ನಿರ್ಭಯಾಳ ಸಹೋದರ ಪೈಲಟ್ ಆಗಲು ರಾಹುಲ್ ಕಾರಣ
ನವದೆಹಲಿ, ನವೆಂಬರ್ 02 : ಐದು ವರ್ಷಗಳ ಹಿಂದೆ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ತದನಂತರ ಹೋರಾಟ ನಡೆಸಿ ಸಿಂಗಪುರದಲ್ಲಿ ಸಾವಿಗೀಡಾದ 23 ವರ್ಷದ ನಿರ್ಭಯಾಳ ಸಹೋದರನೀಗ ಪೈಲಟ್!
ನಿರ್ಭಯಾಳ ಸಹೋದರ ಅಮನ್ (ಹೆಸರು ಬದಲಿಸಲಾಗಿದೆ) ಇದೀಗ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಲಿದ್ದಾನೆ. ಇದಕ್ಕೆ ಕಾರಣ ಯಾರು ಗೊತ್ತೆ? ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ! ತನ್ನ ಮಗ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಲು ರಾಹುಲ್ ಅವರೇ ಕಾರಣ ಎಂದು ನಿರ್ಭಯಾಳ ತಾಯಿ ಆಶಾ ದೇವಿ ಹೆಮ್ಮೆಯಿಂದ ಸ್ಮರಿಸುತ್ತಾರೆ.

ನನ್ನ ಮಗ ಪೈಲಟ್ ಆಗರು ರಾಹುಲ್ ಗಾಂಧಿ ಅವರೇ ನೇರ ಕಾರಣ ಎಂದು ಆಶಾ ದೇವಿ ಹೇಳುತ್ತಾರೆ. ಸಾವಿನ ವಿರುದ್ಧ ಹೋರಾಟ ನಡೆಸಿ ನಿರ್ಭಯಾ ಸಾವಿಗೀಡಾಗಿದ್ದಾಗ ಅಮನ್ ವಯಸ್ಸು ಕೇವಲ ಹದಿನೆಂಟು ಮಾತ್ರ. ಆತ ಆಗ 12ನೇ ತರಗತಿಯಲ್ಲಿ ಓದುತ್ತಿದ್ದ.
ಆಗ, ರಾಹುಲ್ ಗಾಂಧಿಯವರು, ಆ ಸಂಕಷ್ಟಮಯ ಸಮಯದಲ್ಲಿ ಮುಂದೆ ಏನಾದರೂ ಸಾಧಿಸು ಎಂದು ಅಮನ್ ನಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಅಮನ್ ನ ವಿದ್ಯಾಭ್ಯಾಸದ ಖರ್ಚುವೆಚ್ಚಗಳನ್ನು ಭರಿಸಿದ್ದಲ್ಲದೆ, ಅಮನ್ ಜೊತೆ ಆಗಾಗ ಫೋನಿನಲ್ಲಿ ಮಾತನಾಡಿ ಧೈರ್ಯ ತುಂಬುತ್ತಿದ್ದುದನ್ನು ಆಶಾದೇವಿ ಸ್ಮರಿಸುತ್ತಾರೆ.
ನಿರ್ಭಯಾ ಸಾವಿಗೀಡಾಗಿದ್ದಾಗ ಅಮನ್ ಇನ್ನು ಹುಡುಗ. ಮಿಲಿಟರ್ ಸೇರಿವ ಆಸೆಯನ್ನು ಇಟ್ಟುಕೊಂಡಿದ್ದ. ಆದರೆ, ನಿರ್ಭಯಾಳ ಸಾವಿನಿಂದ ಆತ ಜರ್ಜರಿತನಾಗಿದ್ದ. ಮುಂದೆ ಏನು ಮಾಡಬೇಕೆಂದು ನಿರ್ಧರಿಸಲಾಗದ ಸ್ಥಿತಿಯಲ್ಲಿದ್ದ. ಆಗ, ತಾವೇ ಸ್ವತಃ ನಿಂತು ಅಮನ್ ನಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದವರು ರಾಹುಲ್ ಗಾಂಧಿ.
ಆತನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವುದಲ್ಲದೆ, ಆತನ ವಿದ್ಯಾಭ್ಯಾಸ ಮುಂದುವರಿಯುತ್ತಿದ್ದಂತೆ, ಮಿಲಿಟರಿಯಲ್ಲಿ ಪೈಲಟ್ ಆಗಿ ತರಬೇತಿ ಪಡೆದುಕೊಳ್ಳಲು ರಾಹುಲ್ ಗಾಂಧಿ ಸಹಾಯ ಮಾಡಿದ್ದಾರೆ. 2013ರಲ್ಲಿ ಪಿಯುಸಿ ಮುಗಿಸಿದ ಮೇಲ್ ರಾಯ್ ಬರೇಲಿಯಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟರು.
ಆ ಹದಿನೆಂಟು ತಿಂಗಳ ಟ್ರೈನಿಂಗ್ ಕೂಡ ಸುಲಭದ್ದಾಗಿರಲಿಲ್ಲ. ಆರಂಭದಲ್ಲಿ ಅಮನ್ ತುಂಬಾ ಕಷ್ಟಪಟ್ಟ. ನಿರ್ಭಯಾಳ ಪ್ರಕರಣದ ತನಿಖೆ ಆತನ ಓದಿಗೆ ತಡೆಯೊಡ್ಡುತ್ತಿತ್ತು. ಆದರೆ, ಹಿಡಿದ ಕೆಲಸವನ್ನು ಬಿಡಬೇಡ ಎಂದು ಅಮನ್ ನಲ್ಲಿ ಛಲ ತುಂಬಿದವರು ರಾಹುಲ್ ಗಾಂಧಿಯವರು. ಜೊತೆಗೆ ಪ್ರಿಯಾಂಕಾ ಗಾಂಧಿ ವದ್ರಾ ಅವರು ಕೂಡ ಅಮನ್ ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರಂತೆ.
ನಿರ್ಭಯಾಳ ಮತ್ತೊಬ್ಬ ತಮ್ಮ ಪುಣೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ನಿರ್ಭಯಾಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಆಕೆಯ ಕರುಳನ್ನು ಬಗೆದಿದ್ದ ದುರುಳರಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದರೂ, ಕಾರಣಾಂತರಗಳಿಂದ ಶಿಕ್ಷೆ ವಿಧಿಸುವುದು ವಿಳಂಬವಾಗುತ್ತಿದೆ. ಆರು ಜನರಲ್ಲಿ ಒಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.












Click it and Unblock the Notifications