ರಾಹುಲ್ ಗಾಂಧಿ ಒಬ್ಬ ಸಲಿಂಗಕಾಮಿ ಎಂದು ಕೇಳಿದ್ದೇವೆ: ಸ್ವಾಮಿ ಚಕ್ರಪಾಣಿ
ನವದೆಹಲಿ, ಜನವರಿ 3: ವೀರ್ ಸಾವರ್ಕರ್ ಅವರಿಗೂ ನಾಥೂರಾಮ್ ಗೋಡ್ಸೆಗೂ ದೈಹಿಕ ಸಂಪರ್ಕವಿತ್ತು ಎಂದು ಕಾಂಗ್ರೆಸ್ ಸೇವಾ ದಳ ಬಿಡುಗಡೆ ಮಾಡಿರುವ ಕಿರು ಪುಸ್ತಕದಲ್ಲಿ ಪ್ರಕಟಿಸಿರುವುದಕ್ಕೆ ಹರಿಹಾಯ್ದಿರುವ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಸಲಿಂಗಕಾಮಿ ಎಂಬುದನ್ನು ನಾವು ಕೇಳಿದ್ದೇವೆ ಎಂದಿದ್ದಾರೆ.
ಸಾವರ್ಕರ್ ಮತ್ತು ಗೋಡ್ಸೆ ನಡುವೆ ದೈಹಿಕ ಸಂಪರ್ಕವಿತ್ತು ಎಂಬ ಆರೋಪವೇ ಹಾಸ್ಯಾಸ್ಪದ ಎಂದು ಸ್ವಾಮಿ ಚಕ್ರಪಾಣಿ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ.
'ಇದೇ ರೀತಿ ರಾಹುಲ್ ಗಾಂಧಿ ಒಬ್ಬ ಸಲಿಂಗಕಾಮಿ ಎಂಬ ಹೇಳಿಕೆಯನ್ನೂ ನಾವು ಕೇಳಿದ್ದೇವೆ' ಎಂದು ಸ್ವಾಮಿ ಹೇಳಿದ್ದಾರೆ.

'ವೀರ್ ಸಾವರ್ಕರ್ ಕಿತನೇ ವೀರ್' ಎಂಬ ಕಿರು ಪುಸ್ತಕವನ್ನು ಕಾಂಗ್ರೆಸ್ ಸೇವಾ ದಳದ ಹತ್ತು ದಿನಗಳ ಶಿಬಿರದ ವೇಲೆ ವಿತರಿಸಲಾಗಿತ್ತು. ಗೋಡ್ಸೆ ತನ್ನ ಬ್ರಹ್ಮಚರ್ಯ ಸ್ವೀಕರಿಸಿದ ಅವಧಿಯಿಂದ ದೈಹಿಕ ಸಂಪರ್ಕ ಹೊಂದಿದ್ದ ವಿವರಗಳು ಲಭ್ಯವಾಗಿವೆ. ಅವರದು ಸಲಿಂಗಕಾಮವಾಗಿತ್ತು. ಅವರ ರಾಜಕೀಯ ಗುರು ಸಾವರ್ಕರ್ ಅವರೇ ಗೋಡ್ಸೆಯ ಸಂಗಾತಿಯಾಗಿದ್ದರು' ಎಂದು ಅದರಲ್ಲಿ ಬರೆಯಲಾಗಿದೆ.
ಈ ಪುಸ್ತಕವು ಭಾರಿ ವಿವಾದ ಸೃಷ್ಟಿಸಿದೆ. ತನಗೆ ಸಿಕ್ಕಿರುವ ಪುರಾವೆಗಳ ಆಧಾರದಲ್ಲಿ ಲೇಖಕರು ಈ ಬರಹ ಬರೆದಿದ್ದಾರೆ. ಆದರೆ ಅವರು ಸಲಿಂಗಕಾಮಿ ಆಗಿದ್ದರೇ ಅಥವಾ ಅಲ್ಲವೇ ಎಂಬುದು ನಮಗೆ ಮುಖ್ಯವಲ್ಲ. ಇಂದು ನಮ್ಮ ದೇಶದಲ್ಲಿ ಪ್ರತಿಯಬ್ಬರೂ ಅವರದ್ದೇ ಆದ ಆದ್ಯತೆಯಲ್ಲಿ ಬದುಕುವ ಕಾನೂನಾತ್ಮಕ ಹಕ್ಕಿದೆ ಎಂದು ಕಾಂಗ್ರೆಸ್ ಸೇವಾ ದಳ ಮುಖ್ಯಸ್ಥ ಲಾಲ್ಜಿ ದೇಸಾಯಿ ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಶಿವಸೇನಾ ಕೂಡ ಈ ವಿವಾದಾತ್ಮಕ ಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 'ಸಾವರ್ಕರ್ ಅವರನ್ನು ಅವಮಾನಿಸುವ ಜನರ ಮಿದುಳನ್ನು ಮೊದಲು ಪರೀಕ್ಷಿಸಬೇಕು' ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
'ಸಾವರ್ಕರ್ ಒಬ್ಬ ಮಹಾನ್ ವ್ಯಕ್ತಿ. ಮತ್ತು ಅವರು ಎಂದೆಂದಿಗೂ ಮಹಾನ್ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಒಂದು ವರ್ಗ ಅವರ ವಿರುದ್ಧ ಹೇಳಿಕೆ ನೀಡುತ್ತಲೇ ಇರುತ್ತದೆ. ಇದು ಅವರ ಮನಸ್ಸಿನಲ್ಲಿರುವ ಕೊಳಕನ್ನು ತೋರಿಸುತ್ತದೆ' ಎಂದು ಕಿಡಿಕಾರಿದ್ದಾರೆ.












Click it and Unblock the Notifications