ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ: ಸಿಎಂ ಬೊಮ್ಮಾಯಿ
ನವದೆಹಲಿ ಅಕ್ಟೋಬರ್ 8: " ಕರ್ನಾಟಕದಲ್ಲಿ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆ ನನ್ನ ನೇತೃತ್ವದಲ್ಲಿಯೇ ನಡೆಯುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್ಕಲೇವ್‌ನಲ್ಲಿ ಅವರು ಮಾತನಾಡಿದರು. "ನನ್ನ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ನಡೆಯಲಿದೆ. ಎಷ್ಟು ಅವಧಿಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಮುಖ್ಯವಲ್ಲ. ಈ ಅವಧಿಯಲ್ಲಿ ಏನು ಮಾಡುತ್ತೇನೆ ಎಂಬುದು ಮುಖ್ಯ." ಎಂದರು.
ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಹಲವರ ಹುಬ್ಬೇರಿಸಿತ್ತು. ಬಳಿಕ ಪಕ್ಷದ ನಿಷ್ಟಾವಂತರಾದ ನಳಿನ್ ಕುಮಾರ್ ಕಟೀಲ್, ಜಗದಿಶ ಶೆಟ್ಟರ್, ಕೆ.ಎಸ್ ಈಶ್ವರಪ್ಪ ಅವರು ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ಮಾತ್ರ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಈಗ ದೆಹಲಿಯಲ್ಲಿ ನನ್ನ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗೆ ನಾನೇ ಸಾರಥಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

"ಸಿಕ್ಕಿರುವ ಈ ಅವಧಿಯಲ್ಲಿ ಉತ್ತಮ ಆಡಳಿತ ನೀಡುವುದರ ಜೊತೆಗೆ ಮತ್ತೊಂದು ಅವಧಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಲಿಂಗಾಯತರಿಗೆ ಸೀಮಿತವಲ್ಲ:
"ಭಾರತೀಯ ಜನತಾ ಪಕ್ಷ ಈಗ ಕರ್ನಾಟಕದಲ್ಲಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಸಮಾಜದ ಎಲ್ಲ ವರ್ಗದವರಿಗೂ ತಲುಪಿ ಅವರ ಬೆಂಬಲವನ್ನು ಗಳಿಸಿರುವ ಪಕ್ಷವಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
"ಉತ್ತರ ಕರ್ನಾಟಕ ಭಾಗದಿಂದ ಹಲವಾರು ಜನ ಲಿಂಗಾಯತ ಸಮುದಾಯದವರು ಭಾರತೀಯ ಜನತಾ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿದ್ದಾರೆ. ಆದರೆ ಒಂದು ಸರ್ಕಾರ ಅಧಿಕಾರಕ್ಕೆ ಬರಬೇಕೆಂದರೆ ಎಸ್ಸಿ, ಎಸ್ಟಿ, ಒಕ್ಕಲಿಗ, ಹಿಂದುಳಿದ ವರ್ಗದವರ ಬೆಂಬಲಬೇಕು. ಈ ವರ್ಗದವರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಿಜೆಪಿ ಈಗ ಕರ್ನಾಟಕದಲ್ಲಿ ಸಮಾಜದ ಎಲ್ಲ ವರ್ಗದವರ ಪಕ್ಷವಾಗಿದೆ," ಎಂದು ಅವರು ಹೇಳಿದರು.
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಅವರು ಮುಂದಿನ ಜನಾಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರೊಬ್ಬ ಪ್ರಬಲ ನಾಯಕ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇದೇ ವೇಳೆ, "ನೀಟ್ ಪರೀಕ್ಷೆಗೆ ತಮಿಳುನಾಡು ಸರ್ಕಾರ ವಿರೋಧ ಮಾಡುತ್ತಿರುವುದು ಸರಿಯಲ್ಲ," ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ತಿಳಿಸಿದರು.












Click it and Unblock the Notifications