬೇಕಾದರೆ ಮನುಷ್ಯನಾಗಿರಿ. ಮನುಷ್ಯ ಮನುಷ್ಯನಾಗಿ ಉಳಿಯಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು. ಯಾರು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ ಅವರು ಉಳಿಯುತ್ತಾರೆ ಎಂದಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ನರಸಿಂಹಾನಂದರು ಮಾತನಾಡಿ, ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಮತ್ತು ಹೋರಾಟವನ್ನು ಕಲಿಸಬೇಕು. ಈ ಕಾರ್ಯಕ್ರಮದ ಬಗ್ಗೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದಾಗ, ನಾವು ವೀಡಿಯೊ ತುಣುಕನ್ನು ಪರಿಶೀಲಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಕೆಲವು ವಿಡಿಯೊಗಳು ಮುನ್ನೆಲೆಗೆ ಬಂದಿವೆ. ಈ ವಿಷಯದಲ್ಲಿ ಕಾನೂನು ಅಭಿಪ್ರಾಯವನ್ನು ತೆಗೆದುಕೊಂಡ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನರಸಿಂಹಾನಂದ್ ವಿರುದ್ಧ ಮತ್ತೆ ಎಫ್‌ಐಆರ್
ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಜಗಳವಾಡಬಾರದು ಎಂದು ನೀವು ಬಯಸಿದರೆ, ಕಾಶ್ಮೀರಿ ಫೈಲ್ಸ್ ಚಿತ್ರವನ್ನು ನೋಡಿ ಎಂದು ನರಸಿಂಹಾನಂದ ಹೇಳಿದರು. ಕಾಶ್ಮೀರದ ಜನರು ತಮ್ಮ ಮನೆಗಳನ್ನು ತಮ್ಮ ಹೆಣ್ಣುಮಕ್ಕಳನ್ನು ತೊರೆದು ತಮ್ಮ ಆಸ್ತಿಯನ್ನು ತೊರೆದರು. ಅದೇ ರೀತಿ ನಿಮ್ಮನ್ನು ಸಮುದ್ರಕ್ಕೆ ಎಸೆಯಲಾಗುತ್ತದೆ. ಇದು ನಿಮ್ಮ ಆಯ್ಕೆಯಾಗಿದೆ ಎಂದಿದ್ದಾರೆ. ಹೀಗಾಗಿ ಮತ್ತೆ ಪ್ರಚೋದನಕಾರಿ ಭಾಷಣ ಪ್ರಕರಣದಲ್ಲಿ ಯತಿ ನರಸಿಂಹಾನಂದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಭಾನುವಾರ ದೆಹಲಿ ಪೊಲೀಸರು ಹೇಳಿದ್ದಾರೆ. ಈ ಎಫ್‌ಐಆರ್‌ನಲ್ಲಿ ಸುದರ್ಶನ್ ನ್ಯೂಸ್‌ನ ಸಂಪಾದಕರಾಗಿರುವ ಸುರೇಶ್ ಚವ್ಹಾಂಕೆ ಅವರ ಹೆಸರನ್ನೂ ಈ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

3 ಎಫ್‌ಐಆರ್ ದಾಖಲು
ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಮೊದಲ ಎಫ್‌ಐಆರ್ ದಾಖಲಾಗಿದ್ದು, ಕಾರ್ಯಕ್ರಮದ ಆಯೋಜಕ ಪ್ರೀತ್ ಸಿಂಗ್ ವಿರುದ್ಧ ಈ ಎಫ್‌ಐಆರ್ ದಾಖಲಾಗಿದೆ. ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಎರಡನೇ ಎಫ್‌ಐಆರ್ ದಾಖಲಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಾರಿ ತಪ್ಪಿಸುವ ಪ್ರಚೋದನಕಾರಿ ಭಾಷಣಕ್ಕಾಗಿ ಮೂರನೇ ಎಫ್‌ಐಆರ್ ದಾಖಲಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ಕೋರಲಾಗಿತ್ತು ಆದರೆ ಅದಕ್ಕೆ ಅನುಮತಿ ನೀಡಲಾಗಿಲ್ಲ. ಆದರೂ ಅನುಮತಿಯಿಲ್ಲದೆ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು. ಪ್ರಚೋದನಕಾರಿ ಭಾಷಣ ಮಾಡಿದ ಯತಿ ನರಸಿಂಹಾನಂದ ಮತ್ತು ಸುರೇಶ್ ಚವ್ಹಾಂಕೆ ವಿರುದ್ಧ ಮುಖರ್ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಹಿಂದೂಗಳು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು' ಎಂದು ಯತಿ ಕರೆ
ಕಳೆದ ತಿಂಗಳು ಹರಿದ್ವಾರದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಧಾರ್ಮಿಕ ಮುಖಂಡರಲ್ಲಿ ಒಬ್ಬರಾದ ಯತಿ ನರಸಿಂಹಾನಂದ್ ಅವರನ್ನು ಜನವರಿ 16ರಂದು ಶನಿವಾರ ಬಂಧಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಹರಿದ್ವಾರದ ಕಾರ್ಯಕ್ರಮದಲ್ಲಿ ಮಾಡಿದ ದ್ವೇಷ ಭಾಷಣದ ವಿಡಿಯೋಗಳ ವಿರುದ್ಧ ಅನೇಕರ ವಿರೋಧ ವ್ಯಕ್ತವಾಗಿತ್ತು. ಇದು ಮಾಜಿ ಮಿಲಿಟರಿ ಮುಖ್ಯಸ್ಥರು, ನಿವೃತ್ತ ನ್ಯಾಯಾಧೀಶರು, ಕಾರ್ಯಕರ್ತರು ಮತ್ತು ಅಂತಾರಾಷ್ಟ್ರೀಯ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಅವರಿಂದಲೂ ತೀವ್ರ ಟೀಕೆಗೆ ಗುರಿಯಾಗಿತ್ತು. ಯತಿ ನರಸಿಂಹಾನಂದ್ ಅವರು ಕೂಡಲೇ ಕ್ಷಮೆ ಯಾಚಿಸುವಂತೆ ಒತ್ತಡಗಳನ್ನು ಹೇರಲಾಗಿತ್ತು. ಎಫ್‌ಐಆರ್ ದಾಖಲಿಸಿ ಯತಿ ಅವರನ್ನು ಬಂಧಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಅವರು ಜಾಮೀನನ ಮೇಲೆ ಹೊರಬಂದಿದ್ದರು. ನಿನ್ನೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.












Click it and Unblock the Notifications