ನೇಪಾಳದಲ್ಲಿ ಹೂಡಿಕೆ ಅವಕಾಶದ ಮಾಹಿತಿ ನೀಡಿದ ಅಮೆರಿಕ
ನವದೆಹಲಿ, ಏಪ್ರಿಲ್ 3: ಅಮೆರಿಕ ಸರಕಾರದ ಏಜೆನ್ಸಿಯಾದ ದ ಮಿಲೇನಿಯಂ ಚಾಲೆಂಜ್ ಕಾರ್ಪೋರೇಷನ್ (ಎಂಸಿಸಿ) ನವದೆಹಲಿಯಲ್ಲಿ ಈಚೆಗೆ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಅದರಲ್ಲಿ ಭಾರತೀಯ ಹಾಗೂ ಭಾರತೀಯ ಮೂಲದ ಅಮೆರಿಕ ಸಂಸ್ಥೆಗಳಿಗೆ ಎಂಸಿಸಿ ಕಾರ್ಯಕ್ರಮದಡಿ ನೇಪಾಳದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ ತಿಳಿಸಲಾಯಿತು.
ಈ ಕಾರ್ಯಕ್ರಮದಡಿಯಲ್ಲಿ ಎಂಸಿಸಿ ನೇಪಾಳ ಸರಕಾರಕ್ಕೆ ಅನುದಾನ ನೀಡುತ್ತದೆ. ನೇಪಾಳದಲ್ಲಿನ ವಿದ್ಯುತ್ ಮತ್ತು ಸಾರಿಗೆ ವಲಯದಲ್ಲಿ ಬಂಡವಾಳ ಹೂಡಿ, ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿಗೆ ನೆರವು ನೀಡುವ ಉದ್ದೇಶ ಹೊಂದಿದೆ. 300 ಕಿಲೋಮೀಟರ್ ವಿಸ್ತೀರ್ಣದ 400 ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಲೈನ್ ನಿರ್ಮಿಸಲು ಹಣಕಾಸು ನೆರವು ನೀಡಲು ಎಂಸಿಸಿ ಯೋಜನೆ ರೂಪಿಸಿದೆ.

ಇದರ ಜತೆಗೆ ಮೂರು ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಮತ್ತು ತಾಂತ್ರಿಕ ನೆರವನ್ನೂ ನೀಡಲಾಗುತ್ತದೆ. ಇನ್ನು ಸಾರಿಗೆ ವಲಯದಲ್ಲಿ ರಸ್ತೆ ನಿರ್ವಹಣೆ ವ್ಯವಸ್ಥೆಗೆ ಮತ್ತು ತಾಂತ್ರಿಕ ನೆರವು ನೀಡುವ ಯೋಜನೆ ಸಹ ಹಾಕಿಕೊಳ್ಳಲಾಗಿದೆ. ಇದರಿಂದ ವ್ಯಾಪಾರ ಸಂಸ್ಥೆಗಳಿಗೆ ನೇಪಾಳದಲ್ಲಿ ಬಂಡವಾಳ ಹೂಡಲು ಅವಕಾಶ ಸಿಕ್ಕಂತಾಗುತ್ತದೆ.
ಎಲ್ಲ ಪ್ರಕ್ರಿಯೆಗಳು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ನೆಲೆಯಲ್ಲಿ ನಡೆಯುತ್ತವೆ. ಅಂದಹಾಗೆ ಮಾರುಕಟ್ಟೆಗೆ ಸಂಬಂಧಿಸಿದ ಈ ಕಾರ್ಯಕ್ರಮವನ್ನು ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹಾಗೂ ಎಫ್ ಐಸಿಸಿಐ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಮೂವತ್ತಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಿದ್ದವು.












Click it and Unblock the Notifications