ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರೇ ಗಿಫ್ಟ್ ತಗೋಬೇಡಿ, ಬಿಸಿನೆಸ್ ಮಾಡಬೇಡಿ

By Srinath
|
Google Oneindia Kannada News

ನವದೆಹಲಿ, ಜೂನ್ 11: ಪಾರದರ್ಶಕತೆಗೆ ಅಂಟಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಾರಿಗೆ ತಂದಿದ್ದ ಸಂಪುಟ ನೀತಿಸಂಹಿತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ತಮ್ಮ ಅವಧಿಯಲ್ಲೂ ಜಾರಿಗೊಳಿಸಿದ್ದಾರೆ.

'ನನ್ನ ಸಂಪುಟದ ಸಹೋದ್ಯೋಗಿಗಳೇ ಯಾರಿಂದಲೂ ಗಿಫ್ಟ್ ತಗೋಬೇಡಿ. ಹಾಗೆಯೇ, ವ್ಯಾಪಾರ/ವಹಿವಾಟುಗಳನ್ನೂ ಮಾಡಬೇಡಿ' ಎಂದು ಮೋದಿ ತಾಕೀತು ಮಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಮೊದಲು (ಜುಲೈ ಅಂತ್ಯದೊಳಗಾಗಿ) ನಿಮ್ಮಲ್ಲಿರುವ ಆಸ್ತಿ-ಪಾಸ್ತಿಯ ವಿವರಗಳನ್ನು ಸಲ್ಲಿಸಿಬಿಡಿ ಎಂದು ಸಚಿವರಿಗೆ ಪ್ರಧಾನಿ ಖಡಕ್ಕಾಗಿ ಸೂಚಿಸಿದ್ದಾರೆ.

ಈ ಸಂಬಂಧ ಗೃಹ ಸಚಿವಾಲಯವು ಸಚಿವರ ಮಾದರಿ ಸಂಹಿತೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅದರಂತೆ ಕೇಂದ್ರ ಸಚಿವರು ತಮ್ಮ ಆಸ್ತಿ, ಸಾಲ, ಪಾಲುದಾರಿಕೆ ಅಥವಾ ವ್ಯಾಪಾರ ವ್ಯವಹಾರಗಳ ವಿವರವನ್ನು ಪ್ರಧಾನಿಗೆ ಸಲ್ಲಿಸಬೇಕು. ಎಲ್ಲ ಸ್ಥಿರ, ಚರ ಆಸ್ತಿ; ಷೇರು ಮತ್ತು ಸಾಲಪತ್ರ; ತಾವು ಹಾಗೂ ಕುಟುಂಬ ಸದಸ್ಯರು ಹೊಂದಿರುವ ಆಭರಣ; ಸಾಲದ ವಿವರಗಳನ್ನು ಸಲ್ಲಿಸಬೇಕು.

ಅಂದಹಾಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿಯೂ ಇಂತಹದೊಂದು ನೀತಿ ಸಂಹಿತೆ ಜಾರಿಯಲ್ಲಿತ್ತು. ಆದರೆ ಅದು ಎಷ್ಟರಮಟ್ಟಿಗೆ ಜಾರಿಗೆಬಂತು? ಯಾವೆಲ್ಲಾ ಸಚಿವರು ತಮ್ಮ ಆಸ್ತಿಯನ್ನು ಘೋಷಿಸಿದರು ಎಂಬುದು ಇದುವರೆಗೂ ತಿಳಿದುಬಂದಿಲ್ಲ.

union-ministers-told-not-to-accept-gifts-no-business-interests

ಅಧಿಕಾರದಲ್ಲಿರುವ ಅವಧಿಯಲ್ಲಿ ಪ್ರತಿವರ್ಷ ಆಗಸ್ಟ್ 31ರ ಒಳಗೆ ಹಿಂದಿನ ಹಣಕಾಸು ವರ್ಷದ ಆಸ್ತಿ ವಿವರ ಸಲ್ಲಿಸುವುದೂ ಕಡ್ಡಾಯ ಮಾಡಲಾಗಿದೆ. ಈ ವಿವರಗಳ ಮೇಲೆ ಖುದ್ದು ಪ್ರಧಾನಿಯವರೇ ನಿಗಾ ವಹಿಸಲಿದ್ದಾರೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮುನ್ನ ಹೊಂದಿರುವ ಎಲ್ಲ ವ್ಯಾವಹಾರಿಕ ಸಂಪರ್ಕಗಳು ಮತ್ತು ಮಾಲೀಕತ್ವದಿಂದ ದೂರ ಸರಿಯುವಂತೆಯೂ ಮತ್ತು ಯಾವುದೇ ಹೊಸ ವಹಿವಾಟು ಅಥವಾ ಸಂಸ್ಥೆ ಆರಂಭಿಸದಂತೆ ಸಚಿವರುಗಳಿಗೆ ಸೂಚಿಸಲಾಗಿದೆ.

ಸಚಿವರ ಪತ್ನಿ (ಪತಿ) ಅಥವಾ ಕುಟುಂಬ ಸದಸ್ಯರು ಸರ್ಕಾರಕ್ಕೆ ಯಾವುದೇ ಸೇವೆ, ಸರಕು ಸಲ್ಲಿಸುವ ಸೇವೆಯಲ್ಲಿ ತೊಡಗಿಕೊಳ್ಳದಂತೆ ಹಾಗೂ ಸಚಿವರು ಸರ್ಕಾರದಿಂದ ಸ್ಥಿರಾಸ್ತಿ ಕೊಳ್ಳದಂತೆ, ಮಾರದಂತೆ ನಿರ್ದೇಶನ ನೀಡಲಾಗಿದೆ.

ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆಯೇ ಮಾಲೀಕತ್ವದ ಅಧಿಕಾರಿವನ್ನು ಪತಿ/ಪತ್ನಿ, ಕುಟುಂಬದ ಸದಸ್ಯರು, ಬಂಧು ಅಥವಾ ಸಹವರ್ತಿಗೆ ಹಸ್ತಾಂತರಿಸಿದ್ದರೆ ಅವರು ಮಾತ್ರ ವ್ಯವಹಾರ ಮುಂದುವರಿಸಿಕೊಂಡು ಹೋಗಲು ಅಡ್ಡಿ ಇಲ್ಲ.

ನೋಂದಾಯಿತ ಚಾರಿಟಿ ಸಂಸ್ಥೆ/ಸಮಾಜ, ಸಾರ್ವಜನಿಕ ಪ್ರಾಧಿಕಾರ ಗುರುತಿಸಿರುವ ಸಂಸ್ಥೆ, ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಬೇರಾವುದೇ ರೀತಿಯಲ್ಲೂ ನಿಧಿ ಸಂಗ್ರಹಣೆಯಲ್ಲಿ ತೊಡಗಬಾರದು. ಸಂಸ್ಥೆ, ಪಕ್ಷಗಳಿಗಾಗಿ ಸಂಗ್ರಹಿಸಿದ ನಿಧಿ ವೈಯಕ್ತಿಕವಾಗಿ ಸಚಿವರಿಗೆ ಸೇರುವಂತಿಲ್ಲ.

ಸಚಿವರು ಮತ್ತು ಕುಟುಂಬ ಸದಸ್ಯರು ಹತ್ತಿರದ ಸಂಬಂಧಿಗಳನ್ನು ಹೊರತುಪಡಿಸಿ ಬೇರೆಯವರಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ. ಅಧಿಕೃತ ಪ್ರವಾಸದಲ್ಲಿರುವಾಗ ಸರ್ಕಾರಿ ಅತಿಥಿಗೃಹ, ಸರ್ಕಾರಿ ಸಂಸ್ಥೆಗಳು ನಿರ್ವಹಿಸುವ ಹೊಟೇಲ್, ಮಾನ್ಯತೆ ಪಡೆದ ಹೊಟೇಲುಗಳಲ್ಲಿಯೇ ವಾಸ್ತವ್ಯ ಹೂಡಬೇಕು.

ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 5,000 ರೂ ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ಕೋಶ ಖಾನೆಗೆ ಒಪ್ಪಿಸಬೇಕು ಅಥವಾ ಸರಕಾರ ನಿಗದಿಪಡಿಸುವ ಮೌಲ್ಯ ನೀಡಿ ಅದನ್ನೇ ಖರೀದಿಸಬಹುದು.

English summary
Union Ministers told by PM Narendra Modi not to accept gifts- no business interests. The Home Ministry has reissued the code of conduct for ministers that was introduced by former prime minister Manmohan Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X