ದೆಹಲಿಯಲ್ಲಿ ಹೀನಾಮಾನ ಸೋಲಿನ ನಂತರವೂ ಹಿಗ್ಗುವುದೇಕೆ ಕಾಂಗ್ರೆಸ್?
ನವದೆಹಲಿ, ಫೆಬ್ರವರಿ.12: ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಶೂನ್ಯ ಸುತ್ತಿದರೂ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೇನೂ ಕೊರತೆಯಿಲ್ಲ. ಕಾಂಗ್ರೆಸ್ ಶೂನ್ಯ ಸುತ್ತಿದ್ದ ದುಖಃದ ಬದಲು ಬಿಜೆಪಿಗೆ ಅಧಿಕಾರ ಸಿಗಲಿಲ್ಲ ಎಂಬ ಸಂತೋಷವೇ ಹೆಚ್ಚಾದಂತೆ ಗೋಚರಿಸುತ್ತಿದೆ.
ದೆಹಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ಕಾಂಗ್ರೆಸ್ ನಾಯಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ನವದೆಹಲಿಯಲ್ಲಿ ಪಾತಾಳಕ್ಕೆ ಕುಸಿದ ಕಾಂಗ್ರೆಸ್ ಪರಿಸ್ಥಿತಿಯನ್ನು ಸುಧಾರಿಸುವುದನ್ನು ಬಿಟ್ಟು ಆಮ್ ಆದ್ಮಿ ಪಕ್ಷದ ಗೆಲುವನ್ನು ಕಾಂಗ್ರೆಸ್ ನ ಗೆಲುವಿನಂತೆ ನಮ್ಮ ಪಕ್ಷದ ನಾಯಕರೇ ಸಂಭ್ರಮಿಸುತ್ತಿದ್ದಾರಲ್ಲ ಎಂದು ಶರ್ಮಿಷ್ಟಾ ಮುಖರ್ಜಿ ಟ್ವೀಟ್ ಮಾಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಚಿದಂಬರಂ ಟ್ವೀಟ್ ಗೆ ಗರಂ:
ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಸೋಲಿಸುವುದಕ್ಕೆ ಹೊರಗುತ್ತಿಗೆ ಪಡೆದುಕೊಂಡಿದ್ದಾರಾ ಎಂದು ಶರ್ಮಿಷ್ಟಾ ಮುಖರ್ಜಿ ಪ್ರಶ್ನೆ ಮಾಡಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಟ್ವೀಟ್ ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸೋಲು ನಮ್ಮ ಪಕ್ಷದ ನಾಯಕರ ಕಣ್ಣಿಗೇ ಕಾಣುತ್ತಿಲ್ಲವಾ. ಆಪ್ ಗೆಲುವನ್ನು ಹೀಗೆ ಸಂಭ್ರಮಿಸುತ್ತಿರುವುದು ಏಕೆ. ನಿರಂತರವಾಗಿ ಎರಡನೇ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಅತಿದೊಡ್ಡ ಪಕ್ಷವೊಂದು ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ಸೋತಿರುವಾಗ ಈ ಬಗ್ಗೆ ನಮ್ಮ ಪಕ್ಷದ ನಾಯಕರೇ ಯೋಚಿಸದಿರುವುದು ಏಕೆ ಎಂದು ಶರ್ಮಿಷ್ಟಾ ಪ್ರಶ್ನೆ ಮಾಡಿದ್ದಾರೆ.

ಆಪ್ ಗೆ ಶುಭಾಶಯ ಕೋರಿದ್ದ ಪಿ. ಚಿದಂಬರಂ:
ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದ್ದರು. ದೆಹಲಿಯಲ್ಲಿ ಆಪ್ ಭರ್ಜರಿ ಗೆಲುವು ದಾಖಲಿಸಿದೆ. ಧ್ರುವೀಕರಣ, ವಿಭಜಕ ಮತ್ತು ಒಡೆದು ಆಳುವಂತಾ ಅಪಾಯಕಾರಿ ನೀತಿಯನ್ನು ಪಾಲಿಸುತ್ತಿರುವ ಬಿಜೆಪಿಗೆ ದೆಹಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು 2021-2022ರಲ್ಲಿ ಎದುರಾಗುವ ಎಲ್ಲ ರಾಜ್ಯಗಳ ಚುನಾವಣೆಗೂ ಉದಾಹರಣೆಯಾಗಬೇಕು ಎಂದು ಚಿದಂಬರಂ ಟ್ವೀಟ್ ಮಾಡಿದ್ದರು.












Click it and Unblock the Notifications