ಹುಟ್ಟುಹಬ್ಬದ ಮರುದಿನವೇ ಕಾಂಗ್ರೆಸ್‌ನ ಹಿರಿಯ ನಾಯಕ ಮೋತಿಲಾಲ್ ವೋರಾ ನಿಧನ
ನವದೆಹಲಿ, ಡಿಸೆಂಬರ್ 21: ಭಾನುವಾರವಷ್ಟೇ ತಮ್ಮ 93ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮೋತಿಲಾಲ್ ವೋರಾ ಅವರು ಸೋಮವಾರ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ನಿಧನರಾದರು.
ಅಕ್ಟೋಬರ್‌ನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ ಮೋತಿಲಾಲ್ ವೋರಾ ಅವರು ಸೋಂಕಿನಿಂದ ಚೇತರಿಸಿಕೊಂಡು ಅ. 16ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಡಿ. 19ರಂದು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದ ಅವರನ್ನು ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವರ್ಷದ ಏಪ್ರಿಲ್‌ವರೆಗೂ ಛತ್ತೀಸಗಡದಿಂದ ರಾಜ್ಯಸಭೆ ಸದಸ್ಯರಾಗಿದ್ದ ಅವರು, ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷ ಸೋನಿಯಾ ಗಾಂಧಿ ಇತ್ತೀಚೆಗೆ ಪಕ್ಷದ ಪದಾಧಿಕಾರಿಗಳ ಬದಲಾವಣೆ ಮಾಡುವವರೆಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಳೆದ ಎರಡು ತಿಂಗಳಲ್ಲಿ ತರುಣ್ ಗೊಗೊಯ್ ಮತ್ತು ಅಹ್ಮದ್ ಪಟೇಲ್ ಅವರ ಬಳಿಕ ನಿಧನರಾದ ಕಾಂಗ್ರೆಸ್‌ನ ಮೂರನೇ ನಾಯಕ ಎನಿಸಿದ್ದಾರೆ.

ಗಾಂಧಿ ಕುಟುಂಬದ ನಿಷ್ಠಾವಂತರಾಗಿದ್ದ ವೋರಾ, ಎರಡು ವರ್ಷದ ಹಿಂದೆ ಅಹ್ಮದ್ ಪಟೇಲ್ ಅವರಿಗೆ ಖಜಾಂಚಿ ಜವಾಬ್ದಾರಿ ನೀಡುವವರೆಗೂ ಅನೇಕ ವರ್ಷಗಳ ಕಾಲ ಆ ಸ್ಥಾನ ನಿಭಾಯಿಸಿದ್ದರು. ರಾಜ್ಯಸಭೆ ಸದಸ್ಯರಾಗಿ ಅನೇಕ ಅವಧಿ ಸೇವೆ ಸಲ್ಲಿಸಿದ್ದ ಅವರು, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರೂ ಆಗಿದ್ದರು.
1985ರ ಮಾರ್ಚ್ 13ರಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದರು. ಬಳಿಕ ಕೇಂದ್ರ ಸರ್ಕಾರವನ್ನು ಸೇರಿಕೊಳ್ಳಲು ಅವರು 1988ರ ಫೆ. 13ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್‌ನ ಹಿರಿಯ ನಾಯಕರ ಅಗಲುವಿಕೆಗೆ ಸಂತಾಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಅವರು ನೈಜ ಕಾಂಗ್ರೆಸ್ಸಿಗ ಮತ್ತು ಅದ್ಭುತ ಮಾನವೀಯ ವ್ಯಕ್ತಿ ಎಂದಿದ್ದಾರೆ. 'ವೋರಾ ಅವರು ನೈಜ ಕಾಂಗ್ರೆಸ್ಸಿಗ ಮತ್ತು ಅದ್ಭುತ ಮಾನವೀಯ ವ್ಯಕ್ತಿ. ಅವರನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳಲಿದ್ದೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications