ಉನ್ನಾವೋ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್ ಮಹತ್ವದ ಆದೇಶ
ನವದೆಹಲಿ, ಆಗಸ್ಟ್ 1: ದೇಶವನ್ನೇ ತಲ್ಲಣಗೊಳಿಸಿರುವ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಪ್ರಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.
ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಂತ್ರಸ್ತೆಗೆ ಮಧ್ಯಂತರ ಪರಿಹಾರ ಒದಗಿಸುವ ಕುರಿತಾದ ಪ್ರಶ್ನೆಯನ್ನು ಕೂಡ ನಾವು ಪರಿಗಣಿಸುತ್ತಿದ್ದೇವೆ ಎಂದು ನ್ಯಾಯಾಲಯ, ಆಕೆಗೆ ಉತ್ತರ ಪ್ರದೇಶ ಸರ್ಕಾರವು 25 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು ಎಂದು ಸೂಚಿಸಿತು.
'ಸಂತ್ರಸ್ತೆ, ಆಕೆಯ ವಕೀಲರು, ಸಂತ್ರಸ್ತೆಯ ತಾಯಿ, ಆಕೆಯ ನಾಲ್ವರು ಸಹೋದರ/ಸಹೋದರಿಯರು, ಆಕೆಯ ಚಿಕ್ಕಪ್ಪ ಮತ್ತು ಉನ್ನಾವೋದಲ್ಲಿರುವ ಅವರ ಆಪ್ತ ಕುಟುಂಬಸ್ಥರಿಗೆ ಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು ಎಂದು ಸೂಚಿಸುತ್ತಿದ್ದೇವೆ' ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಹೇಳಿದರು. ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಸಿಆರ್‌ಪಿಎಫ್ ತಂಡದ ಭದ್ರತೆಗೆ ನಿರ್ದೇಶಿಸಲಾಗಿದೆ.

ಅಲ್ಲದೆ, ರಾಯ್‌ಬರೇಲಿಯಲ್ಲಿ ನಡೆದ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದ ಕುರಿತಂತೆ ಇನ್ನು ಏಳು ದಿನಗಳಲ್ಲಿ ಸಿಬಿಐ ತನಿಖೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿತು. ಈ ಘಟನೆಗೆ ಸಂಬಂಧಿಸಿದ ಐದು ಇತರೆ ಪ್ರಕರಣಗಳನ್ನು ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿತು. ಪ್ರತಿದಿನವೂ ಈ ಪ್ರಕರಣದ ವಿಚಾರಣೆ ನಡೆಯಬೇಕು. 45 ದಿನಗಳ ಒಳಗೆ ವಿಚಾರಣೆ ಮುಗಿಸಬೇಕು ಎಂದೂ ಸೂಚಿಸಿದೆ.












Click it and Unblock the Notifications